ಮಾನಸಿಕ ಆರೋಗ್ಯಕ್ಕೆ ವಚನಗಳು ದಿವ್ಯೌಷಧಿ
ಕನ್ನಡಪ್ರಭ ವಾರ್ತೆ, ಧಾರವಾಡ, ಡಿ. 27
ಒತ್ತಡದ ಜೀವನದಲ್ಲಿ ಮನುಷ್ಯನ ಮಾನಸಿಕ ಕಾಯಿಲೆಗಳಿಗೆ ಶರಣರ ವಚನಗಳು ದಿವ್ಯೌಷಧಿ ಎಂದು 11ನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಅಜಯಕುಮಾರ ಸಿಂಗ್ ಹೇಳಿದರು.
ನಗರದ ಮುರುಘಾಮಠದ ಆವರಣದಲ್ಲಿ ನಡೆಯುತ್ತಿರುವ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ವಚನಗಳು ಕನ್ನಡಕ್ಕೆ ಅಥವಾ ಭಾರತೀಯ ಸಾಹಿತ್ಯಕ್ಕೆ ಅಲ್ಲ. ಇಡಿ ವಿಶ್ವಸಾಹಿತ್ಯಕ್ಕೆ ಕನ್ನಡ, ಕರ್ನಾಟಕದ ವಿಶಿಷ್ಟ ಕೊಡುಗೆ. ಈ ವಚನಗಳ ಮೂಲಕ ವ್ಯಕ್ತಿ ತನ್ನ ವ್ಯಕ್ತಿತ್ವವನ್ನೇ ರೂಪಿಸಿಕೊಳ್ಳಬಹುದು ಎಂದರು.
ಆಧ್ಯಾತ್ಮಿಕ ಸಾಧನೆಯ ಪ್ರಗತಿಯನ್ನು ಶರಣರು ಆರು ಹಂತದಲ್ಲಿ ಹೇಳಿದ್ದಾರೆ. ಅವುಗಳೇ ಷಟಸ್ಥಲಗಳು. ಸಾಧನೆಯಿಂದ ಹೇಗೆ ಮನಸ್ಸಿನ, ವಾಣಿಯ ಹಾಗೂ ಕರ್ಮದ ಪಾವನತೆ ಹೆಚ್ಚಾಗುತ್ತದೆಯೋ ಅದೇ ರೀತಿ ಭಕ್ತ ಉತ್ತರೋತ್ತರ ಪ್ರಗತಿ ಸಾಧಿಸಿ, ಭಕ್ತಿ ಸ್ಥಲದಿಂದ ಮಹೇಶ್ವರ ಸ್ಥಲ, ಪ್ರಸಾದಿ ಸ್ಥಲ, ಪ್ರಾಣಲಿಂಗಿ ಸ್ಥಲ, ಶರಣ ಸ್ಥಲದ ಮೂಲಕ ಐಕ್ಯ ಸ್ಥಲಕ್ಕೆ ತಲುಪುತ್ತಾನೆ ಎಂದರು.
10ನೇ ಸಮ್ಮೇಳನಾಧ್ಯಕ್ಷರಾಗಿದ್ದ ಪ್ರೊ. ಜಿ.ಎಸ್. ಸಿದ್ದಲಿಂಗಯ್ಯ ಮಾತನಾಡಿ, ಎಲ್ಲ ರೀತಿಯಲ್ಲಿ ಜ್ಞಾನದ ಬಾಗಿಲು ತೆರೆದಿದ್ದು 12ನೇ ಶತಮಾನ. ಬಸವಾದಿ ಶರಣರು ಜ್ಞಾನ ಕ್ರಾಂತಿ ಕೈಗೊಳ್ಳುವ ಮೂಲಕ ಜ್ಞಾನ ಜನ್ಮ ಸಿದ್ದ ಹಕ್ಕು ಎಂದು ಪ್ರತಿಪಾದಿಸಿ ಜ್ಞಾನದ ಬಾಗಿಲು ತೆರೆದರು. ಎಲ್ಲ ಜೀವಿಗಳೂ ಜ್ಞಾನಕ್ಕೆ ಒಳಪಟ್ಟಿದ್ದು, ಆ ಜ್ಞಾನ ಕ್ರಾಂತಿ ಕರ್ನಾಟಕದಲ್ಲಿ ಆಗಿದ್ದು ಐತಿಹಾಸಿಕ. ಅಂದು ಕಂಡಿದ್ದ ಕನಸು ನನಸು ಮಾಡುವ ನಿಟ್ಟಿನಲ್ಲಿ ಇಂತಹ ಸಮ್ಮೇಳನಗಳು ಸಾಗಬೇಕು. ಶರಣರ ನಾಡಾದ ಬಸವಕಲ್ಯಾಣ ಅದ್ಬುತ ಕ್ರಾಂತಿಯ ಸ್ಥಳ. ಅಲ್ಲಿನ ಹಳೆಯ ಸ್ಮಾರಕ ಉಳಿಸಿ-ಬೆಳೆಸುವ ಕಾಯಕ ಆಗಬೇಕಿದೆ. ಎಸ್.ಎಲ್. ಜಾಮದಾರ ಅವರು ಬಸವಕಲ್ಯಾಣದಲ್ಲಿ ರು. 35 ಕೋಟಿ ವ್ಯಯಿಸಿ ಅಭಿವೃದ್ಧಿ ಆರಂಭಿಸಿತ್ತು. ಇದೀಗ ಅನುದಾನ ಕೊರತೆಯಿಂದ ಅಭಿವೃದ್ಧಿ ನಿಂತಿದೆ. ಅದನ್ನು ಪೂರ್ಣಗೊಳಿಸಬೇಕು ಎಂದರು.