ಸಾಕ್ಷ್ಯ ಹೇಳದಂತೆ ಮಹಿಳೆಗೆ ಜೀವ ಬೆದರಿಕೆ: ದೂರು
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಡಿ. 23
ನ್ಯಾಯಾಲಯದಲ್ಲಿ ತಮ್ಮ ವಿರುದ್ಧ ಸಾಕ್ಷಿ ಹೇಳಿದಂತೆ ಮಹಿಳೆಯೊಬ್ಬರಿಗೆ ಜೀವ ಬೆದರಿಕೆ ಹಾಕಿದ ಘಟನೆ ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೂಗಾರ ಗಾರ್ಡನ್ನ ಸರೋಜಾ ಸುರೇಶ ಹೂಗಾರ ಎಂಬುವರಿಗೆ ಉದಯಗಿರಿಯ ಈರಪ್ಪ ನವಲಗುಂದ ಹಾಗೂ ಮತ್ತಿಬ್ಬರು ಜೀವ ಬೆದರಿಕೆ ಹಾಕಿದ್ದಾರೆ ಎಂದು ಠಾಣೆಯಲ್ಲಿ ದಾಖಲಾಗಿರುವ ದೂರಿನಲ್ಲಿ ತಿಳಿಸಲಾಗಿದೆ.
ಈರಪ್ಪ ಹಾಗೂ ಆತನ ಇನ್ನಿಬ್ಬರು ಸಹಚರರು, ಮನೆ ಹತ್ತಿರ ಆಗಮಿಸಿ ತಾವು ನ್ಯಾಯಾಲಯದಿಂದ ಜಾಮೀನು ಪಡೆದು ಬಂದಿದ್ದು, ತಮ್ಮ ವಿರುದ್ಧ ಸಾಕ್ಷಿ ಹೇಳಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಸರೋಜಾ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತಂತೆ ಪ್ರಕರಣ ದಾಖಲಾಗಿದೆ.
ಮೊಬೈಲ್ನಲ್ಲಿ ಬೆದರಿಕೆ: ಮೊಬೈಲ್ ಕರೆಯ ಮೂಲಕ ವ್ಯಕ್ತಿಯೊಬ್ಬರಿಗೆ ಜೀವ ಬೆದರಿಕೆವೊಡ್ಡಿದ ಪ್ರಕರಣ ಅಶೋಕನಗರ ಠಾಣೆಯಲ್ಲಿ ದಾಖಲಾಗಿದೆ. ವೆಂಕಟೇಶ ನೀರಗಟ್ಟಿ ಎಂಬುವರಿಗೆ ಡಿ. 20ರಂದು ರಾತ್ರಿ 9.30ಕ್ಕೆ ಮೊಬೈಲ್ ಕರೆ ಮಾಡಿದ ಅಶೋಕ ಮೊರಬದ ನೀನು ರಮೇಶ ನೀರಗಟ್ಟಿಯೊಂದಿಗೆ ಜಗಳವಾಡಿದ್ದು ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ ಎಂದು ವೆಂಕಟೇಶ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.