ನಗೆಹಬ್ಬ, ಜನಪದ ಸಂಗೀತ ಕಾರ್ಯಕ್ರಮ
ಅಣ್ಣಿಗೇರಿ: ಸ್ಥಳೀಯ ಸಿದ್ಧಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಅಮೃತೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ನಗೆಹಬ್ಬ ಹಾಗೂ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.
ದಾಸೋಹಮಠದ ಶಿವಕುಮಾರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಮಾಜಿ ಕ್ರೆಡಲ್ ಅಧ್ಯಕ್ಷ ಷಣ್ಮುಖ ಗುರಿಕಾರ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ನಿಲಗುಂದ ಗ್ರಾಮದ ಮಾತಿನಮಲ್ಲ ಕಲಾವಿದ ಸುಭಾಷಚಂದ್ರ ಜಕ್ಕನ್ನವರ ಹಾಸ್ಯದ ನುಡಿಗಳ ಮೂಲಕ ನೆರದವರನ್ನು ರಂಜಿಸಿದರು.ಜಾನಪದ ಕಲಾವಿದ ಆನಂದ ಕಾಳೆ ಜನಪದ ಹಾಡುಗಳನ್ನು ಹಾಡಿದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಎಸ್.ಐ. ಜಕ್ಕನಗೌಡರ ಮಾತನಾಡಿ, ಸುಖ-ದುಃಖಗಳ ಸಮ್ಮಿಶ್ರಣವೇ ಬದುಕು. ನಿತ್ಯ ಚಟುವಟಿಕೆಯಲ್ಲಿ ನಗು ಬೇಕು. ನಗುವಿಲ್ಲದ ಜೀವನ ನಿರಾಧಾರವೆಂದು ಅಭಿಪ್ರಾಯಪಟ್ಟರು. ಶಿವಶಂಕರ ಕಲ್ಲೂರ, ಈಶ್ವರಚಂದ್ರ ಹೊಸಮನಿ, ಹಸನಸಾಬ ಗೂಡನಾಯ್ಕರ ಭಾಗವಹಿಸಿದ್ದರು. ದೀಪಾ ಜೈನರ ಪ್ರಾರ್ಥಿಸಿದರು. ಈರಪ್ಪ ಗುರಿಕಾರ ನಿರೂಪಿಸಿದರು. ಹುಸೇನಸಾಬ ಬೆಟಗೇರಿ ವಂದಿಸಿದರು.