ಅಧ್ಯಯನ ತಂಡಕ್ಕೆ ಎಳನೀರ ಸೇವೆ
ರೋಣ: ಬರಪೀಡಿತ ತಾಲೂಕೆಂದು ಗುರುತಿಸಲ್ಪಟ್ಟ ರೋಣ ತಾಲೂಕಿನ ಅರಹುಣಸಿ, ಮೇಲ್ಮಟ, ಅಸೂಟಿ ಗ್ರಾಮಕ್ಕೆ ಬುಧವಾರ ಬಂದಿದ್ದ ಬರ ಅಧ್ಯಯನ ಕೇಂದ್ರ ತಂಡದ ಮುಖ್ಯಸ್ಥರು ರೈತರ ಸಮಸ್ಯೆ ಕೇಳುವುದಕ್ಕಿಂತ ಎಳನೀರು ಕುಡಿಯುವಲ್ಲೇ ಮಗ್ನರಾಗಿದ್ದರು. ಇದರಿಂದ ರೈತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಜರುಗಿತು.
ಅಧ್ಯಯನ ತಂಡವು ತಾಲೂಕಿನ ಅರಹುಣಸಿ ಗ್ರಾಮದ ಹೊಲಗಳಿಗೆ ಭೇಟಿ ನೀಡಿ, ರೈತರಿಂದ ಬೆಳೆ ಹಾನಿ ಮತ್ತು ಸಮಸ್ಯೆ ಕುರಿತು ತಂಡದ ಸದಸ್ಯರಾದ ಕೇಂದ್ರದ ಕುಡಿಯುವ ನೀರು ಮತ್ತು ಶುಚಿತ್ವದ ಉಪ ಸಲಹೆಗಾರ ಜಯಕುಮಾರ ಬಾತ್ಲಾ ಮತ್ತು ಕೇಂದ್ರ ಪಶು ಸಂಗೋಪನಾ ಇಲಾಖೆ ನಿರ್ದೇಶಕ ಕಾಲಸಿಂಗ್ ಅವರು ಮಾಹಿತಿ ಪಡೆದರು. ಬಳಿಕ ತಂಡವು ಮೇಲ್ಮಠ ಗ್ರಾಮದಲ್ಲಿನ ಸಂಪೂರ್ಣ ಬತ್ತಿದ ಕುಡಿಯುವ ನೀರಿನ ಕೆರೆ ವಿಕ್ಷಣೆಗೆ ತೆರಳಿತು. ಆಗ ಗ್ರಾಮದ ರೈತರು ಕೆರೆಯಲ್ಲಿ ನೀರು ಇಲ್ಲದ್ದರಿಂದ ಜನತೆ ಮತ್ತು ಜಾನುವಾರಿಗೆ ಕುಡಿಯಲು ತೀವ್ರ ನೀರಿನ ತೊಂದರೆಯಾಗುತ್ತಿದೆ. ಅಲ್ಲದೆ ಮುಂಬರುವ ದಿನದಲ್ಲಿ ಇದಕ್ಕಿಂತ ಹೆಚ್ಚಿನ ಸಮಸ್ಯೆಯಾಗಲಿದ್ದು, ನೀವೇ ಏನಾದರೂ ಪರಿಹಾರ ಹುಡುಕಿ ಎಂದು ರೈತರು ತಮ್ಮ ಅಳಲು ತೋಡಿಕೊಂಡರು. ಆ ವೇಳೆ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ, ಕೇಂದ್ರ ಬರ ಅಧ್ಯಯನ ತಂಡದ ಮುಖ್ಯಸ್ಥ ವಿಜಯಕುಮಾರ ಬಾತ್ಲಾ ಮತ್ತು ಕಾಲ್‌ಸಿಂಗ್ ಇವರು ರೈತರ ಎದುರಲ್ಲೆ ಎಳನೀರು ಕುಡಿಯುತ್ತಾ ಕಾಟಾಚಾರಕ್ಕೆ ಎಂಬಂತೆ ಸಮಸ್ಯೆ ಆಲಿಸುತ್ತಿದ್ದರಿಂದ ನೆರೆದಿದ್ದ ರೈತ ಸಮೂಹಕ್ಕೆ ಬೇಸರ ತಂದಿತು. ಜಿಲ್ಲಾಧಿಕಾರಿ ಮತ್ತು ತಂಡದ ಸದಸ್ಯರಿಗೆ ಸ್ವತಃ ತಹಸೀಲ್ದಾರ್ ಎ.ಜಿ. ಪಂಡಿತ ಅವರೇ ಎಳನೀರು ಸಪ್ಲಾಯ್ ಮಾಡಿದರು. ತಂಡವು ಸೌಜನ್ಯಕ್ಕಾದರೂ ಒಂದೆಡೆ ಕುಳಿತು ಅಥವಾ ಬೇರೆಡೆ ಹೋಗಿ ಎಳನೀರು ಕುಡಿದಿದ್ದರೆ ರೈತರಿಗೆ ಬೇಸರವಾಗುತ್ತಿರಲಿಲ್ಲ. ರೈತರೆದುರೇ ಈ ರೀತಿಯಾಗಿ ವರ್ತಿಸಿದ್ದು ಅವರ ಕೆಂಗಣ್ಣಿಗೆ ಗುರಿಯಾಯಿತು. ಕುಡಿಯೋಕೆ ನೀರಿಲ್ಲದೇ ನಾವು ಇಲ್ಲಿ ನಿತ್ಯ ಗೋಳಾಡುತ್ತಿದ್ದು, ನಮಗೆ ಅಣಕಿಸುವಂತೆ ಬರ ಅಧ್ಯಯನ ತಂಡ ನಡೆದುಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಹೆಚ್ಚಿದ ನೀರಿನ ಸಮಸ್ಯೆ: 3 ವರ್ಷಗಳಿಂದ ಸತತ ಮಳೆಯ ಅಭಾವದಿಂದ ತೇವಾಂಶ ಕೊರತೆಯುಂಟಾಗಿ ಬಿತ್ತಿದ ಬೀಜ, ಗೊಬ್ಬರ ಖರ್ಚೂ ಬಂದಿರುವುದಿಲ್ಲ. ಈ ವರ್ಷವಾದರೂ ಮಳೆಯಾದೀತು ಅಂದರೆ ಅದು ಆಗಲಿಲ್ಲ. ಮಳೆ ಕೊರತೆಯಿಂದ ಈ ಭಾಗದಲ್ಲಿ ಬೆಳೆ ಸಂಪೂರ್ಣ ಹಾನಿ ಆಗಿದ್ದು, ಅಲ್ಲದೇ ನೀರಿನ ಸಮಸ್ಯೆ ತೀವ್ರವಾಗಿ ಉಲ್ಬಣವಾಗಿದೆ. ನಮಗೆ ಕುಡಿಯಲು ನೀರಿಲ್ಲ ಎಂದು ಬರ ಅಧ್ಯಯನ ತಂಡದ ಎದುರು ಅಳಲು ಹೇಳಿಕೊಳ್ಳುತ್ತಿದ್ದರೆ, ತಂಡದ ಸದಸ್ಯರು ಮಾತ್ರ ನಿಮ್ಮ ಸಮಸ್ಯೆ ನಿಮಗೆ, ನಮ್ಮ ಸಮಸ್ಯೆ ನಮಗೆ ಎಂಬಂತೆ ಕೆರೆಯ ದಡದಲ್ಲಿ ನಿಂತು ಎಳನೀರು ಕುಡಿಯುತ್ತಿದ್ದದ್ದು ನಮಗೆ ತೀವ್ರ ನೋವುಂಟುಮಾಡಿತು. ಹೀಗಾದರೆ ನಮ್ಮ ಸಮಸ್ಯೆಗೆ ಪರಿಹಾರ ಸಿಗುವುದಾರರೂ ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ ಎಂದು ಮೇಲ್ಮಠದ ರೈತರಾದ ಮುತ್ತಪ್ಪ ಪೂಜಾರ, ಯಲ್ಲಪ್ಪ ಜಕ್ಕಲಿ, ಕಾಳಪ್ಪ ತಳವಾರ, ಹನುಮಂತಪ್ಪ ಕರಮಡಿ, ಬಸನಗೌಡ ಪಾಟೀಲ, ರಮೇಶ ಪೂಜಾರ 'ಕನ್ನಡಪ್ರಭ'ಕ್ಕೆ ತಿಳಿಸಿದರು.
ಮುಂಜಾಗ್ರತೆ ಕ್ರಮಕೈಗೊಳ್ಳಿ: ತಾಲೂಕಿನಲ್ಲಿ ಸುಮಾರು 57 ಸಾವಿರ ಹೆಕ್ಟೇರ್‌ಗೂ ಅಧಿಕ ಬೆಳೆ ಹಾನಿಯಾಗಿದೆ. ಜಾನುವಾರುಗಳಿಗೆ ಮೇವಿನ ಸಮಸ್ಯೆಯಾಗಿದೆ. ಮಳೆಯ ಕೊರತೆಯಿಂದಾಗಿ ತಾಲೂಕಿನ ಬಹುತೇಕ ಗ್ರಾಮಗಳ ವ್ಯಾಪ್ತಿಯ ಹಳ್ಳ, ಕೆರೆ ಮತ್ತು ಬಾವಿಗಳು ಬತ್ತಿವೆ. ಅನಿಯಮಿತ ವಿದ್ಯುತ್‌ನಿಂದ ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ಇದರಿಂದ ಜಾನುವಾರುಗಳಿಗೆ ನೀರಿಗಾಗಿ ತೀವ್ರ ತೊಂದರೆಯಾಗುತ್ತಿದೆ. ಕೊಳವೆ ಬಾವಿಯಿಂದ ಬರುವ ನೀರು ಸಂಪೂರ್ಣ ಕಹಿಯಾಗಿದ್ದು, ಕುಡಿಯಲು ಯೋಗ್ಯವಾಗಿಲ್ಲ. ಬಹುತೇಕ ಕೊಳವೆ ಬಾವಿಗಳಿಂದ ಪ್ಲೋರೈಡ್ ಯುಕ್ತ ನೀರು ಬರುತ್ತಿದೆ. ಈಗಾಗಲೇ ಅರಹುಣಸಿ, ಮೇಲ್ಮಠ, ಅಸೂಟಿ ಸೇರಿದಂತೆ ತಾಲೂಕಿನ ಅನೇಕ ಕಡೆಗಳಲ್ಲಿ ನೀರಿನ ಸಮಸ್ಯೆಯುಂಟಾಗುತ್ತಿದ್ದು, ಮುಂಜಾಗ್ರತೆ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಅರಹುಣಸಿ ಗ್ರಾಮದ ರೈತರಾದ ವಿರೂಪಾಕ್ಷಪ್ಪ ಬಡಿಗೇರ, ಅಮರೇಶಗೌಡ ಗರಡ್ಡಿ, ಮುತ್ತಣ್ಣ ಚೌಡರಡ್ಡಿ, ಶರಣಪ್ಪ ಅಳಗುಂಡಿ ಆಗ್ರಹಿಸಿದರು.
ಕೇಂದ್ರ ಬರ ಅಧ್ಯಯನ ತಂಡದ ಮುಖ್ಯಸ್ಥ ವಿಜಯಕುಮಾರ ಬಾತ್ಲಾ ಮತ್ತು ಕಾಲ್‌ಸಿಂಗ್ ರೈತರ ಎದುರಲ್ಲೆ ಎಳನೀರು ಕುಡಿಯುತ್ತಾ ಕಾಟಾಚಾರಕ್ಕೆ ಎಂಬಂತೆ ಸಮಸ್ಯೆ ಆಲಿಸುತ್ತಿದ್ದರಿಂದ ನೆರೆದಿದ್ದ ರೈತ ಸಮೂಹಕ್ಕೆ ಬೇಸರ ತಂದಿತು. ಜಿಲ್ಲಾಧಿಕಾರಿ ಮತ್ತು ತಂಡದ ಸದಸ್ಯರಿಗೆ ಸ್ವತಃ ತಹಸೀಲ್ದಾರ್ ಎ.ಜಿ. ಪಂಡಿತ ಅವರೇ ಎಳನೀರು ಸಪ್ಲಾಯ್ ಮಾಡಿದರು. ತಂಡವು ಸೌಜನ್ಯಕ್ಕಾದರೂ ಒಂದೆಡೆ ಕುಳಿತು ಅಥವಾ ಬೇರೆಡೆ ಹೋಗಿ ಎಳನೀರು ಕುಡಿದಿದ್ದರೆ ರೈತರಿಗೆ ಬೇಸರವಾಗುತ್ತಿರಲಿಲ್ಲ. ರೈತರೆದುರೇ ಈ ರೀತಿಯಾಗಿ ವರ್ತಿಸಿದ್ದು ಅವರ ಕೆಂಗಣ್ಣಿಗೆ ಗುರಿಯಾಯಿತು.
-ಪಿ.ಎಸ್. ಪಾಟೀಲ