ಧೂಳಿನ ನರಕವಾಯ್ತು ನಿವೃತ್ತರ ಸ್ವರ್ಗ
ಕನ್ನಡಪ್ರಭ ವಾರ್ತೆ, ಧಾರವಾಡ, ಡಿ. 21
ಅತ್ತುತ್ಯಮ ಪರಿಸರ, ಅಷ್ಟೇನೂ ಸಂಚಾರ ದಟ್ಟಣೆ ಇಲ್ಲದ ಧಾರವಾಡ ನಗರವನ್ನು ನಿವೃತ್ತರ ಸ್ವರ್ಗ ಎಂದೇ ಕರೆಯುತ್ತಿದ್ದರು. ಅದರೆ, ಇದೀಗ ಮುಂಚಿನ ಸ್ವಚ್ಛ ಪರಿಸರ ಉಳಿದಿಲ್ಲ. ರಸ್ತೆಗಳೆಲ್ಲವೂ ಧೂಳು ತುಂಬಿದ ವಾಹನಗಳಿಂದ ತುಂಬಿವೆ. ಧಾರವಾಡ ನಗರ ಇದೀಗ ಧೂಳು ನಗರಿಯಾಗಿ ಹೊರಹೊಮ್ಮುತ್ತಿದೆ.
ಈ ವರ್ಷ ಎಲ್ಲಿಲ್ಲದ ಚಳಿ ಧಾರವಾಡಕ್ಕೂ ಅಂಟಿಕೊಂಡಿದೆ. ಶೇ. 10ರಿಂದ 12 ಡಿಗ್ರಿ ಸೆಲ್ಸಿಯಸ್ ಹವಾಮಾನ ವರದಿಯಾಗುತ್ತಿದ್ದು, ಜನತೆಯ ನಿದ್ದೆಗೆಡಿಸಿದೆ. ಚಳಿಗಾಲದ ಈ ಗಾಳಿಯಿಂದಾಗಿ ಮೊದಲೇ ಮೈ ಕೊರೆತ ಉಂಟಾಗುತ್ತಿದೆ. ಅಂತಹುದರಲ್ಲಿ ಇಲ್ಲಿನ ರಸ್ತೆಗಳ ಮೇಲಿನ ಧೂಳು ಮೈಗಂಟಿಕೊಂಡು ಮೈ ಕೊರತಕ್ಕೆ ದಾರಿ ಮಾಡಿಕೊಡುತ್ತಿದೆ. ಇದಕ್ಕಿಂತ ಹೆಚ್ಚಾಗಿ ಚಳಿ, ಗಾಳಿ ಹಾಗೂ ಧೂಳು ಇಲ್ಲಿನ ಜನತೆಯನ್ನು ಅನೇಕ ರೋಗಗಳಿಗೆ ತುತ್ತು ಮಾಡಿದೆ.
ಹೌದು... ಒಳ ಚರಂಡಿ ಕಾಮಗಾರಿ ಪ್ರಭಾವದಿಂದ ನಗರದಲ್ಲಿನ ಪ್ರಮುಖ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿವೆ. ಹಾಗಾಗಿ, ನಗರದ ಪ್ರಮುಖ ರಸ್ತೆಗಳು ಇದೀಗ ಕಚ್ಚಾ ರಸ್ತೆಗಳಾಗಿ ಮಾರ್ಪಟ್ಟಿವೆ. ಇದರಿಂದಾಗಿ ನಗರ ವಾಸಿಗಳು ಹಾಗೂ ಪ್ರಯಾಣಿಕರು ರಸ್ತೆಯ ಮೇಲಿನ ಧೂಳಿನಿಂದ ಕೂಡಿದ ಆಮ್ಲಜನಕವನ್ನೇ ಸೇವಿಸುವ ಅನಿವಾರ್ಯತೆ ಎದುರಾಗಿದೆ.
ಸದ್ಯ ಚಳಿಗಾಲವಿರುವುದರಿಂದ ಬಿರುಸಾದ ಮೂಡಣ ಗಾಳಿ ಬೀಸುತ್ತಿದ್ದು, ಈ ಗಾಳಿಯೊಂದಿಗೆ ಧೂಳು ಸೇರಿಕೊಂಡು ನಗರದ ಜನತೆಯನ್ನು ಅನೇಕ ರೋಗಗಳಿಗೆ ಅಂಟಿಕೊಳ್ಳುವಂತೆ ಮಾಡುತ್ತಿದೆ. ಇಲ್ಲಿನ ಮರಾಠ ಕಾಲೋನಿ, ಮುರಘಾಮಠ, ಹೆಬ್ಬಳ್ಳಿ ಅಗಸಿ, ಕೊಪ್ಪದಕೇರಿ ಸೇರಿದಂತೆ ನಗರದ ಪ್ರಮುಖ ರಸ್ತೆಗಳು ಇದೀಗ ಸಂಪೂರ್ಣ ಹಾಳಾಗಿವೆ. ಇದರ ಪರಿಣಾಮದಿಂದ ರಸ್ತೆ ಅಕ್ಕ-ಪಕ್ಕದ ಮನೆಯವರು ಸದಾ ಮನೆ ಬಾಗಿಲು ಮುಕೊಂಡೇ ಕೂರಬೇಕಿದೆ.
ಆರೋಗ್ಯ ಹಾಳು: ನಗರದಲ್ಲಿ ಧೂಳು ಹೆಚ್ಚಾಗಿದ್ದರಿಂದ ಇದೀಗ ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧರ ವರೆಗೂ ಶ್ವಾಸಕೋಶ ಸಂಬಂಧಿ ಅಲರ್ಜಿ, ಅಸ್ತಮಾ ರೋಗಗಳು ಬರುತ್ತಿವೆ. ಅದರಲ್ಲೂ ಚಿಕ್ಕ ಮಕ್ಕಳಂತೂ ಈ ಧೂಳು ಮಾಡುತ್ತಿರುವ ಅವಾಂತರದಿಂದ ನಿತ್ಯ ಆಸ್ಪತ್ರೆಗೆ ದಾಖಲಾಗಬೇಕಾದ ಸ್ಥಿತಿ. ನಗರದಲ್ಲಿ ವಾಹನ ಸಂಚಾರದಿಂದ ಏಳುತ್ತಿರುವ ರಸ್ತೆಯ ಮೇಲಿನ ಧೂಳು ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಆಗಮಿಸುವ ಜನತೆಯನ್ನೂ ಬಿಡುತ್ತಿಲ್ಲ. ಈ ಧೂಳು ಗ್ರಾಮೀಣ ಜನರಿಗೂ ರೋಗಗಳಿಗೆ ಎಡೆ ಮಾಡಿ ಹಾಸಿಗೆ ಹಿಡಿಯುವಂತೆ ಮಾಡುತ್ತಿದೆ.
ಧೂಳು... ನೀರು...
ಹದಗೆಟ್ಟ ರಸ್ತೆಯಿಂದ ಮೇಲೇಳುತ್ತಿರುವ ಧೂಳನ್ನು ತಡೆ ಹಿಡಿಯಲು ನಿತ್ಯ ದಿನಕ್ಕೆ 2 ಹೊತ್ತು ಟ್ಯಾಂಕರ್ ಮೂಲಕ ನೀರು ಹರಿಸಲಾಗುತ್ತಿದೆ. ಇದು ತಾತ್ಕಾಲಿಕ ಪರಿಹಾರವಾಗಿದ್ದು, ಒಂದೇ ಗಂಟೆಯಲ್ಲಿ ಒಣಗುತ್ತದೆ. ಬಳಿಕ ರಸ್ತೆ ಮೇಲಿಂದ ಯಥಾಸ್ಥಿತಿ ಧೂಳು. ರಸ್ತೆ ನವೀಕರಣಕ್ಕೆ ಅಕ್ಕ ಪಕ್ಕದ ಮನೆ ಮಾಲೀಕರು ಸಾಕಷ್ಟು ಬಾರಿ ಪ್ರತಿಭಟಿಸಿ ಶಾಸಕರಿಗೆ, ಡಿಸಿಗೆ ಮನವಿ ಸಲ್ಲಿಸಿದ್ದಾರೆ. ಹದಗೆಟ್ಟ ರಸ್ತೆಗಳ ಪ್ರಭಾವದಿಂದ ಒಂದೂವರೆ ವರ್ಷದಿಂದ ರಸ್ತೆ ಬದಿ ನಿವಾಸಿಗಳು ನರಕ ಅನುಭವಿಸುತ್ತಿದ್ದಾರೆ. ಹದಗೆಟ್ಟ ರಸ್ತೆ ಮೇಲೆ ಸಾಕಷ್ಟು ಬೈಕ್ ಸವಾರರು ಬಿದ್ದಿದ್ದಾರೆ. ಧೂಳಿನಿಂದ ರಕ್ಷಿಸಿಕೊಳ್ಳಲು ಕಣ್ಣು ಮುಚ್ಚಿ ಅನೇಕ ಅನಾಹುತಗಳು ನಡೆದಿವೆ. ರಸ್ತೆಯಲ್ಲಿನ ತಗ್ಗು-ಗುಂಡಿಗಳು ಅನಾಹುತಕ್ಕೆ ದಾರಿ ಮಾಡಿವೆ. ಅದರಂತೆ ವೃದ್ಧ ಪಾದಚಾರಿಗಳು ಈ ರಸ್ತೆಯಲ್ಲಿ ಅನೇಕ ಬಾರಿ ಬಿದ್ದಿದ್ದಾರೆ. ಇಷ್ಟೆಲ್ಲ ಅವಾಂತರವಾಗುತ್ತಿದ್ದರೂ ಜಿಲ್ಲಾಡಳಿತ ನಗರದ ಈ ರಸ್ತೆಗಳ ನವೀಕರಣಕ್ಕೆ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ. ಈ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ನಗರವನ್ನು ಧೂಳುಮುಕ್ತವಾಗಿ ಯಾವಾಗ ಮಾಡುತ್ತೋ ಕಾದು ನೋಡಬೇಕಿದೆ.
ಕಲ್ಮೇಶ ಪಟ್ಟಣದವರ