ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ರೈತರಿಗೆ 'ಮಹಾ' ಈರುಳ್ಳಿ ಕಣ್ಣೀರು

Vishwanath S
Updated On : 26 Dec 2013, 11:02 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಡಿ. 25
ಮಹಾರಾಷ್ಟ್ರದಿಂದ ಕರ್ನಾಟಕದ ಎಪಿಎಂಸಿಗಳಿಗೆ ಅಪಾರ ಪ್ರಮಾಣದಲ್ಲಿ ಬರುತ್ತಿರುವ ಈರುಳ್ಳಿ ಸ್ಥಳೀಯ ರೈತರ ಕಣ್ಣೀರಿಗೆ ಕಾರಣವಾಗಿದೆ.
ಮೊದಲೇ ಬರದ ಬಾಧೆಯಿಂದ ಕಂಗೆಟ್ಟಿರುವ ಇಲ್ಲಿನ ರೈತರು ಅಷ್ಟೋ ಇಷ್ಟೋ ಈರುಳ್ಳಿ ಬೆಳೆದಿದ್ದಾರೆ. ಈ ಬೆಳೆ ಮಾರಿ, ಬಂದ ಹಣದಲ್ಲಿ ಎರಡೊತ್ತಿನ ಊಟ ಮಾಡಿದರಾಯಿತು ಎಂದು ಕೊಂಡಿದ್ದರೆ ಮಹಾರಾಷ್ಟ್ರದಿಂದ ಬರುತ್ತಿರುವ ಈರುಳ್ಳಿ ಆ ತುತ್ತನ್ನೂ ಕಸಿದುಕೊಂಡಿದೆ.
ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಬೆಳಗಾವಿ ಎಪಿಎಂಸಿ, ಏಷ್ಯಾದಲ್ಲಿಯೇ ದೊಡ್ಡ ಎಪಿಎಂಸಿ ಎಂಬ ಖ್ಯಾತಿ ಪಡೆದಿರುವ ಹುಬ್ಬಳ್ಳಿಯ ಜಗಜ್ಯೋತಿ ಬಸವೇಶ್ವರ ಎಪಿಎಂಸಿ, ಧಾರವಾಡ, ಗದಗ ಸೇರಿದಂತೆ ಈ ಭಾಗದಲ್ಲಿರುವ ಎಪಿಎಂಸಿಗಳಿಗೆ ಮಹಾರಾಷ್ಟ್ರ ಈರುಳ್ಳಿ ಬೆಳೆಗಾರರು ಲಗ್ಗೆ ಇಟ್ಟಿದ್ದಾರೆ. ಮಹಾರಾಷ್ಟ್ರದಿಂದ ರಾಜ್ಯಕ್ಕೆ ನಿತ್ಯ ಸಾವಿರಾರು ಕ್ವಿಂಟಲ್ ಈರುಳ್ಳಿ ಬರುತ್ತಿದೆ. ನೀರಾವರಿ ಅವಲಂಬಿಸಿರುವ ಮಹಾರಾಷ್ಟ್ರದ ರೈತರು ಯಥೇಚ್ಛ ಪ್ರಮಾಣದಲ್ಲಿ ಈರುಳ್ಳಿ ಬೆಳೆಯುತ್ತಿದ್ದಾರೆ. ಪ್ರತಿ ಗ್ರಾಮದಲ್ಲಿ ಮೂರ್ನಾಲ್ಕು ಈರುಳ್ಳಿ ಬೆಳೆಗಾರರ ಸಂಘವನ್ನು ರಚಿಸುವ ಮೂಲಕ ಈರುಳ್ಳಿ ಬೆಳೆ ಬೆಳೆಯಲು ಪ್ರೋತ್ಸಾಹಿಸಲಾಗುತ್ತಿದೆ. ಹೀಗಾಗಿ, ಅಪಾರ ಪ್ರಮಾಣದಲ್ಲಿ ಈರುಳ್ಳಿ ಬೆಳೆಯುತ್ತಿರುವ ಮಹಾರಾಷ್ಟ್ರದ ರೈತರು ಆ ರಾಜ್ಯದ ಅಗತ್ಯತೆಯನ್ನು ಪೂರೈಸಿದ ಬಳಿಕ, ಪಕ್ಕದ ರಾಜ್ಯಗಳಿಗೆ ತೆರಳಿ ಬಂದಷ್ಟು ಬೆಲೆಗೆ ಈರುಳ್ಳಿ ಮಾರಾಟ ಮಾಡುತ್ತಿದ್ದಾರೆ. ಇಂಥ ಈರುಳ್ಳಿ ಇದೀಗ ಕರ್ನಾಟಕಕ್ಕೆ ಬರುತ್ತಿದೆ.
ಬರದ ನೋವಿಗೆ ಬರೆ: ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಬರ ಎದುರಾಗಿದೆ. ಅಂಥದರಲ್ಲಿ ಈ ಬಾರಿಯೂ ಮಳೆಯಾಗದೇ ರೈತರು ಸಮಸ್ಯೆ ಎದುರಿಸಿದ್ದಾರೆ. ಈ ಪೈಕಿ ಒಂದಿಷ್ಟು ಈರುಳ್ಳಿ ಬೆಳೆದಿರುವ ರೈತರು ಉತ್ತಮ ಬೆಲೆ ನಿರೀಕ್ಷಿಸಿದರೆ ಆ ನಿರೀಕ್ಷೆಯೂ ತಲೆ ಕೆಳಗಾಗಿದೆ. ಏತನ್ಮಧ್ಯೆ ಮಹಾರಾಷ್ಟ್ರ ಬೆಳೆಗಾರರು ಇಲ್ಲಿಗೆ ಬಂದು ಅತ್ಯಂತ ಕಡಿಮೆ ಬೆಲೆಗೆ ಈರುಳ್ಳಿ ಮಾರುತ್ತಿರುವುದರಿಂದ ಸ್ಥಳೀಯ ರೈತರೂ ಕಡಿಮೆ ಬೆಲೆಗೆ ಈರುಳ್ಳಿ ಮಾರಾಟ ಮಾಡಿ ಹಾನಿಗೊಳಗಾಗುತ್ತಿದ್ದಾರೆ.
ಜಗಳಕ್ಕೂ ಕಾರಣ: ರಾಜ್ಯದಲ್ಲಿ ಈರುಳ್ಳಿ ಖರೀದಿ ಪ್ರಕ್ರಿಯೆ ಆರಂಭವಾದಾಗ ರೈತರು ಖುಷಿಯಲ್ಲಿದ್ದರು. ಆರಂಭದಲ್ಲಿ ಒಂದು ಕ್ವಿಂಟಲ್ ಈರುಳ್ಳಿ ರು. 5 ಸಾವಿರದಿಂದ ರು. 5,500ರ ವರೆಗೂ ಮಾರಾಟವಾಗಿತ್ತು. ಕೆಲ ದಿನಗಳ ಬಳಿಕ ರು. 2 ಸಾವಿರದಿಂದ ರು. 3 ಸಾವಿರಕ್ಕೆ ಬೆಲೆ ಕುಸಿಯಿತು. ಕೊನೆಗಂತೂ ರು. 1 ಸಾವಿರದ ವರೆಗೆ ಮಾತ್ರ ಬೆಲೆ ಬಂತು. ಇದರಿಂದಾಗಿ ರೈತರು ಹಾಗೂ ವ್ಯಾಪಾರಸ್ಥರ ನಡುವೆ ತಿಕ್ಕಾಟ ನಡೆಯಿತು. ಇಬ್ಬರೂ ಪ್ರತಿಭಟನೆಯ ಹಾದಿ ಹಿಡಿದ ಪರಿಣಾಮ ಈರುಳ್ಳಿ ಖರೀದಿಯೂ ನಿಂತಿತು. ಕೊನೆಗೆ ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಬಿಕ್ಕಟ್ಟು ಪರಿಹಾರವಾಗಿ ಖರೀದಿ ಶುರುವಾಯಿತಾದರೂ ರೈತರಿಗೆ ಉತ್ತಮ ಬೆಲೆ ಮಾತ್ರ ಸಿಗುತ್ತಿಲ್ಲ. ಹುಬ್ಬಳ್ಳಿ ಎಪಿಎಂಸಿಯಲ್ಲಿ ಡಿ. 24ರಂದು ರು. 600 ಪ್ರತಿ ಕ್ವಿಂಟಲ್‌ನಂತೆ ಈರುಳ್ಳಿ ಖರೀದಿ ಮಾಡಲಾಗಿದೆ.
ಅಂದಹಾಗೆ, ಹೀಗೆ ದರಪಟ್ಟಿಯಲ್ಲಿ ಏರಿಳಿತಕ್ಕೆ ಮಹಾರಾಷ್ಟ್ರದಿಂದ ಬರುತ್ತಿರುವ ಈರುಳ್ಳಿಯೇ ಕಾರಣ. ಮಹಾರಾಷ್ಟ್ರದಿಂದ ಈರುಳ್ಳಿ ಯಥೇಚ್ಛ ಪ್ರಮಾಣದಲ್ಲಿ ಬರುತ್ತಿರುವುದರ ಜತೆಗೆ ಕಡಿಮೆ ದರದಲ್ಲಿ ಸಿಗುತ್ತಿರುವುದರಿಂದ ವ್ಯಾಪಾರಸ್ಥರು ಸ್ಥಳೀಯ ರೈತರು ಬೆಳೆದ ಈರುಳ್ಳಿ ಕಡೆಗಣಿಸಿ ಮಹಾರಾಷ್ಟ್ರ ರೈತರಿಗೆ ಮಣೆ ಹಾಕುತ್ತಿದ್ದಾರೆ. ಸ್ಥಳೀಯರ ಈರುಳ್ಳಿಗೆ ಮನ ಬಂದಂತೆ ದರ ನಿಗದಿ ಪಡಿಸುತ್ತಿದ್ದಾರೆ. ಇದರಿಂದಾಗಿ ಸ್ಥಳೀಯ ರೈತರು ಹಾಗೂ ವ್ಯಾಪಾರಸ್ಥರು ಕಿತ್ತಾಡುವಂತಾಗಿದೆ.
ಪ್ರವೇಶ ನಿಷೇಧಿಸಲಿ: ಮಹಾರಾಷ್ಟ್ರದಿಂದ ಈರುಳ್ಳಿ ರಾಜ್ಯಕ್ಕೆ ಬರುತ್ತಿರುವುದರಿಂದ ಇಲ್ಲಿನ ರೈತರು ಕಷ್ಟಕ್ಕೆ ಸಿಲುಕಿದ್ದರೂ ರಾಜ್ಯ ಸರ್ಕಾರ ಮಾತ್ರ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಈ ಹಿಂದೆ ಪಕ್ಕದ ರಾಜ್ಯಗಳಿಂದ ರಾಜ್ಯಕ್ಕೆ ಕಬ್ಬು ಬರುತ್ತಿದ್ದ ಪರಿಣಾಮ ರೈತರು ಇದೇ ರೀತಿಯ ಸಮಸ್ಯೆ ಅನುಭವಿಸಿದ್ದರು. ಆಗ ಸರ್ಕಾರ ಹೊರ ರಾಜ್ಯದ ಕಬ್ಬು ತುಂಬಿದ ಲಾರಿ ರಾಜ್ಯಕ್ಕೆ ಬಾರದಂತೆ ತಡೆದಿತ್ತು. ಅದೇ ಮಾದರಿಯಲ್ಲಿ ಇದೀಗ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬೆಳಗಾವಿಯ ನಿಪ್ಪಾಣಿ ಹಾಗೂ ಬಿಜಾಪುರ ಚಡಚಣ ಮೂಲಕವಾಗಿ ಬರುತ್ತಿರುವ ಲಾರಿಗಳನ್ನು ಅಲ್ಲಿಯೇ ತಡೆಯಬೇಕು.
ಅಂದಾಗ ಸ್ಥಳೀಯ ರೈತರಿಗೆ ಅನುಕೂಲವಾಗಲಿದೆ ಎಂಬಂಶವನ್ನು ಈರುಳ್ಳಿ ಬೆಳೆಗಾರರು ಗಮನಕ್ಕೆ ತಂದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಹೀಗಾಗಿ ಈರುಳ್ಳಿ ಬೆಳೆಗಾರರು ಕಣ್ಣೀರು ಸುರಿಸುವಂತಾಗಿದೆ.
  ರಾಜ್ಯ ಸರ್ಕಾರಕ್ಕೆ ಈರುಳ್ಳಿ ಬೆಳೆಗಾರರ ಸಮಸ್ಯೆ ಕಣ್ಣಿಗೆ ಕಾಣಿಸುತ್ತಿಲ್ಲ. ರೈತರ ನೆರವಿಗೆ ಬಾರದಿರುವ ಸರ್ಕಾರ ಕನಿಷ್ಠ ಪಕ್ಷ ಮಹಾರಾಷ್ಟ್ರದಿಂದ ಬರುತ್ತಿರುವ ಈರುಳ್ಳಿ ಪ್ರವೇಶ ನಿಷೇಧಿಸಲಿ. ಸರ್ಕಾರ ಕ್ರಮಕ್ಕೆ ಮುಂದಾಗದೇ ಹೋದಲ್ಲಿ ಬರದಿಂದ ಹಾನಿ ಅನುಭವಿಸಿರುವ ರೈತರು ಮತ್ತಷ್ಟು ಸಂಕಷ್ಟಕ್ಕೀಡಾಗಲಿದ್ದಾರೆ. ಸರ್ಕಾರ ತುರ್ತು ಕ್ರಮ ಕೈಗೊಳ್ಳದಿದ್ದಲ್ಲಿ ರಾಜ್ಯವ್ಯಾಪಿ ಹೋರಾಟಕ್ಕೆ ಅಣಿಯಾಗಬೇಕಾದೀತು.
- ಎಸ್.ಬಿ. ಹನಸಿ
ಅಧ್ಯಕ್ಷ, ರಾಜ್ಯ ರೈತ ಹಿತರಕ್ಷಣಾ ಸಮಿತಿ



-ಪ್ರಕಾಶ ಎಸ್. ಶೇಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement