ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಅವಳಿ ನಗರದಲ್ಲಿ ಕ್ರಿಸ್‌ಮಸ್ ಸಂಭ್ರಮ

Vishwanath S
Updated On : 26 Dec 2013, 11:02 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಡಿ. 25
ಕ್ರಿಸ್‌ಮಸ್ ಹಬ್ಬದ ಸಂಭ್ರಮಾಚರಣೆ ಅವಳಿ ನಗರದಲ್ಲಿ ಬುಧವಾರ ಕಂಡುಬಂದಿತು.
ಮಂಗಳವಾರದಿಂದಲೇ ಚರ್ಚ್ ಹಾಗೂ ಮನೆಗಳಲ್ಲಿ ಕ್ರೈಸ್ತ ಬಾಂಧವರು ಹಬ್ಬದ ಆಚರಣೆಯಲ್ಲಿ ತೊಡಗಿಕೊಂಡಿದ್ದರು. ಕ್ರಿಸ್‌ಮಸ್‌ನ ಮುನ್ನಾ ದಿನ ತಡ ರಾತ್ರಿಯವರೆಗೆ ಚರ್ಚ್‌ಗಳಲ್ಲಿ ಪ್ರಾರ್ಥನೆ ನಡೆದವು.  ಏಸು ಹುಟ್ಟಿದ ಕ್ಷಣದ ನಿರೀಕ್ಷೆಯಲ್ಲಿ ಕ್ರೈಸ್ತರು ವಿಶೇಷ ಪ್ರಾರ್ಥನೆ ನಡೆಸಿದರು.
ದೂರದ ನಗರಗಳಲ್ಲಿ ಉದ್ಯೋಗದಲ್ಲಿದ್ದ ಕ್ರೈಸ್ತ್ ಬಾಂಧವರು ಕ್ರಿಸ್‌ಮಸ್ ಅಂಗವಾಗಿ ರಜೆಗೆ ಬಂದಿದ್ದರಿಂದ ಮನೆಗಳಲ್ಲಿ ಸಂತಸ ಇಮ್ಮಡಿಸಿತ್ತು. ಈ ಹಬ್ಬ ಕುಟುಂಬಗಳ ಸಮ್ಮಿಲನದ ಅಥವಾ ಕೌಟುಂಬಿಕ ಸಂಭ್ರಮದ ಹಬ್ಬವಾಗಿ ಮಾರ್ಪಾಡಾಗಿತ್ತು.
ಕುಟುಂಬದ ಸದಸ್ಯರು ಪರಸ್ಪರ ಉಡುಗೊರೆ-ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.ಪ್ರಮುಖವಾಗಿ ಸಾಂತಾಕ್ಲಾಸ್, ಸಂತ ನಿಕೋಲಸ್, ಸಂತ ಬಾಸಿಲ್ ಮೊದಲಾದವರ ಪ್ರತಿಮೆಗಳನ್ನು ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ಪರಸ್ಪರ ಉಡುಗೊರೆ ನೀಡಿದರು. ಕ್ರಿಸ್‌ಮಸ್ ಹಬ್ಬದ ಶುಭಾಷಯ ಹಾಗೂ ಹೊಸ ವರ್ಷದ ಶುಭಾಶಯ ಇರುವ ಆಕರ್ಷಣೀಯ ಕಾರ್ಡ್‌ಗಳೂ ವಿನಿಮಯಗೊಡವು.
ಕೆಲವೆಡೆ  ಮಕ್ಕಳು ಏಸುವಿನ ಜನನ ಕಥೆಯ ನಾಟಕಗಳನ್ನು ಮಾಡುತ್ತ, ಕೆರೋಲ್‌ಗಳನ್ನು ಹಾಡಿದರು. ಹೆಚ್ಚಿನ ಕಡೆ ಕ್ರಿಸ್‌ಮಸ್ ಸಂದರ್ಭದಲ್ಲಿ ಚರ್ಚುಗಳ ಹೊರಭಾಗದಲ್ಲಿ, ಮನೆಗಳ ಅಂಗಳದಲ್ಲಿ 'ಗೋದಲಿ' ನಿರ್ಮಾಣ ಮಾಡಿದ್ದರು. ಈ ಗೋದಲಿಗಳಲ್ಲಿ ಕ್ರಿಸ್ತನು ಹುಟ್ಟಿದಾಗ ಇದ್ದಿರಬಹುದಾದಂತಹ ಕೊಟ್ಟಿಗೆ, ಅಲ್ಲಿನ ಕುರಿಗಳು, ಸಂಭ್ರಮಗಳ ವಾತಾವರಣ ರೂಪಿಸಿದ್ದರು. ಆಲಂಕಾರಿಕ ನಕ್ಷತ್ರ ದೀಪಗಳನ್ನು ಗೋದಲಿಗಳಲ್ಲಿ, ಮನೆಗಳಲ್ಲಿ, ಚರ್ಚುಗಳಲ್ಲಿ ಹಾಗೂ ರಸ್ತೆಗಳಲ್ಲಿ ನೇತು ಹಾಕಿದ್ದರು. ಚರ್ಚ್‌ಗಳನ್ನು ವಿದ್ಯುತ್ ದೀಪಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು.
ಕ್ರಿಸ್‌ಮಸ್ ಟ್ರೀ: ಮನೆ ಎದುರು ಆಧುನಿಕ ಕ್ರಿಸ್‌ಮಸ್ ಟ್ರೀಯನ್ನೂ ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿತ್ತು. ಚರ್ಚುಗಳ ಒಳ- ಹೊರಭಾಗದಲ್ಲಿ, ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಕೆಲ ಖಾಸಗಿ ಸಂಸ್ಥೆಗಳಲ್ಲಿಯೂ ಶೃಂಗಾರಗೊಂಡ ಕ್ರಿಸ್‌ಮಸ್ ಟ್ರೀಗಳು ಕಂಡುಬಂದವು.
ವಿಶೇಷ ಭೋಜನ:  ಕ್ರಿಸ್‌ಮಸ್ ಅಂಗವಾಗಿ ಕ್ರೈಸ್ತ ಕುಟುಂಬಗಳು ಮಂಗಳವಾರ ಹಾಗೂ ಬುಧವಾರ ವಿಶೇಷ ಭೋಜನ ತಯಾರಿಸಿದ್ದವು. ಹಲವು ಬಗೆಯ ತಿಂಡಿಗಳು, ಕ್ರಿಸ್‌ಮಸ್‌ಗೆಂದೇ ತಯಾರಾಗುವ ಕರಿದ ತಿನಿಸುಗಳು, ಕೇಕ್‌ಗಳು ಹಾಗೂ ಚಳಿಗಾಲದ ಸಮಯದಲ್ಲಿ ಲಭ್ಯವಾಗುವ ವಿಶೇಷ ಹಣ್ಣು ಹಂಪಲುಗಳು ಕ್ರಿಸ್‌ಮಸ್ ಭೋಜನದ ಸವಿ ಹೆಚ್ಚಿಸಿದ್ದವು.
ಸಾಂತಾಕ್ಲಾಸ್: ಪುಟಾಣಿಗಳ ಹೀರೋ ಎಂದೇ ಕರೆಯಲ್ಪಡುವ ಸಾಂತಾಕ್ಲಾಸ್‌ನ ವೇಷ ಧರಿಸಿದ್ದ ಕೆಲವರು ಚರ್ಚ್‌ಗಳಲ್ಲಿ ಮಕ್ಕಳಿಗೆ ಉಡುಗೊರೆ ನೀಡುತ್ತಿದ್ದುದು ಕಂಡುಬಂದಿತು. ಬಾಸೆಲ್ ಮಿಶನ್ ಚರ್ಚ್, ಕೇಶ್ವಾಪುರದಲ್ಲಿ ನೂತನವಾಗಿ ನಿರ್ಮಿಸಿರುವ ಚರ್ಚ್, ರಮೇಶ ಭವನ ಬಳಿ ಬಾಲ ಏಸುವಿನ ಚರ್ಚ್ ಸೇರಿದಂತೆ ವಿವಿಧ ಚರ್ಚ್‌ಗಳಲ್ಲಿ ಮಕ್ಕಳು ಸಹ ಸಾಂತಾಕ್ಲಾಸ್ ವೇಷ ಧರಿಸಿ ಸಂಭ್ರಮಿಸಿದರು.
ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಹಬ್ಬ
ಧಾರವಾಡ:  ಏಸು ಜನ್ಮದಿನದ ಅಂಗವಾಗಿ ನಗರದ ಎಲ್ಲ ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಬುಧವಾರ ಏಸುವಿನ ಸುವಾರ್ತೆಯನ್ನು ಹೇಳುವ ಮೂಲಕ ಸಂಭ್ರಮದಿಂದ ಆಚರಿಸಲಾಯಿತು.
ನಗರದಲ್ಲಿನ ಹೆಬೀಕ್ ಹಾಗೂ ಸೆಂಟ್ ಜೋಸೆಫ್ ಚರ್ಚ್‌ಗಳಲ್ಲಿ ಎಲ್ಲರಿಗೂ ಸುಖ, ಶಾಂತಿ, ಸಮಾಧಾನದಿಂದ ಸಹಬಾಳ್ವೆ ನಡೆಸಲೆಂದು ಏಸುವಿನಲ್ಲಿ ಪಾರ್ಥನೆ ಸಲ್ಲಿಸಲಾಯಿತು. ಹೆಬೀಕ್ ಚರ್ಚನಲ್ಲಿ ಧರ್ಮಾಧ್ಯಕ್ಷ ರೆವರೆಂಡ್ ಆರ್.ಜೆ. ನಿರಂಜನ ಕರ್ತನ ಸಂದೇಶ ಹಾಗೂ ಕರ್ತನ ಜನ್ಮದ ವೃತ್ತಾಂತವನ್ನು ತಿಳಿಸಿದರು.
ಕ್ರೈಸ್ತ ಸಮಾಜದ ಮಕ್ಕಳಿಂದ ನೃತ್ಯ, ಸಂಗೀತ ಕಾರ್ಯಕ್ರಮಗಳು ನಡೆದವು. ವಿವಿಧೆಡೆ ಏಸುವಿನ ಜನನದ ಮಾದರಿಗಳನ್ನು ಸಿದ್ಧಪಡಿಸಿದ್ದರು. ಹಬ್ಬದ ಅಂಗವಾಗಿ ಎಲ್ಲರಿಗೂ ಸಿಹಿ ಹಂಚಲಾಯಿತು. ಸಾಂತಾಕ್ಲಾಸ್ ವೇಷಧಾರಿಗಳು ಪ್ರತಿ ಚರ್ಚನಲ್ಲಿ ಮಕ್ಕಳನ್ನು ರಂಜಿಸಿದರು. ಕ್ರಿಸ್‌ಮಸ್ ಶುಭಾಶಯ ಒಬ್ಬರಿಗೊಬ್ಬರು ವಿನಮಯ ಮಾಡಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement