ಉತ್ಸವದಲ್ಲಿಂದು ಬಿಟಿ ಬದನೆ: ಸಮನ್ಸ್ ಜಾರಿ
ಧಾರವಾಡ: ಸಂಬಂಧಿಸಿದ ಇಲಾಖೆಗಳ ಅನುಮತಿ ಇಲ್ಲದೆ ಬಿಟಿ ಬದನೆ ಸಂಶೋಧನೆ ಕೈಗೊಂಡ ಧಾರವಾಡದ ಕೃಷಿ ವಿವಿ ಕುಲಪತಿ ಹಾಗೂ ಇನ್ನಿತರರ ವಿರುದ್ಧ ಸಲ್ಲಿಕೆಯಾಗಿದ್ದ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರಿಗೆ ಜೆಎಂಎಫ್‌ಸಿ ನ್ಯಾಯಾಲಯ ಸೋಮವಾರ ಸಮನ್ಸ್ ಜಾರಿ ಮಾಡಿದೆ. ಕೃವಿವಿ ಪ್ರಭಾರಿ ಕುಲಪತಿ ಡಾ. ಎಚ್.ಎಸ್. ವಿಜಯಕುಮಾರ ಹಾಗೂ ವಿಶ್ರಾಂತ ಕುಲಪತಿ ಡಾ. ಆರ್.ಆರ್. ಹಂಚಿನಾಳ ಹಾಗೂ ಡಾ. ಎಸ್.ಎ.ಪಾಟೀಲ ಅವರು ಸೋಮವಾರ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಿ ಈ ಹಿಂದೆ ನೀಡಿದ್ದ ನಿರೀಕ್ಷಣಾ ಜಾಮೀನಿನ ಅನ್ವಯ ಶೂರಿಟಿ ಸಲ್ಲಿಸಿದರು. ಶೂರಿಟಿ ಅಂಗೀಕರಿಸಿದ ನ್ಯಾಯಾಲಯ ಮೂವರಿಗೂ ಮುಂದಿನ ದಿನಾಂಕದಂದು ಮತ್ತೆ ಖುದ್ದಾಗಿ ಹಾಜರಾಗಲು ಸಮನ್ಸ್ ಜಾರಿಗೊಳಿಸಿತು.
ಕ್ರಿಕೆಟ್ ಬೆಟ್ಟಿಂಗ್: 2 ಸೆರೆ
ಹುಬ್ಬಳ್ಳಿ: ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಿರುವ ಗೋಕುಲ ಠಾಣೆ ಪೊಲೀಸರು ಅವರಿಂದ ರು. 5 ಸಾವಿರ ಹಾಗೂ 2 ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಗೋಕುಲ ರಸ್ತೆ ನಿವಾಸಿ ಸಂತೋಷ ಅಶೋಕ ಮೇಘರಾಜ ಹಾಗೂ ಚಂದ್ರಕಾಂತ ಅಶೋಕ ಮೇಘರಾಜ ಎಂಬಿಬ್ಬರೇ ಬಂಧಿತರು. ಆರೋಪಿತರಿಬ್ಬರೂ ಭಾನುವಾರ ಸಂಜೆ ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಣ ಕ್ರಿಕೆಟ್ ಪಂದ್ಯದ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದಾಗ ಖಚಿತ ಮಾಹಿತಿಯನ್ನಾಧರಿಸಿ ಇನ್‌ಸ್ಪೆಕ್ಟರ್ ಪ್ರಭುಗೌಡ ಪಾಟೀಲ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಆರೋಪಿತರನ್ನು ಬಂಧಿಸಿದ್ದಾರೆ. ಈ ಕುರಿತಂತೆ ಪ್ರಕರಣ ದಾಖಲಾಗಿದೆ.
ಕಾಲುವೆಗೆ ಬಿದ್ದು ವೃದ್ಧೆ ಸಾವು
ಅಣ್ಣಿಗೇರಿ: ಸಮೀಪದ ಬಸಾಪುರ ಗ್ರಾಮದ ಮಲಪ್ರಭಾ ಬಲದಂಡೆ ಕಾಲುವೆಯಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ. ವೃದ್ಧೆಯ ಕುರಿತಂತೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಮೃತಳು 60 ವಯಸ್ಸಿನವಳಿರಬಹುದು ಎಂದು ಅಂದಾಜಿಸಲಾಗಿದ್ದು, 5 ಅಡಿ ಎತ್ತರ, ಸಾಧಾರಣ ಮೈಕಟ್ಟು ಗೋದಿಗೆಂಪು ಮೈಬಣ್ಣ ಹೊಂದಿದ್ದಾಳೆ. ಕೆಂಪು ಮತ್ತು ಕರಿಬಣ್ಣದ ಇಳಕಲ್ ಸೀರೆ ತೊಟ್ಟಿದ್ದು, ಹಸಿರು ಬಣ್ಣದ ಸ್ವೇಟರ್ ಧರಿಸಿದ್ದಾಳೆ. ಸಂಬಂಧಪಟ್ಟ ವಾರಸುದಾರರು ಸ್ಥಳೀಯ ಆರಕ್ಷಕ ಠಾಣೆ ದೂರವಾಣಿ (08380-222733)ಗೆ ಸಂಪರ್ಕಿಸಲು ಠಾಣಾಧಿಕಾರಿಗಳು ಕೋರಿದ್ದಾರೆ.
ಕಲ್ಲಪ್ಪ ಮೇಸ್ತ್ರಿ
ಧಾರವಾಡ: ಇಲ್ಲಿನ ಕಮಲಾಪುರದ ನಿವಾಸಿ ಕಲ್ಲಪ್ಪ ಮೇಸ್ತ್ರಿ(80) ಭಾನುವಾರ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವಿದೆ.