ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಮರಳು ಸಾಗಣೆದಾರರ ಮೇಲೆ ದಬ್ಬಾಳಿಕೆ: ಎಚ್ಡಿಕೆ

Vishwanath S
Updated On : 27 Dec 2013, 12:24 pm

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಡಿ. 26
ನೂತನ ಮರಳು ಸಾಗಾಣಿಕೆ ಕಾಯ್ದೆ ಜಾರಿಗೆ ತರುವ ಮೂಲಕ ರಾಜ್ಯ ಸರ್ಕಾರ ಮರಳು ಸಾಗಾಣಿಕೆದಾರರ ಮೇಲೆ ದಬ್ಬಾಳಿಕೆ ಮಾಡಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಗುರುವಾರ ಇಲ್ಲಿನ ಗಬ್ಬೂರ ಬೈಪಾಸ್ ಬಳಿ ತುಂಗಭದ್ರಾ ಮರಳು ಸಾಗಾಣಿಕೆದಾರರ ಸಂಘದ ಸದಸ್ಯರು ನಡೆಸುತ್ತಿರುವ ಅನಿರ್ದಿಷ್ಠಾವಧಿ ಮುಷ್ಕರ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಸರ್ಕಾರ ಜಾರಿಗೊಳಿಸಿರುವ ಹೊಸ ಕಾಯ್ದೆ ಹಿಂಪಡೆಯುವವರೆಗೆ ಮುಷ್ಕರ ನಿಲ್ಲಿಸದೇ ಹೋರಾಟ ಮುಂದುವರಿಸಿ ಎಂದು ಬೆಂಬಲ ಸೂಚಿಸಿದರು.
ಮರಳು ಸಾಗಾಣಿಕೆ ಉದ್ದಿಮೆಯಲ್ಲಿ ತೊಡಗಿಸಿಕೊಂಡಿರುವವರು ವಿವಿಧ ಇಲಾಖೆ ಅಧಿಕಾರಿಗಳಿಗೆ ಚಂದಾ ನೀಡುವಂತಹ ಪರಿಸ್ಥಿತಿ ಇದೆ. ಇತ್ತೀಚಿನ ದಿನಗಳಲ್ಲಿ ಜನಪ್ರತಿನಿಧಿಗಳು ಕೂಡ ಮರಳು ಸಾಗಾಣಿಕೆದಾರರಿಂದ ಚಂದಾ ಪಡೆಯುವುದಕ್ಕೆ ಮುಂದಾಗಿರುವ ಉದಾಹರಣೆಗಳಿವೆ. ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಿರಾಂತಕವಾಗಿದ್ದ ಮರಳು ಸಾಗಾಣಿಕೆ ಉದ್ದಿಮೆ, ಸರ್ಕಾರದ ಹೊಸ ಕಾನೂನಿನ ಪರಿಣಾಮವಾಗಿ ಕಗ್ಗಂಟಾಗಿದೆ. ಮರಳು ಸಾಗಾಣಿಕೆ ಸ್ಥಗಿತಗೊಂಡಿರುವ ಪರಿಣಾಮ ಸರ್ಕಾರ ಕೈಗೆತ್ತಿಕೊಂಡಿರುವ ಅಭಿವೃದ್ಧಿ ಕಾಮಗಾರಿಗೆ ತೊಂದರೆಯಾಗಿದೆ. ಮನೆ ಕಟ್ಟುವ ಕನಸು ಕಾಣುವ ಬಡ ಮತ್ತು ಮಧ್ಯಮ ವರ್ಗ ಕೂಡ ಮರಳು ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಬಸವರಾಜ ಹೊರಟ್ಟಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಅಲ್ತಾಫ್ ಕಿತ್ತೂರ, ಶಶಿಧರ ಕೊರವಿ ಸೇರಿದಂತೆ ಇನ್ನಿತರರು ಇದ್ದರು.

ಮರಳು ಸಾಗಣೆದಾರರ ಬೇಡಿಕೆ ಈಡೇರಿಸಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಡಿ. 26
ಧಾರವಾಡ ಜಿಲ್ಲೆಯ ಮರಳು ಸಾಗಾಣಿಕೆದಾರರ ಬೇಡಿಕೆ ಈಡೇರಿಸಲು ರಾಜ್ಯ ಸರ್ಕಾರ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಆಗ್ರಹಿಸಿದೆ.
ಈ ಕುರಿತಂತೆ ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ಸುರೇಶ ಕಿರೇಸೂರ ಹಾಗೂ ಕಾರ್ಯದರ್ಶಿ ಅಶೋಕ ಬಸವಾ, ಮರಳು ಸಾಗಾಣಿಕೆದಾರರು ಏಳೆಂಟು ದಿನಗಳಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗಬ್ಬೂರ ಬೈಪಾಸ್‌ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದ್ದರಿಂದ ಕಟ್ಟಡ ಕಾರ್ಮಿಕರು ಬಹಳಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಹೊಸ ನೀತಿಯಿಂದಾಗಿ ಮರಳು ಸಾಗಾಣಿಕೆ ಸಂಪೂರ್ಣ ನಿಂತು ಹೋಗಿದೆ. ಸೂಕ್ತ ಮರಳು ನೀತಿ ಜಾರಿಗೆ ತರಬೇಕೆಂಬ ಬೇಡಿಕೆ ನಾಲ್ಕೈದು ತಿಂಗಳಿಂದ ಕೇಳಿ ಬರುತ್ತಿದ್ದರೂ ಈ ಬಗ್ಗೆ ಸರ್ಕಾರ ಈವರೆಗೂ ಯಾವುದೇ ಕ್ರಮಕೈಗೊಳ್ಳದೇ ಇರುವುದು ನಿಜಕ್ಕೂ ವಿಷಾದನೀಯ.
ಬ್ಯಾಂಕ್‌ಗಳಿಂದ ಸಾಲಸೋಲ ಮಾಡಿ ಕಟ್ಟಡಗಳನ್ನು ಕಟ್ಟಿಸುತ್ತಿರುವ ಜನರಿಗೂ ಈ ಮುಷ್ಕರದ ಬಿಸಿ ಮುಟ್ಟಿದೆ ಎಂದಿರುವ ಅವರು, ಪಡೆದ ಸಾಲಕ್ಕೆ ಸರಿಯಾದ ಸಮಯದಲ್ಲಿ ಕಟ್ಟಡ ಕಾಮಗಾರಿ ಮುಗಿಸಲು ಸಾಕಷ್ಟು ಪ್ರಮಾಣದಲ್ಲಿ ಮರಳು ಲಭ್ಯವಾಗದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಕಟ್ಟಡಗಳ ಕಾಮಗಾರಿ ಮೇಲೆ ಮಾತ್ರ ಇದರ ಪರಿಣಾಮ ಬೀರದೆ ರಸ್ತೆ ಕೆಲಸ, ಒಳಚರಂಡಿ ಕೆಲಸ ಸೇರಿದಂತೆ ಅವಳಿನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಮೇಲೆಯೂ ತೀವ್ರತರನಾದ ಪರಿಣಾಮ ಬೀರಿದೆ. ಎಂಜಿನಿಯರ್‌ಗಳೂ ಕೆಲಸವಿಲ್ಲದೆ ಸುತ್ತಾಡುವ ಸ್ಥಿತಿ ನಿರ್ಮಾಣಗೊಂಡಿದೆ.
ಮರಳು ಸಾಗಾಣಿಕೆಗೆ ಸಂಬಂಧಿಸಿದಂತೆ ಸೂಕ್ತ ಕಾಯ್ಕೆ ಜಾರಿಗೆ ತರಬೇಕೆಂಬ ಕೂಗು 4-5 ವರ್ಷಗಳಿಂದ ಇದ್ದರೂ ಇದನ್ನು ಸಂಪೂರ್ಣವಾಗಿ ಬಗೆಹರಿಸಲು ಸರ್ಕಾರಗಳು ಪ್ರಯತ್ನಿಸದೇ ಇರುವುದು ನೋವಿನ ಸಂಗತಿ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಜಾರಿಗೆ ತಂದಿರುವ ಹೊಸ ಮರಳು ನೀತಿಯಿಂದಾಗಿ ರಾಜ್ಯದ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಮರಳು ಸಾಗಾಣಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಲಾರಿ ಮಾಲೀಕರು ಆರಂಭಿಸಿರುವ ಅನಿರ್ದಿಷ್ಟಾವಧಿ ಮುಷ್ಕರ ಇನ್ನಷ್ಟು ತೀವ್ರವಾಗುವ ಲಕ್ಷಣಗಳಿವೆ.
ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಈ ಭಾಗದ ಜನಪ್ರತಿನಿಧಿಗಳೆಲ್ಲರೂ ಸೇರಿ ಮರಳು ಸಾಗಾಣಿಕೆ ಸಮಸ್ಯೆ ಬಗೆಹರಿಸಲು ತ್ವರಿತಗತಿಯಲ್ಲಿ ಕ್ರಮಕೈಗೊಳ್ಳಬೇಕು ಎಂದೂ ಕಿರೇಸೂರ ಹಾಗೂ ಬಸವ ಒತ್ತಾಯಿಸಿದ್ದಾರೆ.

ಮುಷ್ಕರಕ್ಕೆ ಮಾಜಿ ಶಾಸಕ ಚಿಕ್ಕನಗೌಡ್ರ ಬೆಂಬಲ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಡಿ. 26
ಧಾರವಾಡ ಜಿಲ್ಲೆಗೆ ಮರಳು ಪರ್ಮಿಟ್ ನೀತಿ ಜಾರಿಗೆ ತರಬೇಕು ಎಂದು ಆಗ್ರಹಿಸಿ ಶ್ರೀ ತುಂಗಭದ್ರಾ ಮರಳು ಸಾಗಾಣಿಕೆದಾರರ ಸಂಘ ಆರಂಭಿಸಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ ಬೆಂಬಲ ಸೂಚಿಸಿದ್ದಾರೆ.
ಲಾರಿ ಮಾಲೀಕರು ಗಬ್ಬೂರ ಬೈಪಾಸ್‌ನಲ್ಲಿ ನಡೆಸುತ್ತಿರುವ ಮುಷ್ಕರ ಸ್ಥಳಕ್ಕೆ ಬೆಂಬಲಿಗರೊಂದಿಗೆ ತೆರಳಿದ ಚಿಕ್ಕನಗೌಡ್ರ ಮುಷ್ಕರನಿರತರನ್ನುದ್ದೇಶಿಸಿ ಮಾತನಾಡಿ ಬೆಂಬಲ ವ್ಯಕ್ತಪಡಿಸಿದರು.
ಮರಳು ಪರ್ಮಿಟ್‌ಗೆ ಸಂಬಂಧಿಸಿದಂತೆ ಇರುವ ಕಾನೂನು ತೊಡಕುಗಳಿಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳೊಂದಿಗೆ ಚರ್ಚಿಸಲಾಗುವುದೆಂದ ಅವರು, ನಂತರ ಈ ಕುರಿತಂತೆ ಸರ್ಕಾರ ತಕ್ಷಣ ಸೂಕ್ತ ಕ್ರಮಕೈಗೊಳ್ಳುವಂತೆಯೂ ಒತ್ತಾಯಿಸಲಾಗುವುದು ಎಂದು ಹೇಳಿದರು.
ಲಾರಿ ಮಾಲೀಕರು ಆರಂಭಿಸಿರುವ ಈ ಮುಷ್ಕರ ನ್ಯಾಯಯುತವಾಗಿದ್ದು ಯಾವುದೇ ಬೆದರಿಕೆ ಜಗ್ಗದ ಪ್ರತಿಭಟನೆ ಮುಂದುವರಿಸುವಂತೆ ತಿಳಿಸಿದರಲ್ಲದೇ, ತಾವು ಸಹ ಎಲ್ಲ ರೀತಿಯ ಸಹಕಾರ ನೀಡುವುದಾಗಿಯೂ ಭರವಸೆ ನೀಡಿದರು.
ಸಂಘದ ಅಧ್ಯಕ್ಷ ಶಶಿಧರ ಕೊರವಿ, ದುರ್ಗಪ್ಪ ದೊಡ್ಡಮನಿ, ಪ್ರಭಾಕರ ಉಪಾಧ್ಯ, ಯಮನೂರ ಬಿಜವಾಡ, ಸೋಮಶೇಖರ ಬೆಂಡಿಗೇರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement