ರಾಜ್ಯದ 42 ಇಲಾಖೆಯಿಂದ 375 ಸಕಾಲ ಸೇವೆಗಳು ಲಭ್ಯ
ಧಾರವಾಡ: ರಾಜ್ಯದ 42 ಇಲಾಖೆ, ನಿಗಮ, ಮಂಡಳಿಗೆ ಸಂಬಂಧಿಸಿದ 375 ಸಕಾಲ ಸೇವೆಗಳು ಲಭ್ಯವಿರುತ್ತವೆ ಎಂದು ಮೈಸೂರು ಆಡಳಿತ ಸಂಸ್ಥೆಯ ಉಪನ್ಯಾಸಕ ಡಾ. ಬಿ.ಎಸ್. ಶಂಕರ ತಿಳಿಸಿದರು. ಜಿಪಂ ಸಭಾ ಭವನದಲ್ಲಿ ಶಿಕ್ಷಣ ಇಲಾಖೆ ಕಾಲೇಜುಗಳ ಪ್ರಾಚಾರ್ಯರ ಹಾಗೂ ಕ್ಷೇತ್ರ ಶಿಕ್ಷಣ ಅಧಿಕಾರಿಗಳಿಗೆ ಏರ್ಪಡಿಸಿದ್ದ ಎರಡು ದಿನಗಳ ಸಕಾಲ ಸೇವೆಗಳ ಮಾಹಿತಿ ಕಾರ್ಯಾಗಾರದಲ್ಲಿ ಶುಕ್ರವಾರ ಮಾತನಾಡಿದರು. ಸರ್ಕಾರ ಒಟ್ಟು 1008 ಸಕಾಲ ಸೇವೆಗಳನ್ನು ವಿವಿಧ ಇಲಾಖೆಗಳಿಂದ ಒದಗಿಸುವ ಗುರಿ ಹಾಕಿಕೊಂಡಿದೆ. ಈಗಾಗಲೇ 447 ಸಕಾಲಗಳ ಸೇವೆಗಳ ಪೈಕಿ 375 ಸೇವೆಗಳನ್ನು ಪೂರೈಸುವ ಕಾರ್ಯ ಪ್ರಗತಿಯಲ್ಲಿದೆ. ಕರ್ನಾಟಕದಲ್ಲಿ ಸಕಾಲ ಸೇವೆ ತ್ವರಿತಗತಿಯಲ್ಲಿ ಜಾರಿಯಾಗುತ್ತಿದ್ದು, ನಿರ್ದಿಷ್ಟ ಅವಧಿಯಲ್ಲಿ ಸಾರ್ವಜನಿಕರು ಇದರ ಪ್ರಯೋಜನ ಪಡೆದಿದ್ದಾರೆ. ರಾಷ್ಟ್ರಮಟ್ಟದಲ್ಲಿ ಪ್ರಶಂಸನಿಯನ್ನು ಪಡೆದಿದೆ. ಐಎಸ್ಐ ಪ್ರಮಾಣ ಪತ್ರ ಪಡೆಯುವ ನಿರೀಕ್ಷೆಯಲ್ಲಿ ಕರ್ನಾಟಕ ಒಂದಾಗಿದೆ ಎಂದು ತಿಳಿಸಿದರು. ಶಿಕ್ಷಣ ಇಲಾಖೆಗೆ 32 ಸಕಾಲ ಸೇವೆಗಳನ್ನು ಸೇರ್ಪಡೆಯಾಗಿದ್ದರು ಸಹ ಸದ್ಯಕ್ಕೆ 12 ಸೇವೆಗಳನ್ನು ಪೂರೈಸುವ ಕಾರ್ಯ ಚಾಲ್ತಿಯಲ್ಲಿದೆ. ಸಕಾಲ ಸೇವೆ 2011ರಿಂದ ಜಾರಿಯಾಗಿದ್ದು, ಶಿಕ್ಷಣ ಇಲಾಖೆ ಸೇವೆಗಳು 2013ರ ಅಗಸ್ಟ್ 16ರಿಂದ ಸೇರ್ಪಡೆಯಾಗಿವೆ. ಸಕಾಲದಲ್ಲಿ ಸೇವೆಗಳನ್ನು ತ್ವರಿತವಾಗಿ ಪೂರೈಸಲು ಆನ್ಲೈನ್ ವ್ಯವಸ್ಥೆ ಅಗತ್ಯವಾಗಿದೆ. ಶಾಲಾ ಕಾಲೇಜುಗಳಲ್ಲಿ ಕಂಪ್ಯೂಟರ್ ಮತ್ತು ಇಂಟರ್ನೆಟ್ ಸೇವೆ ಅವಶ್ಯಕತೆ ಇದೆ. ಈ ಬಗ್ಗೆ ಸರ್ಕಾರ ಚಿಂತನೆ ನಡೆಸಿದ್ದು, ಇಂಟರ್ನೆಟ್ ಮತ್ತು ಟ್ಯಾಬ್ಲೇಟ್ ಕೊಡುವ ಗುರಿ ಹಾಕಿಕೊಂಡಿದೆ ಎಂದು ಅವರು ತಿಳಿಸಿದರು. ಕಾರ್ಯಾಗಾರದಲ್ಲಿ ಜಿಲ್ಲೆಯ ಎಲ್ಲ ಪ್ರೌಢಶಾಲಾ ಹಾಗೂ ಕಾಲೇಜು ಪ್ರಾಚಾರ್ಯರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇದ್ದರು. ಡಯಟ್ ಉಪನ್ಯಾಸಕ ಗಂಗಪ್ಪ ಕಾರ್ಯಾಗಾರ ಉದ್ಘಾಟಿಸಿದರು. ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾರ್ಯ ಎ.ಪಿ. ಪಾಲನಕರ, ಬಿಇಒ ಶ್ರೀಶೈಲ ಕರೀಕಟ್ಟಿ, ವಿ.ಜಿ.ಪೋಳ, ಎಂ.ಎಲ್. ಹಂಚಾಟೆ, ಬಿ.ಎಂ. ಬಡಿಗೇರ, ಮಂಗಳಾ ಪಾಟೀಲ ಇದ್ದರು.