ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

27ರಿಂದ ಬಿ.ವಿ. ಕಾರಂತ ರಾಷ್ಟ್ರೀಯ ನಾಟಕೋತ್ಸವ

Mainashree
Updated On : 21 Dec 2013, 11:30 am

ಕನ್ನಡಪ್ರಭ ವಾರ್ತೆ, ಧಾರವಾಡ, ಡಿ. 20
ಬಿ.ವಿ. ಕಾರಂತ ರಂಗ ಪ್ರತಿಷ್ಠಾನ ವತಿಯಿಂದ ಸೃಜನಾ ರಂಗಮಂದಿರದಲ್ಲಿ ಡಿ. 27ರಿಂದ 29ರ ವರೆಗೆ ಬಿ.ವಿ. ಕಾರಂತ ರಂಗ ನಮನ ರಾಷ್ಟ್ರೀಯ ನಾಟಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಮುಖ್ಯಸ್ಥ ಜಯರಾಮ ಪಾಟೀಲ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದಾಯ, ಅಭಿನಯ ಭಾರತಿ, ರಂಗಭೂಮಿ ಪುರೋಭಿವೃದ್ಧಿ ಸಮಿತಿ ಈ ನಾಟಕೋತ್ಸವಕ್ಕೆ ಸಹಕಾರ ಒದಗಿಸಿದ್ದು, ಒಂದು ಕನ್ನಡ ಹಾಗೂ ಎರಡು ಮರಾಠಿ ನಾಟಕಗಳು ಪ್ರದರ್ಶನಗೊಳ್ಳಲಿವೆ. ಡಿ. 27ರಂದು ಸಂಜೆ 6ಕ್ಕೆ ಸಾಹಿತಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ನಾಟಕೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ಡಿ. 29ರಂದು ಸಂಜೆ 6ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಕೃಷಿ ವಿವಿ ಪ್ರಭಾರಿ ಕುಲಪತಿ ಡಾ. ಎಚ್.ಎಸ್. ವಿಜಯಕುಮಾರ ಭಾಗವಹಿಸುತ್ತಾರೆ. ಅಲ್ಲದೇ ಪ್ರತಿ ದಿನ ಕಾರಂತರ ಭಾವಚಿತ್ರ ಮತ್ತು ನಾಟಕಗಳ ಭಿತ್ತಿ ಚಿತ್ರ ಪ್ರದರ್ಶನ ಸಹ ನಡೆಯಲಿದೆ ಎಂದರು.
27ರಂದು ಪ್ರಸನ್ ನಿರ್ದೇಶನದಲ್ಲಿ ಮಂಗಳೂರಿನ ತರಿಕಿಟ ಕಲಾ ಕಮ್ಮಟದಿಂದ ಮೆಕ್ಕಾ ದಾರಿ (ಕನ್ನಡ), 28ರಂದು ಅತುಲ್ ಪೇಟೆ ನಿರ್ದೇಶನದಲ್ಲಿ ಪುಣೆಯ ಮಹಾನಗರ ಪಾಲಿಕೆ ಕರ್ಮಚಾರಿ ಸಂಘದಿಂದ ಸತ್ಯಶೋಧಕ (ಮರಾಠಿ) ಹಾಗೂ 29ರಂದು ಪುಣೆಯ ನಾಟಕ್ ಘರ್ ಮತ್ತು ಸಿದ್ದಿವಿನಾಯಕ ಸಂಘದಿಂದ ಆಶಾಡತಿಲ್ ಏಕ್ ದಿವಸ್ (ಮರಾಠಿ) ನಾಟಕಗಳು ಪ್ರತಿ ದಿನ ಸಂಜೆ 6.30ರಿಂದ ಪ್ರದರ್ಶನಗೊಳ್ಳಲಿವೆ. ಡಿ. 29ರಂದು ಬೆಳಗ್ಗೆ 11ರಿಂದ ಸಂಜೆ 4ರ ವರೆಗೆ ಬಿ.ವಿ. ಕಾರಂತರ ಕುರಿತು ವಿಚಾರ ಸಂಕಿರಣ ಮತ್ತು ಸಂವಾದ ನಡೆಯಲಿದೆ.
ಈ ವಿಚಾರ ಸಂಕಿರಣದಲ್ಲಿ ಸುರೇಶ ಆನಗಟ್ಟಿ, ಅರವಿಂದ ಕುಲಕರ್ಣಿ, ಡಿ.ಎಸ್. ಚೌಗಲೆ, ರಾಜಪ್ಪ ದಳವಾಯಿ, ಪ್ರಕಾಶ ಗರುಡ, ಕೆ.ಮುದ್ದುಕೃಷ್ಣ, ಎಸ್.ಆರ್. ರಮೇಶ, ಎಚ್.ಎಸ್. ಉಮೇಶ ಪಾಲ್ಗೊಳ್ಳಲಿದ್ದು, ಶೈಲಾ ಮತ್ತು ಚಂದ್ರಶೇಖರ ಬಳಗ ಕಾರಂತರ ನಾಟಕಗಳ ರಂಗ ಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ ಎಂದರು.
ಒಟ್ಟು ಮೂರು ನಾಟಕಗಳ ವೀಕ್ಷಣೆಯ ಪ್ರವೇಶಕ್ಕಾಗಿ ರು. 75 ಶುಲ್ಕ ನಿಗದಿಪಡಿಸಲಾಗಿದೆ. ಪ್ರತ್ಯೇಕವಾಗಿ ಒಂದು ನಾಟಕ ವೀಕ್ಷಣೆಗಾಗಿ ರು. 30 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಬಿ.ಐ. ಈಳಿಗೇರ, ಇಸಬೆಲ್ಲಾ ದಾಸ್, ಕೆ.ಎಚ್. ಪಾಟೀಲ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement