ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ವೃತ್ತಿಪರ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್

Mainashree
Updated On : 24 Dec 2013, 10:53 am

ಕನ್ನಡಪ್ರಭ ವಾರ್ತೆ, ಧಾರವಾಡ, ಡಿ. 23
ಮೆಡಿಕಲ್, ಎಂಜಿನಿಯರಿಂಗ್ ನಂತಹ ವೃತ್ತಿಪರ ಕೋರ್ಸ್‌ಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ ಪ್ರತಿ ಜಿಲ್ಲೆಗೆ ಎರಡರಂತೆ ರಾಜ್ಯದಲ್ಲಿ ಒಟ್ಟು 60 ವೃತ್ತಿಪರ ವಸತಿ ನಿಲಯಗಳನ್ನು ಆರಂಭಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ ಹೇಳಿದರು.
ಸೋಮವಾರ ಧಾರವಾಡದ ಸೈದಾಪುರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು. ಹಾಗೆಯೇ ನರ್ಸಿಂಗ್ ವಿದ್ಯಾರ್ಥಿಗಳಿಗೂ ಪ್ರತ್ಯೇಕ ವಸತಿ ನಿಲಯಗಳನ್ನು ನೀಡುವ ಭರವಸೆ ನೀಡಿದರು.
ಎಸ್ಸಿ-ಎಸ್ಟಿ, ಹಿಂದುಳಿದ ಅಥವಾ ಸರ್ಕಾರದ ವಸತಿ ನಿಲಯಗಳಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದಿರುವುದು, ದಿನಸಿಗಳ ದುರುಪಯೋಗ ಹಾಗೂ ಅವ್ಯವಹಾರದಲ್ಲಿ ಅಧಿಕಾರಿಗಳು ಶಾಮೀಲಾಗಿದ್ದರೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಾಗುವುದಾಗಿಯೂ ಸಚಿವರು ಎಚ್ಚರಿಕೆ ನೀಡಿದರು.
ಅಡುಗೆ ಸಹಾಯಕರ ಭರ್ತಿ: ರಾಜ್ಯಾದ್ಯಂತ ಇಲಾಖೆ ವಸತಿ ನಿಲಯಗಳ ಅಡುಗೆ ಸಹಾಯಕರ ಹುದ್ದೆ ಭರ್ತಿಯಾಗಿಲ್ಲ. ಹೈ-ಕ 371ಜೆ ನಿಯಮದ ಪ್ರಕಾರ ಮೀಸಲು ಹುದ್ದೆ ಪ್ರಮಾಣ ನಿರ್ಧಾರವಾದೊಡನೆ ರಾಜ್ಯಾದ್ಯಂತ ಎಲ್ಲ ನಿಲಯಗಳಲ್ಲಿನ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಅಲ್ಲದೆ, ಇತ್ತೀಚೆಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಸರ್ಕಾರಿ ವಸತಿ ನಿಲಯಗಳಿಗೆ ಸರ್ಕಾರಿ ಜಮೀನನ್ನು ಗುರುತಿಸಿ ಕೊಡುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ. ವಸತಿ ನಿಲಯಗಳ ನಿರ್ಮಾಣಕ್ಕೆ ಸಾಕಷ್ಟು ಅನುದಾನವಿದ್ದು, ಇದೀಗ ನಿವೇಶನಗಳು ಲಭ್ಯವಾಗುತ್ತಿವೆ ಎಂದರು.
ವಿದ್ಯಾಶ್ರೀ ಯೋಜನೆ: ಪ್ರತಿಭಾವಂತ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳು ಪ್ರತಿಷ್ಠಿತ ಶಾಲೆಗಳಲ್ಲಿ ಓದಲು ಗರಿಷ್ಠ ವಾರ್ಷಿಕ ರು. 50 ಸಾವಿರ ನೆರವು ನೀಡಲಾಗುತ್ತಿದೆ. ಹಿಂದುಳಿದ ಹಾಗೂ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗಾಗಿ ಸರ್ಕಾರ ನೂತನವಾಗಿ ವಿದ್ಯಾಶ್ರೀ ಎಂಬ ಯೋಜನೆ ಜಾರಿಗೊಳಿಸಿದ್ದು, ಈ ಯೋಜನೆಯಡಿ ಮೆಟ್ರಿಕ್ ನಂತರದ ತರಗತಿಯಲ್ಲಿ ಓದುತ್ತಿದ್ದು, ಹಾಸ್ಟೆಲ್ ಸೌಲಭ್ಯ ಪಡೆಯಲಾಗದ 20 ಸಾವಿರ ವಿದ್ಯಾರ್ಥಿಗಳಿಗೆ ಮಾಸಿಕ ರು. 1500 ರೂ. ನಂತೆ 10 ತಿಂಗಳು ಕಾಲ ನೆರವು ನೀಡಲಾಗುವುದು. ಅದರಂತೆ, ವಿದ್ಯಾರ್ಥಿ ವೇತನ ದೊರೆಯದ ವಿದ್ಯಾರ್ಥಿಗಳಿಗೆ ಮಾಸಿಕ ರು. 350 ನೆರವನ್ನು ನೇರ ಪಾವತಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಅಶೋಕ ಚಲವಾದಿ ಇದ್ದರು.
ವಸತಿ ನಿಲಯಕ್ಕೆ ಭೇಟಿ, ಪರಿಶೀಲನೆ
ಸಚಿವ ಎಚ್. ಆಂಜನೇಯ ಅವರು ಸೈದಾಪುರ ವಸತಿ ನಿಲಯಕ್ಕೆ ಭೇಟಿ ನೀಡಿದ ಸಂದರ್ಭ ಒಂದೂ ಸಮಸ್ಯೆಯನ್ನು ವಿದ್ಯಾರ್ಥಿಗಳು ಹೇಳಲಿಲ್ಲ. ಎಲ್ಲವೂ ಚೆನ್ನಾಗಿದೆ ಎಂಬ ಉತ್ತರಗಳೇ ಬಂದವು. ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಹಲವು ನಿಲಯಗಳು ಸಂಕಷ್ಟದಲ್ಲಿದ್ದು, ವಿದ್ಯಾರ್ಥಿಗಳು ಮೂಲಸೌಕರ್ಯಗಳಿಗೆ ನಿತ್ಯ ಗೋಳಾಡುತ್ತಾರೆ. ಆದರೆ, ಅಧಿಕಾರಿಗಳು ಸಚಿವರವನ್ನು ದಾರಿ ತಪ್ಪಿಸಿ ಉತ್ತಮ ಸೌಲಭ್ಯವುಳ್ಳ ವಸತಿ ನಿಲಯಕ್ಕೆ ಕರೆದುಕೊಂಡು ಬಂದಿರುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಮೂಡಿದ್ದು ನಿಜ. ಭೇಟಿ ಸಂದರ್ಭ ಸಚಿವರು ಉಪಾಹಾರ (ಉಪ್ಪಿಟ್ಟು), ಊಟವನ್ನು ಸವಿದು ಗುಣಮಟ್ಟ ಪರಿಶೀಲಿಸಿದರು. ಅಡುಗೆ ಮಾಡುವವರಿಗೆ ತರಬೇತಿ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಅಡಿಗೆ ಮಾಡುವವರು ಅಡುಗೆಗೆ ಅಗತ್ಯಕ್ಕೆ ತಕ್ಕಷ್ಟು ಮಾತ್ರ ಉಪ್ಪು, ಹುಳಿ ಬಳಸುವಂತೆ ಸಲಹೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement