ಸಂತಸದಲ್ಲಿ ತೇಲಾಡಿದ ಅನಾಥ ಮಕ್ಕಳು
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಡಿ. 27
ಝಗಮಗಿಸುವ ವಿದ್ಯುತ್ ಅಲಂಕಾರ, ಮುಗಿಲೆತ್ತರಕ್ಕೆ ಸಿಡಿಯುವ ಪಟಾಕಿ, ತಂಗಾಳಿಯ ಜತೆ ಇಂಪಾದ ಸಂಗೀತ ನಿನಾದ, ಜತೆಗೂಡಿ ಕುಣಿದು ಕುಪ್ಪಳಿಸಿದ ಸಂಭ್ರಮ...
ಹೊರ ಜಗತ್ತಿನ ಸಂಪರ್ಕವಿಲ್ಲದೆ ವಸತಿ ನಿಲಯ ಮತ್ತು ಶಾಲೆಗಳಿಗೆ ಮಾತ್ರ ಸೀಮಿತರಾಗಿ ಬದುಕು ನೂಕುತ್ತಿದ್ದ ಇಲ್ಲಿನ ಘಂಟಿಕೇರಿ ಸರ್ಕಾರಿ ಬಾಲಕಿಯರ ಬಾಲಮಂದಿರದ ಅನಾಥ ಬಾಲೆಯರಿಗೆ ಹೊಸದೊಂದು ಲೋಕದಲ್ಲಿ ಮಿಂದೆದ್ದ ಹಿತಾನುಭವ ನೀಡಿದ ಘಳಿಗೆ ಅದು.
ಅನಾಥ ಮಕ್ಕಳಲ್ಲಿ ಇಂತಹದೊಂದು ಭರವಸೆ ಹುಟ್ಟಿಸಿದ್ದು ಹೆಲ್ಪ್‌ಲೈನ್ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ್ದ ಕ್ರಿಸ್‌ಮಸ್ ಹಬ್ಬ. ಕೇಕ್ ಕತ್ತರಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಿಸಿಪಿ ಶ್ರೀನಾಥ ಜೋಶಿ, ಶ್ರೀಮಂತರು, ಮಧ್ಯಮ ವರ್ಗದವರು ತಮ್ಮ ಮನೆಗಳಲ್ಲಿ ಹಬ್ಬ ಆಚರಿಸುವುದು ಸಾಮಾನ್ಯ. ಆದರೆ, ಬಡವರು, ಅಶಕ್ತರು, ಅನಾಥರು ಜತೆ ಸಾರ್ವಜನಿಕವಾಗಿ ಆಚರಿಸುವುದೇ ನಿಜವಾದ ಹಬ್ಬ ಎಂದರು.
ಮಾನವೀಯ ಕಳಕಳಿಯಿಂದ ಇಂಥದೊಂದು ಅಪರೂಪದ ಕಾರ್ಯಕ್ರಮ ಆಯೋಜಿಸಿರುವ ಹೆಲ್ಪ್‌ಲೈನ್ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯ ಶ್ಲಾಘನೀಯ. ಜಗತ್ತಿನಲ್ಲಿ ಯಾರೂ ಅನಾಥರಲ್ಲ. ಹೆತ್ತ ತಂದೆ-ತಾಯಿ ದೂರವಾಗಿದ್ದರೂ ಎಲ್ಲರ ತಂದೆಯಾಗಿ ಏಸುಪ್ರಭು ಜತೆಗಿರುತ್ತಾನೆ ಎಂದೂ ಜೋಶಿ ಮಾರ್ಮಿಕವಾಗಿ ನುಡಿದರು. ಬಾಲ ಮಂದಿರದ ಮಕ್ಕಳಿಗೆ ಅನಾಥ ಭಾವ ಬೇಡ. ನಾವೆಲ್ಲ ನಿಮ್ಮ ಜತೆಗೆ ಇದ್ದೇವೆ ಎಂದೂ ಅವರು ಧೈರ್ಯ ತುಂಬಿದರು.
ಇದೇ ಸಂದರ್ಭದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಎಸಿಪಿ ಯಶೋದಾ ಒಂಟಗೋಡಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಿ. ಉಷಾ, ಅಧೀಕ್ಷಕ ಮುನಿಯಪ್ಪ, ಫಾಸ್ಟರ್ ಯಶವಂತ ಎನ್.ಕೆ., ಡಾ. ಭದ್ರಿನಾಥ ಬನ್ಸಾಲಿ, ಕರುಣಾಕರ ಶೆಟ್ಟಿ, ಸವಿತಾ ಗುಡಗುಂಟಿ ವೇದಿಕೆಯಲ್ಲಿದ್ದರು. ವಿಲ್ಸನ್ ಗುಡಿಸಲಮನಿ ನಿರೂಪಿಸಿದರು.