ಹೈಟೆಕ್ ಬಸ್ಗಳಿಗೆ ಶೆಟ್ಟರ್ ಚಾಲನೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಡಿ. 18
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಆರಂಭಿಸಿರುವ ಅತ್ಯಾಧುನಿಕ ಸೌಲಭ್ಯಗಳುಳ್ಳ 6 ಬಸ್ಗಳಿಗೆ ಬುಧವಾರ ಬೆಳಗ್ಗೆ ಮಾಜಿ ಸಿಎಂ ಜಗದೀಶ ಶೆಟ್ಟರ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಶೆಟ್ಟರ್, ಈ ಹೊಸ ಬಸ್ಗಳ ಸೇವೆ ಹುಬ್ಬಳ್ಳಿ-ಧಾರವಾಡದ ಜನತೆಗೆ ಲಭ್ಯವಾಗುತ್ತಿರುವುದು ಸಂತಸ ತಂದಿದೆ ಎಂದರು.
ಮಹಾನಗರ ಮಾತ್ರವಲ್ಲದೇ ಅನ್ಯ ಪ್ರದೇಶಗಳಿಂದ ಇಲ್ಲಿ ಬರುವ ಪ್ರಯಾಣಿಕರಿಗೆ ಈ ಬಸ್ಗಳಿಂದ ಸಾಕಷ್ಟು ಅನುಕೂಲವಾಗಲಿದ್ದು ಬಸ್ಗಳಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಬರಲು ಎಲ್ಲ ಕೈಜೋಡಿಸಬೇಕೆಂದರು.
ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಹುಬ್ಬಳ್ಳಿ-ಧಾರವಾಡ ಮಹಾನಗರದ ಅಭಿವೃದ್ಧಿಗೆ ಇಂತಹ ಬಸ್ಗಳ ಸೇವೆ ಅವಶ್ಯಕವಾಗಿದೆ. ಅತ್ಯಾಧುನಿಕ ಸೌಲಭ್ಯಗಳುಳ್ಳ ಬಸ್ಗಳ ಸೇವೆ ಬೆಂಗಳೂರಿಗೆ ಮಾತ್ರ ಸಿಮೀತಗೊಳಿಸುವುದು ಸೂಕ್ತವಲ್ಲ. ಇದೀಗ ಅವಳಿನಗರದಲ್ಲಿ ಹೈಟೆಕ್ ಬಸ್ಗಳ ಸೇವೆ ಆರಂಭಿಸಿದ್ದು ನಿಜಕ್ಕೂ ಪ್ರಶಂಸನೀಯ ಎಂದು ಹೇಳಿದರು.
ಬಸ್ನಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಲಾಗಿದ್ದು ಪ್ರಯಾಣಿಕರಿಗೆ ಆಯಾ ನಿಲ್ದಾಣಗಳ ಬಗ್ಗೆ ಮಾಹಿತಿ ನೀಡಲಿದೆ. ಅಲ್ಲದೇ, ಗ್ರಾಹಕರು ವಾಹನದಲ್ಲಿ ಹತ್ತುವ ಹಾಗೂ ಇಳಿಯುವ ವೇಳೆ ಅಟೋಮೆಟಿಕ್ ಆಗಿ ಬಾಗಿಲುಗಳು ತೆರೆದುಕೊಳ್ಳಲಿದ್ದು ಪ್ರಯಾಣಿಕರಿಗೆ ಸಾಕಷ್ಟು ಸಂತಸ ನೀಡಲಿವೆ.
ಹೈಟೆಕ್ ಬಸ್ಗಳಿಗೆ ಚಾಲನೆ ನೀಡಿದ ನಂತರ ಮಾಜಿ ಸಿಎಂ ಶೆಟ್ಟರ್, ಹೊರಟ್ಟಿ ಸೇರಿದಂತೆ ಮತ್ತಿತರ ಗಣ್ಯರು ವಾಹನದಲ್ಲಿ ಪ್ರಯಾಣಿಸಿದರು.
ಈ ಬಸ್ಗಳು ಪ್ರತಿನಿತ್ಯ ಬೆಳಗ್ಗೆ 5 ರಿಂದ ರಾತ್ರಿ 12ರವರೆಗೆ ಹುಬ್ಬಳ್ಳಿ-ಧಾರವಾಡ ಮಧ್ಯದಲ್ಲಿ ಸಂಚರಿಸಲಿವೆ. ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಉಮೇಶ ಕುಸುಗಲ್ ಮತ್ತಿತರರಿದ್ದರು.