ಗೂಡ್ಸ್ ಟರ್ಮಿನಲ್ ಅಭಿವೃದ್ಧಿ ಮಾಡಿ
ಹುಬ್ಬಳ್ಳಿ: ನವಲೂರಿಗೆ ಗೂಡ್‌ಶೆಡ್ ಸ್ಥಳಾಂತರಿಸುವುದಕ್ಕೆ ರಾಜ್ಯ ಸರ್ಕಾರದಿಂದ 100 ಎಕರೆ ಜಮೀನನ್ನು ಉಚಿತ ಪಡೆದ ನೈಋತ್ಯ ರೇಲ್ವೆ ವಲಯಅಧಿಕಾರಿಗಳು ಅಗತ್ಯಕ್ಕೆ ತಕ್ಕಂತೆ ಗೂಡ್ಸ್ ಟರ್ಮಿನಲ್ ಅಭಿವೃದ್ಧಿಪಡಿಸಿಲ್ಲ ಎಂದು ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ವಸಂತ ಲದ್ವಾ ಹೇಳಿದರು.
ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2003ರಲ್ಲಿ ರಾಜ್ಯ ಸರ್ಕಾರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸ್ವಾಧೀನದಲ್ಲಿದ್ದ 100 ಎಕರೆ ಜಮೀನನ್ನು ರೇಲ್ವೆ ಇಲಾಖೆಗೆ ಹಸ್ತಾಂತರಿಸಿದೆ. ಇಲ್ಲಿವರೆಗೆ ಉತ್ತರ ಕರ್ನಾಟಕದ ವಾಣಿಜ್ಯ ಚಟುವಟಿಕೆಗೆ ಅನುಕೂಲವಾಗುವಂತೆ ಗೂಡ್ಸ್ ಟರ್ಮಿನಸ್ ನಿರ್ಮಿಸುವಲ್ಲಿ ರೈಲ್ವೆ ಇಲಾಖೆ ಅಧಿಕಾರಿಗಳು ವಿಳಂಬ ಮಾಡಿದ್ದಾರೆ. ಹುಬ್ಬಳ್ಳಿ ರೈಲು ನಿಲ್ದಾಣ ಮೇಲ್ದರ್ಜೆಗೇರಿಸುವ ವೇಳೆ ಸರಕು ಸಾಗಾಣಿಕೆ ಘಟಕವನ್ನು ನವಲೂರಿಗೆ ಸ್ಥಳಾಂತರಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿ ಜಮೀನು ಹಸ್ತಾಂತರಿಸಿದೆ. ಜನಪ್ರತಿನಿಧಿಗಳು ಆಸಕ್ತಿ ತೋರಿದರೂ ಅಧಿಕಾರಿಗಳು ಯೋಜನೆ ಅನುಷ್ಠಾನದಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದು ಹೇಳಿದರು.
ಹುಬ್ಬಳ್ಳಿಯಲ್ಲಿರುವ ನೈಋತ್ಯ ರೇಲ್ವೆ ವಲಯ ಲಾಭದಾಯಕವಾಗಿ ನಡೆಯುತ್ತಿದ್ದು, ಸರಕು ಸಾಗಾಣಿಕೆ ಘಟಕ ಸ್ಥಾಪನೆ ಮಾಡುವುದರಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಲಾಭ ಗಳಿಸಬಹುದು. 10 ವರ್ಷಗಳಿಂದ ನನೆಗುದಿಗೆ ಬಿದ್ದ ಸರಕು ಸಾಗಾಣಿಕೆ ಘಟಕದಲ್ಲಿ ಎಲ್ಲ ವ್ಯವಸ್ಥೆ ಕಲ್ಪಿಸಲು ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆಗೆ ಮನವಿ ಸಲ್ಲಿಸಿ ಸಲ್ಲಿಸುತ್ತೇವೆ ಎಂದರು.
ಕೇಂದ್ರದ ಹಲವಾರು ರೇಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರ ಅನುದಾನ ನೀಡುತ್ತಿದೆ. ಭೂಸ್ವಾಧೀನ ಸೇರಿದಂತೆ ಹಲವಾರು ಆಡಳಿತಾತ್ಮಕ ಅನುಮೋದನೆಗಳನ್ನು ತ್ವರಿತಗತಿಗತಿಯಲ್ಲಿ ಮಾಡುತ್ತಿದ್ದರೂ ರೇಲ್ವೆ ಅಧಿಕಾರಿಗಳ ಉದಾಸೀನತೆಯಿಂದ ಯೋಜನೆಗಳು ಪೂರ್ಣಪ್ರಮಾಣದಲ್ಲಿ ನಿಗದಿತ ಕಾಲಮಿತಿಯಲ್ಲಿ ಅನುಷ್ಠಾನವಾಗುತ್ತಿಲ್ಲ. ಸದ್ಯ ನವಲೂರು ಸರಕು ಸಾಗಾಣಿಕೆ ಘಟಕದಿಂದ ರಸಗೊಬ್ಬರ, ಸಿಮೆಂಟ್ ಉತ್ಪನ್ನಗಳನ್ನು ಸಾಗಾಣಿಕೆ ಮಾಡಲಾಗುತ್ತಿದೆ. ಉದ್ದೇಶಿತ ಸರಕು ಸಾಗಾಣಿಕೆ ಘಟಕ ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಂಡರೆ ಗೋದಾಮು, ಕಂಟೈನರಿಂಗ್, ಯಾಂತ್ರಿಕೃತ ಲೋಡಿಂಗ್ ಮತ್ತು ಅನ್‌ಲೋಡಿಂಗ್ ವ್ಯವಸ್ಥೆ ಗೂಡ್ಸ್ ಟರ್ಮಿನಸ್‌ನಲ್ಲಿ ಲಭ್ಯವಾಗಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಸಿಸಿಐ ಪದಾಧಿಕಾರಿಗಳಾದ ಕೆ.ಡಿ. ಕೋಟೆಕರ್, ಗೌರವ ಕಾರ್ಯದರ್ಶಿ ಸಿದ್ದೇಶ ಕಮ್ಮಾರ, ಉದ್ಯಮಿ ಅಜ್ಜಂಪುರ ಶೆಟ್ರು ಮ್ತತು ಸುನಿಲರಾಯ ಇದ್ದರು.