47 ಎಕರೆ ಭೂಮಿ ಅತಿಕ್ರಮಣ: ಸಿಬಿಐ ತನಿಖೆಗೆ ಆಗ್ರಹ
ಹುಬ್ಬಳ್ಳಿ: ಶಾಸಕ ರಮೇಶಕುಮಾರ ಅತಿಕ್ರಮಿಸಿರುವ ರಕ್ಷಿತಾರಣ್ಯ ಪ್ರದೇಶ ಹಾಗೂ ಶಾಸಕ ಅನಿಲ ಲಾಡ್ ಮತ್ತು ರಜನಿ ಲಾಡ್ ಸಂಡೂರಿನ ಈಶಾನ್ಯ ಪ್ರದೇಶದಲ್ಲಿ ಅತಿಕ್ರಮಿಸಿದ ಭೂಮಿಗೆ ಸಂಬಂಧಿಸಿದ ಪ್ರಕರಣಗಳೆರಡನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಆಗ್ರಹಿಸಿದ್ದಾರೆ.
ಶಾಸಕ ರಮೇಶಕುಮಾರ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಹೊಸ ಹುಡ್ಯಾ ಗ್ರಾಮದ ಸರ್ವೇ ನಂ. 1 ಮತ್ತು 2ರ ಜನಿಗಲಕುಂಟೆ ರಕ್ಷಿತಾರಣ್ಯ ಪ್ರದೇಶದಲ್ಲಿ ಭೂಮಿ ಅತಿಕ್ರಮಿಸಿದ್ದರೆ, ಶಾಸಕ ಅನಿಲ ಲಾಡ್ ಹಾಗೂ ರಜನಿ ಲಾಡ್ ಈಶಾನ್ಯ ಪ್ರದೇಶದಲ್ಲಿನ 47.24 ಎಕರೆ ಭೂಮಿ ಅತಿಕ್ರಮಿಸಿಕೊಂಡಿದ್ದಾರೆ ಎಂದು ದೂರಿದರು.
ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ದಾಖಲಾತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ಮಾಜಿ ಸ್ಪೀಕರ್ ರಮೇಶಕುಮಾರ ರಾಜಕೀಯ ಪ್ರಭಾವ ಬಳಸಿಕೊಂಡು ರಕ್ಷಿತಾರಣ್ಯ ಪ್ರದೇಶದಲ್ಲಿ 61 ಎಕರೆ 39 ಗುಂಟೆ ಭೂಮಿ ಅತಿಕ್ರಮಿಸಿದ್ದಾರೆ. ಆಗ ಸಿಎಂ ಆಗಿದ್ದ ಬಿಎಸ್ವೈ ಅವರ ಮೇಲೆ ಪ್ರಭಾವ ಬೀರಿ ಅತಿಕ್ರಮಿತ ಜಾಗೆಯ ಜಂಟಿ ಸರ್ವೇ ಕಾರ್ಯವನ್ನು ನಿಲ್ಲಿಸುವಲ್ಲಿಯೂ ರಮೇಶಕುಮಾರ ಯಶಸ್ವಿಯಾಗಿದ್ದರು ಎಂದು ಹಿರೇಮಠ ದೂರಿದರು.
ಸಿಎಂ ಕಚೇರಿಯಿಂದ ಕಾರ್ಯದರ್ಶಿ ಕುಮಾರ ಪುಷ್ಕರ್ ದೂರವಾಣಿಯಲ್ಲಿ ಜಂಟಿ ಸರ್ವೇ ಕಾರ್ಯ ನಿಲ್ಲಿಸುವಂತೆ ತಿಳಿಸಿದ್ದರೆಂಬುದು ಕೋಲಾರ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ, ಬೆಂಗಳೂರು ಅರಣ್ಯ ಸಂರಕ್ಷಣಾಧಿಕಾರಿಗೆ ಬರೆದಿರುವ ಪತ್ರದಿಂದ ಸ್ಪಷ್ಟವಾಗುತ್ತದೆ ಎಂದೂ ಹಿರೇಮಠ ದಾಖಲೆ ಪ್ರದರ್ಶಿಸಿದರು.
ಈ ಬಗ್ಗೆ 14-8-2003ರಲ್ಲೇ ಪ್ರಕರಣ ದಾಖಲಾಗಿದೆ. ಹತ್ತು ವರ್ಷಗಳಿಂದ ಶಾಸಕ ರಮೇಶಕುಮಾರ ಅಕ್ರಮವಾಗಿ ಜಾಗ ಅನುಭವಿಸುತ್ತಿದ್ದಾರೆ ಎಂಬುದು ಸಾಬೀತಾಗುತ್ತದೆ. ಅಲ್ಲದೇ ಅಕ್ರಮಿತ ಪ್ರದೇಶದಲ್ಲಿನ ಗಡಿ ಕಲ್ಲುಗಳನ್ನು ಸಹಾ ಅವರು ತೆಗೆದು ಹಾಕಿದ್ದಾರೆ ಎಂದರು.
ಕೇವಲ 22 ಎಕರೆ: ಅತಿಕ್ರಮಿಸಿರುವ ಜಾಗದಲ್ಲಿ ತಾರಸಿ ಮನೆ, ಆಳುಗಳ ಮನೆ ಹಾಗೂ ಕೃಷಿ ಚಟುವಟಿಕೆ ನಡೆಸಲಾಗುತ್ತಿದೆ. ರಮೇಶಕುಮಾರ ಅವರು ಜಮೀನು ಖರೀದಿಸಿದ್ದಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ 26 ದಾಖಲೆಗಳು ಕೇವಲ 22 ಎಕರೆಗೆ ಸಂಬಂಧಿಸಿದ್ದಾಗಿವೆ. ಜಿನಗಲಕುಂಟೆ ಸರ್ವೇ ನಂ. 1 ಮತ್ತು 2ರಲ್ಲಿ ಹೊಂದಿರುವ ಭೂಮಿ ಬಗ್ಗೆ ಶಾಸಕರ ಬಳಿ ಪೂರಕ ದಾಖಲಾತಿಗಳಿಲ್ಲ. ಆದ್ದರಿಂದ ಈ ಜಾಗವನ್ನು ಸರ್ಕಾರ ಮರಳಿ ಪಡೆಯಬೇಕು ಎಂದು ಒತ್ತಾಯಿಸಿದರು.
ಲಾಡ್ ಹಾಗೂ ರಮೇಶಕುಮಾರ 2003ರಿಂದಲೇ ಅಕ್ರಮಗಳನ್ನು ಎಸಗುತ್ತಾ ಬಂದಿದ್ದಾರೆ. ಕಾನೂನು ಮಾಡುವವರೇ ಕಾನೂನು ಮುರಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆದ್ದರಿಂದ ಈ ಎರಡೂ ಪ್ರಕರಣಗಳನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಹಿರೇಮಠ ಒತ್ತಾಯಿಸಿದರು.