ಬಸ್ ಟರ್ಮಿನಲ್ಗೆ ವಿರೋಧ
ಕನ್ನಡಪ್ರಭ ವಾರ್ತೆ, ಧಾರವಾಡ, ಡಿ. 25
ಇಲ್ಲಿನ ಕಲಾಭವನದ ಎದುರಿಗಿರುವ ಹೆಣ್ಣು ಮಕ್ಕಳ ಟ್ರೇನಿಂಗ್ ಕಾಲೇಜು ಆವರಣದಲ್ಲಿ ತ್ವರಿತ ಬಸ್ ಸಂಚಾರ ವ್ಯವಸ್ಥೆ (ಬಿಆರ್ಟಿಎಸ್) ಟರ್ಮಿನಲ್ ನಿರ್ಮಾಣಕ್ಕೆ ಶಿಕ್ಷಣ ಪ್ರೇಮಿಗಳು ಹಾಗೂ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆಯಲ್ಲಿರುವ ಕಾಲೇಜು ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಸಭೆ ಸೇರಿ, ಉದ್ದೇಶಿತ ಬಸ್ ಟರ್ಮಿನಲ್ ನಿರ್ಮಾಣ ಮಾಡದಂತೆ ನಿರ್ಣಯ ಕೈಗೊಂಡು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಕಾರ್ಯದರ್ಶಿ, ಜಿಲ್ಲಾಧಿಕಾರಿ ಮತ್ತು ಸಂಬಂಧಿಸಿದ ಇಲಾಖೆಗಳಿಗೆ ಮನವಿ ಸಲ್ಲಿಸಿದೆ.
ಸುಮಾರು 200 ಯುವತಿಯರು ಇಲ್ಲಿಯ ಆವರಣದಲ್ಲಿರುವ ವಸತಿ ನಿಲಯಗಳಲ್ಲಿ ವಾಸವಾಗಿರುವುದರಿಂದ ಅವರ ರಕ್ಷಣೆಗೆ, ದೈನಂದಿನ ಚಟುವಟಿಕೆಗಳಿಗೆ ಹಾಗೂ ವಿದ್ಯಾಭ್ಯಾಸಕ್ಕೆ ಈ ನೂತನ ವ್ಯವಸ್ಥೆ ಅಡ್ಡಿಯಾಗುತ್ತದೆ. ಸಂಸ್ಥೆಯ ಆವರಣದಲ್ಲಿಯೇ ಪಾಠಾಭ್ಯಾಸ ಆದರ್ಶ ಪ್ರಾಥಮಿಕ ಶಾಲೆಯೂ ಇದ್ದು ಸುಮಾರು 400 ಬಾಲಕಿಯರು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಕಾಲೇಜು ಸಮೀಪದಲ್ಲಿಯೇ ಇತರ ಖಾಸಗಿ ಶಿಕ್ಷಣ ಸಂಸ್ಥೆಗಳು, ಕರ್ನಾಟಕ ವಿದ್ಯಾವರ್ಧಕ ಸಂಘ, ಉದ್ಯಾನವನ ಇರುವುದರಿಂದ ಶೈಕ್ಷಣಿಕ ವಾತಾವರಣಕ್ಕೂ ಈ ಬಸ್ ಟರ್ಮಿನಲ್ ತೀವ್ರ ವ್ಯತ್ಯಯ ಉಂಟು ಮಾಡುತ್ತದೆ ಎಂದು ಕಾಲೇಜು ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳಾದ ಹಿರಿಯ ಪ್ರಾಧ್ಯಾಪಕಿ ಡಾ. ಸರೋಜಿನಿ ಶಿಂತ್ರಿ, ಹಿರಿಯ ಶಿಕ್ಷಣ ತಜ್ಞ ಶಿವಶಂಕರ ಹಿರೇಮಠ, ಸಾಹಿತಿ ಮೋಹನ ನಾಗಮ್ಮನವರ, ಸೂರಯ್ಯಾ ಜಮಾದಾರ, ಪಾರ್ವತಿ ಹಾಲಬಾವಿ ಸೇರಿದಂತೆ ಅನೇಕರು ಸರ್ಕಾರಕ್ಕೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.
ಶತಮಾನ ಕಂಡ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ಹೆಣ್ಣು ಮಕ್ಕಳ ಟ್ರೇನಿಂಗ್ ಕಾಲೇಜಿನ ಎಲ್ಲ ಹಳೆಯ ಕಟ್ಟಡಗಳನ್ನು ಪಾರಂಪರಿಕ ಕಟ್ಟಡಗಳೆಂದು ಗುರುತಿಸಲಾಗಿದೆ. ಈ ಕುರಿತು ಇನ್ಟ್ಯಾಕ್ ಸಂಸ್ಥೆ ಅಧ್ಯಯನ ನಡೆಸಿ ವರದಿ ನೀಡಿದೆ. ಹಾಗಾಗಿ ಇಲ್ಲಿಯ ಕಟ್ಟಡಗಳು ಮತ್ತು ನಿವೇಶನವು ರಕ್ಷಣಾತ್ಮಕ ಸ್ಮಾರಕಗಳ ವ್ಯಾಪ್ತಿಗೆ ಬರುವುದರಿಂದ ಆವರಣದ ಮಹತ್ವವನ್ನು ಅರಿಯದೇ ಅಲ್ಲಿ ಶೈಕ್ಷಣಿಕ ತರಬೇತಿಯ ಉದ್ದೇಶಗಳನ್ನು ಹೊರತುಪಡಿಸಿ ಇತರ ಯಾವುದೇ ಉದ್ದೇಶಗಳಿಗೆ ಇಲ್ಲಿಯ ನೆಲವನ್ನು ಬಳಸುವಂತಿಲ್ಲ. ಆದರೂ ಸರ್ಕಾರ ಈ ತೀರ್ಮಾನ ತೆಗೆದುಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಶಿಕ್ಷಣ ಪ್ರೇಮಿಗಳ ಆಗ್ರಹ.
ಈ ಎಲ್ಲ ಹಿನ್ನೆಲೆಗಳನ್ನು ಗಮನಿಸಿ ಸರ್ಕಾರ ಬಸ್ ಟರ್ಮಿನಲ್ ನಿರ್ಮಾಣಕ್ಕೆ ಬೇರೆ ಜಾಗ ಆಯ್ಕೆ ಮಾಡಿಕೊಳ್ಳಬೇಕೆಂದು ಒತ್ತಾಯಿಸಲಾಗಿದೆ.
ಸುಮಾರು 200 ಯುವತಿಯರು ಇಲ್ಲಿಯ ಆವರಣದಲ್ಲಿರುವ ವಸತಿ ನಿಲಯಗಳಲ್ಲಿ ವಾಸವಾಗಿರುವುದರಿಂದ ಅವರ ರಕ್ಷಣೆಗೆ, ದೈನಂದಿನ ಚಟುವಟಿಕೆಗೆ ಹಾಗೂ ವಿದ್ಯಾಭ್ಯಾಸಕ್ಕೆ ಈ ನೂತನ ವ್ಯವಸ್ಥೆ ಅಡ್ಡಿಯಾಗುತ್ತದೆ.