ನೀರಾವರಿ ಅನುದಾನ ಬಳಕೆಗೆ ಯೋಜನೆ ಅಗತ್ಯ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಡಿ. 26
ನೀರಾವರಿ ಸೌಲಭ್ಯಕ್ಕೆ ರು. 50 ಸಾವಿರ ಕೋಟಿ ಮೀಸಲು ಎಂದು ಹೇಳುವ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒದಗಿಸಿರುವ ಅನುದಾನದ ಸಮರ್ಪಕ ಬಳಕೆ ಬಗ್ಗೆ ಯೋಜನೆ ರೂಪಿಸುವುದು ಅಗತ್ಯ ಎಂದು ಪ್ರತಿಪಕ್ಷ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಗುರುವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತಕ್ಕೆ ಬಂದ ನಂತರ ಕೃಷ್ಣಾ ಕಣಿವೆಯ ನೀರನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ ಕೃಷ್ಣಾ ಬಿ ಸ್ಕೀಂನಲ್ಲಿ ರಾಜ್ಯಕ್ಕೆ ಲಭಿಸಿರುವ ನೀರನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲಾಗುತ್ತಿಲ್ಲ. ಆದರೆ ಆಂಧ್ರಪ್ರದೇಶ ಮಾತ್ರ ಈಗಾಗಲೇ ನ್ಯಾಯಾಧಿಕರಣದಿಂದ ದೊರೆತಿರುವ ನೀರನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಳ್ಳುವುದಷ್ಟೇ ಅಲ್ಲ, ನ್ಯಾಯಾಧಿಕರಣದ ಅಂತಿಮ ತೀರ್ಪಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಗೆಜೆಟ್ ನೋಟಿಫಿಕೇಷನ್ ಬೇಡ ಎಂದು ಒತ್ತಾಯ ತರುವ ಯತ್ನ ಮಾಡುತ್ತಿದೆ.
ರಾಜ್ಯ ಸರ್ಕಾರ ಮಾತ್ರ ಕೃಷ್ಣಾ ಕಣಿವೆ ನೀರಿನ ಸದ್ಬಳಕೆ ಕುರಿತು ಇನ್ನೂ ಸರ್ವಪಕ್ಷಗಳೊಂದಿಗೆ ಸಭೆ ಕೂಡ ಮಾಡಿಲ್ಲ. ಸರ್ವ ಪಕ್ಷದ ಸಭೆ ಕುರಿತು ಕೇಳಿದರೆ ಮೊದಲು ನ್ಯಾಯಾಧಿಕರಣದ ಎದುರು ರಾಜ್ಯದ ವಾದ ಮಂಡಿಸಿದ ಕಾನೂನು ತಜ್ಞರೊಂದಿಗೆ ಚರ್ಚಿಸಿ ಸರ್ವಪಕ್ಷದ ಸಭೆ ಕುರಿತು ಚಿಂತನೆ ಮಾಡಲಾಗುವುದು ಎಂದು ಹೇಳುತ್ತಿದೆ.
ಬೆಳಗಾವಿಯಲ್ಲಿ ನಡೆದ ಚಳಿಗಾಲ ಅಧಿವೇಶನದಲ್ಲಿ ಕೂಡ ಕೃಷ್ಣಾ ಕಣಿವೆ ನೀರಿನ ಕುರಿತು ಚರ್ಚೆ ಆಗಬೇಕಿತ್ತು. ಆದರೆ, ಬೆಳಗಾವಿ ಅಧಿವೇಶನದಲ್ಲಿ ಆಗಿದ್ದೇ ಬೇರೆ, ಪ್ರತಿಪಕ್ಷ ನಾಯಕನಾಗಿ ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತು ಒತ್ತಾಯ ಮಾಡಿದ ನಂತರವೇ ಯೋಜನೆಯ ಕುರಿತು ಸಮಗ್ರ ಚರ್ಚೆಯಾಯಿತು. ಹೊಸಪೇಟೆಯಿಂದ ಕೂಡಲಸಂಗಮದವರೆಗೆ ಪಾದಯಾತ್ರೆ ಮಾಡಿರುವ ಕಾಂಗ್ರೆಸ್ಸಿಗರು ಕೃಷ್ಣಾ ಕಣಿವೆ ಯೋಜನೆ ಬಗ್ಗೆ ನಮ್ಮ ಬದ್ಧತೆ ಇದೆ ಎಂದು ಹೇಳುತ್ತಿದ್ದಾರೆ. ಆದರೆ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗುವ ಮೊದಲು ಕಾವೇರಿಗಾಗಿ ಪಾದಯಾತ್ರೆ ಮಾಡಿದ್ದರು. ಆದರೆ ಅವರ ಆಡಳಿತಾವಧಿಯಲ್ಲೇ ಕಾವೇರಿ ನೀರಿನಿಂದ ರಾಜ್ಯ ವಂಚಿತವಾಗಿದೆ ಎಂದರು.
ನ್ಯಾಯಾಧಿಕರಣ ನೀಡಿರುವ ತೀರ್ಪಿನಲ್ಲಿ ರಾಜ್ಯಕ್ಕೆ ಮಾರಕವಾಗುವಂತಹ 12 ಅಂಶಗಳು ಇದ್ದು, ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಕ್ಕೆ ಅನ್ಯಾಯವಾಗಿಲ್ಲ. ಹೀಗಾಗಿ ಗೆಜೆಟ್ ನೋಟಿಫಿಕೇಷನ್‌ಗೆ ಕೇಂದ್ರವನ್ನು ಒತ್ತಾಯಿಸಲಾಗುವುದು ಎಂದು ಹೇಳುತ್ತಿರುವುದು ಖಂಡನೀಯ.
ನ್ಯಾಯಾಧಿಕರಣ ಅಂತಿಮ ತೀರ್ಪು ನೀಡಿ ಈಗಾಗಲೇ 3 ತಿಂಗಳು ಆಗಿದ್ದರೂ ತೀರ್ಪಿನ ಸಾಧಕ ಬಾಧಕಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ವ ಪಕ್ಷ ಸಭೆ ಕರೆಯದೇ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದರು.