ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಬಸವಣ್ಣನವರ ವಚನ ಸಾಹಿತ್ಯ ಅರಿಯಿರಿ

Vishwanath S
Updated On : 26 Dec 2013, 11:03 am

ಕನ್ನಡಪ್ರಭ ವಾರ್ತೆ, ಧಾರವಾಡ, ಡಿ. 25
ಬಸವಣ್ಣನವರು ಸಮಾಜದಲ್ಲಿ ಎಡರು-ತೊಡರು ಹಾಗೂ ಸುಧಾರಣೆಗಳ ಕ್ರಮಗಳನ್ನು ತಮ್ಮ ವಚನಗಳಲ್ಲಿ ಬಿಂಬಿಸಿದ್ದಾರೆ. ಪ್ರತಿಯೊಬ್ಬರೂ ಅವರ ವಚನ ಸಾಹಿತ್ಯವನ್ನು ಅರಿಯಬೇಕೆಂದು ನಾಡೋಜ ಡಾ. ಎಂ. ಎಂ. ಕಲಬುರ್ಗಿ ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಇಲ್ಲಿನ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ನಡೆದ ಡಾ. ಸಿ. ವೀರಣ್ಣ ಅವರು ರಚಿಸಿದ ಪರ್ಯಾಯ ಸಂಸ್ಕೃತಿ ವಚನ ಸಂಪುಟ ಬಿಡುಗಡೆಗೊಳಿಸಿ ಮಾತನಾಡಿದ ಅವರು, ವಚನ ಸಾಹಿತ್ಯ ಅಧ್ಯಯನ ಜಟಿಲವಾಗಿದ್ದು, ಸಂಪೂರ್ಣವಾಗಿ ಓದಿ ಅರಿಯುವ ಕೆಲಸ ಯುವ ಪೀಳಿಗೆ ಮಾಡಬೇಕೆಂದು ಹೇಳಿದರು.
ಕಳೆದ ಮೂರ್ನಾಲ್ಕು ದಶಕಗಳಿಂದಲೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಉತ್ತಮ ಕೃತಿಗಳನ್ನಲ್ಲದೇ, ವಿಚಾರ ಸಂಕಿರಣ, ಉಪನ್ಯಾಸ, ಶರಣ ಚಳವಳಿ, ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಐತಿಹಾಸಿಕ ಸಾಹಿತ್ಯವನ್ನು ಸ್ಮರಿಸುವ ಕೆಲಸ ಮಾಡುತ್ತಿದೆ ಎಂದರು.
ಗೋ. ರು. ಚನ್ನಬಸಪ್ಪ ಮಾತನಾಡಿ, ಪುರಾತನ ಕಾಲದಿಂದ ನಡೆದು ಬಂದ ಪದ್ದತಿ, ಪರಂಪರೆ ವಿರುದ್ಧ ಸಿಡಿದೆದ್ದ ಕಿಡಿಯೇ ವಚನ ಚಳವಳಿ. ಅಂದಿನ ವ್ಯವಸ್ಥೆಗೆ ವಚನ ಸಾಹಿತ್ಯ ಅಮೂಲಾಗ್ರ ಬದಲಾವಣೆ ತರದೇ ಹೋಗಿದ್ದರೆ ಗಂಭೀರವಾಗುತ್ತಿತ್ತು. ವಿಚಾರಧಾರೆಗೆ ಅನುಗುಣವಾಗಿ ಕಾರ್ಯಕ್ರಮ ರೂಪಿಸಿಕೊಂಡು ಅಖಿಲ ಭಾರತ ಮಟ್ಟದಲ್ಲಿ ಅನುಷ್ಠಾನಕ್ಕಾಗಿ ನಿರಂತರವಾಗಿ ಶರಣ ಸಾಹಿತ್ಯ ಪರಿಷತ್ ತರುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಚಿಂತಕ ರಂಜಾನ್ ದರ್ಗಾ ಮಾತನಾಡಿದರು.
ಕೃತಿ ಕರ್ತ ಡಾ. ಸಿ. ವೀರಣ್ಣ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಡಾ. ಶಿವಾನಂದ ಗಾಳಿ, ಡಾ. ಬಿ. ವಿ. ಗುಂಜಾಳ, ನಿಂಗಣ್ಣ ಕುಂಟಿ, ಎಸ್.ಎ. ಹಿರೇಮಠ, ಪ್ರೊ. ವಿ. ವಿ. ಹೆಬ್ಬಳ್ಳಿ, ರಾಮಚಂದ್ರ ಧೋಂಗಡೆ, ಮಾಲತಿ ಪಟ್ಟಣಶೆಟ್ಟಿ, ಡಾ. ಶ್ರೀಶೈಲ ಹುದ್ದಾರ, ಶಂಕರ ಹಲಗತ್ತಿ, ಶಂಕರ ಕುಂಬಿ, ಪ್ರೊ. ಶಂಭು ಹೆಗಡಾಳ ಇದ್ದರು. ಪಂ. ಸೋಮಶೇಖರ ಮರಡಿಮಠ ಪ್ರಾರ್ಥಿಸಿದರು. ವಿಶ್ವನಾಥ ಚೌಶೆಟ್ಟಿ ಸ್ವಾಗತಿಸಿದರು. ಗುರು ಹಿರೇಮಠ ನಿರೂಪಿಸಿದರು. ಜಿ.ಪಿ. ಚಿಕ್ಕೇರಿಯಪ್ಪ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement