ಸುದ್ದಿ ಸಂಕ್ಷೇಪ
ಬಿಜೆಪಿ ಘಟಕಕ್ಕೆ ನೇಮಕ
ಧಾರವಾಡ: ಗ್ರಾಮಾಂತರ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾಗಿ ತಾಲೂಕಿನ ಮಂಗಳಗಟ್ಟಿ ಗ್ರಾಮದ ಫಕ್ಕೀರಪ್ಪ ಸಬರದ ನೇಮಕವಾಗಿದ್ದಾರೆ. ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮಲ್ಲನಗೌಡ ಪಾಟೀಲ ಈ ನೇಮಕ ಮಾಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಕ್ರಮ ಮದ್ಯ: ಓರ್ವ ವಶ
ಧಾರವಾಡ: ಅಳ್ನಾವರ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಭುನಗರ ಹೊನ್ನಾಪುರ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಓರ್ವನನ್ನು ಬುಧವಾರ ಬಂಧಿಸಲಾಗಿದೆ. ಗ್ರಾಮದ ಸಚಿನ ಬಾಳಪ್ಪ ಕಡಬಡಿ ಬಂಧಿತ ಆರೋಪಿ. ಈತನಿಂದ ರು. 17,550 ನಗದು, ರು. 6725 ಮೌಲ್ಯದ ವಿವಿಧ ಕಂಪನಿಯ ಮದ್ಯದ ಬಾಟಲ್ ಹಾಗೂ ಪಾಕೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ಲೋಕೇಶಕುಮಾರ, ಡಿಎಸ್ಪಿ ರಾಜೀವ ಬನಹಟ್ಟಿ ಮಾರ್ಗದರ್ಶನದಲ್ಲಿ ಪಿಎಸ್‌ಐಗಳಾದ ಮುರುಘೇಶ ಚನ್ನಣ್ಣವರ, ಸಮೀರ ಮುಲ್ಲಾ ದಾಳಿಯಲ್ಲಿದ್ದರು.
ಇಬ್ಬರು ವಂಚಕರ ಬಂಧನ
ಧಾರವಾಡ: ಚಿನ್ನ ತೊಳೆದು ಕೊಡುವ ನೆಪದಲ್ಲಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಬಿಹಾರ ಮೂಲದ ಇಬ್ಬರನ್ನು ಗ್ರಾಮೀಣ ಠಾಣಾ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಬಿಹಾರದ ಜಾಡಿಯಾದವರಾದ ಬಿತ್ತೋಕುಮಾರ ರಾಜೇಶ್ವರ ಮತ್ತು ಸಂತೋಷಕುಮಾರ ಶ್ರೀಭಾಗವತ ಬಂಧಿತರು. ಕಳೆದ ಸೋಮವಾರ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ಸಾವಿತ್ರಿ ಚಿವುಟಗುಂಡಿ ಎಂಬ ಮಹಿಳೆಗೆ ಚಿನ್ನ ತೊಳೆದುಕೊಡುವುದಾಗಿ ವಂಚಿಸಲು ಯತ್ನಿಸಿ ಪರಾರಿಯಾಗಿದ್ದರು. ಈ ಕುರಿತು ತನಿಖೆ ನಡೆಸಿದ ಗ್ರಾಮೀಣ ಠಾಣಾ ಹೆಚ್ಚುವರಿ ಪಿಎಸ್‌ಐ ಶೋಭಾ ಭೋಸ್ಲೆ ಮತ್ತು ಸಿಬ್ಬಂದಿ ಬೆಳಗಾವಿ ರಸ್ತೆಯಲ್ಲಿರುವ ಬಸವ ಕಾಲನಿಯಲ್ಲಿ ಮಂಗಳವಾರ ರಾತ್ರಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ವಜ್ರ ನೀಡುವುದಾಗಿ ವಂಚನೆ: ದೂರು ದಾಖಲು
ಹುಬ್ಬಳ್ಳಿ: ವಜ್ರದ ವ್ಯಾಪಾರಿಗಳೆಂದು ನಂಬಿಸಿ ವ್ಯಕ್ತಿಯೊಬ್ಬರಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪನಗರ ಠಾಣೆ ಪೊಲೀಸರು ಮುಂಬೈ ಮೂಲದ ಇಬ್ಬರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಂಬೈ ಮೂಲದ ದೇವೇಂದ್ರ ಶಹಾ ಹಾಗೂ ರಾಜೇಶ ನಾಯರ್ ಎಂಬುವರ ವಿರುದ್ಧ ನಗರದ ಪ್ರಕಾಶ ಸಿ.ಕೆ. ಎಂಬುವರು ದೂರು ದಾಖಲಿಸಿದ್ದಾರೆ. ಶಹಾ ಹಾಗೂ ನಾಯರ್ ಎಂಬಿಬ್ಬರು ತಾವು ವಜ್ರದ ವ್ಯಾಪಾರಿಗಳಾಗಿದ್ದು ರು. 15 ಲಕ್ಷಗಳನ್ನು ನೀಡಿದ್ದಲ್ಲಿ ರು. 25 ಲಕ್ಷದ ವಜ್ರಗಳನ್ನು ನೀಡುವುದಾಗಿ ನಂಬಿಸಿ ತಮ್ಮಿಂದ ತಲಾ ರು. 5 ಲಕ್ಷಗಳಂತೆ ಮೂರು ಬಾರಿ ಪಡೆದು ವಜ್ರವನ್ನು ಕೊಡದೆ ಹಣವನ್ನು ಮರಳಿಸದೇ ವಂಚಿಸಿದ್ದಾರೆ ಎಂದೂ ಪ್ರಕಾಶ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತಂತೆ ಉಪನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪ್ರವೇಶ ಶುಲ್ಕ ವಿನಾಯ್ತಿ ನೀಡಿ: ಪ್ರತಿಭಟನೆ
ಧಾರವಾಡ: ಧಾರವಾಡ-ಅಳ್ನವಾರ- ರಾಮನಗರ ರಾಜ್ಯ ಹೆದ್ದಾರಿಯಲ್ಲಿ ಇತ್ತೀಚೆಗೆ ಸ್ಥಾಪಿಸಲಾದ ಟೋಲ್‌ಗೇಟ್‌ನಲ್ಲಿ ಸ್ಥಳೀಯ ವಾಹನಗಳಿಗೆ ಸಂಪೂರ್ಣ ವಿನಾಯ್ತಿ ನೀಡಬೇಕೆಂದು ಆಗ್ರಹಿಸಿ ಧಾರವಾಡ ತಾಲೂಕು ಸ್ಟೋನ್ ಕ್ರಷರ್ ಮತ್ತು ಕಲ್ಲು ಗಣಿಗಾರಿಕೆದಾರರ ಸಂಘದಿಂದ ಪ್ರತಿಭಟಿಸಲಾಯಿತು.
ಟೋಲ್‌ಗೇಟ್ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಂಘಟನೆ ಪದಾಧಿಕಾರಿಗಳು, ಈ ಹೆದ್ದಾರಿಗೆ ಮುಗದ, ಮಂಡಿಹಾಳ, ನಾಗಲಾವಿ, ಕಲಗೇರಿ ಸೇರಿದಂತೆ ಹಲವು ಗ್ರಾಮಗಳು ಬರುತ್ತಿದ್ದು, ಈ ಭಾಗದಲ್ಲಿ ಸ್ಟೋನ್ ಕ್ರಷರ್, ಇಟ್ಟಿಗೆ ಹಾಗೂ ಇನ್ನಿತರೆ ಉದ್ದಿಮೆಗಳಿವೆ. ಧಾರವಾಡ, ಅಳ್ನಾವರ ಹಾಗೂ ರಾಷ್ಟ್ರೀಯ ಹೆದ್ದಾರಿ 4ಕ್ಕೆ ನಿತ್ಯ ವಾಹನಗಳ ಸಂಪರ್ಕ ಇರುತ್ತದೆ. ಇದೀಗ ಟೋಲ್‌ಗೇಟ್‌ನಲ್ಲಿ ಪ್ರತಿ ಬಾರಿ ಶುಲ್ಕ ಭರಿಸುವುದರಿಂದ ಉದ್ದಿಮೆದಾರರಿಗೆ, ವಾಹನಗಳ ಮಾಲೀಕರಿಗೆ ಹಾಗೂ ಸ್ಥಳೀಯರಿಗೂ ತುಂಬ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ವಾಹನಗಳಿಗೆ ಸಂಪೂರ್ಣ ರಿಯಾಯ್ತಿ ನೀಡಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಕಲ್ಲಪ್ಪ ಹಟ್ಟಿ, ಶಿವಾಜಿ ಜಾಧವ, ನಂದೀಶ ತಾಳೂರ, ಫಾರೂಕ ಸೌದಾಗರ ಇದ್ದರು.