ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಜಿಮಖಾನ 17 ಹೋರಾಟಗಾರರ ವಿರುದ್ಧ ಕೇಸ್

Vishwanath S
Updated On : 29 Dec 2013, 12:12 pm

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಡಿ. 28
ಮೈದಾನ ಬಚಾವೋ ಹೋರಾಟ ಹತ್ತಿಕ್ಕುವ ವ್ಯವಸ್ಥಿತ ಹುನ್ನಾರು ನಡೆದಿದೆ. ಹೋರಾಟದಲ್ಲಿ ಪಾಲ್ಗೊಂಡ ಮುಂಚೂಣಿ 17 ನಾಯಕರ ಮೇಲೆ ಸುಳ್ಳು ಕೇಸ್ ದಾಖಲಿಸಲಾಗಿದೆ. ಪ್ರಕರಣದಲ್ಲಿ ಹಿನ್ನೆಲೆಯಲ್ಲಿ ಡಿ. 28ರಂದು ಕೋರ್ಟ್‌ಗೆ ಹಾಜರಾಗಬೇಕಿತ್ತು ಹಾಗೂ ಜಾಮೀನು ಪಡೆದುಕೊಳ್ಳಬೇಕಿತ್ತು. ಆದರೆ ಸಾರ್ವಜನಿಕ ಆಸ್ತಿ ಉಳಿಸಲು ಹೋರಾಟ ನಡೆಸುತ್ತಿರುವ ತಾವು ಜಾಮೀನು ಅರ್ಜಿ ಸಲ್ಲಿಸುವುದಿಲ್ಲ. ಈ ವಿಷಯವಾಗಿ ಜೈಲಿಗೆ ಹೋಗಲು ಹೋರಾಟ ಸಮಿತಿಯ ಪ್ರಮುಖರು ನಿರ್ಧರಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿ ಪರ ವಕೀಲೆ ಶೀಲಾ ಮಿರ್ಜಿ, ಮೈದಾನ ಬಚಾವೋ ಹೋರಾಟ ಹತ್ತಿಕ್ಕಲು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಅಡ್ಡ ದಾರಿ ಹಿಡಿದಿದ್ದಾರೆ. ಪೊಲೀಸ್ ಬಲ ಪ್ರಯೋಗಿಸುವ ನೀಚ ಕೆಲಸಕ್ಕೆ ಮುಂದಾಗಿದ್ದಾರೆ. ಸಾರ್ವಜನಿಕ ಹಿತಾಸಕ್ತಿಗೆ ಹೋರಾಡುತ್ತಿರುವವರನ್ನು ರೌಡಿಗಳಂತೆ ಕಾಣುತ್ತಿದ್ದಾರೆ ಎಂದು ದೂರಿದರು.
ಪ್ರಕರಣವೊಂದರಲ್ಲಿ ಅರವಿಂದ ಕೋಟಾರಿ ಹಾಗೂ ಸುಭಾಷ ಜೋಶಿ ಎಂಬ ವ್ಯಕ್ತಿಗಳಿಂದ ಹೋರಾಟ ಸಮಿತಿಯ ಆರು ಪ್ರಮುಖರ ವಿರುದ್ಧ ಶಾಂತತಾಭಂಗ, ಜೀವ ಬೆದರಿಕೆ ಹಾಕಿದ್ದಾಗಿ ಕ್ರಿಮಿನಲ್ ದೂರು ನೀಡಿಸುವ ಮೂಲಕ ಪ್ರಕರಣ ದಾಖಲಿಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಸೆಪ್ಟೆಂಬರ್ 21ರಂದು ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸುವ ಮುನ್ನ ಪೊಲೀಸ್ ಅನುಮತಿ ಪಡೆದಿಲ್ಲ ಎನ್ನುವ ಕಾರಣಕ್ಕೆ ಸಬ್ ಅರ್ಬನ್ ಠಾಣೆಯ ಪಿಎಸ್‌ಐ ರವಿ ಎಸ್. ಎಲ್. ಸ್ವತಃ 11 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆದರೆ ಪೊಲೀಸ್ ಅನುಮತಿ ಪಡೆದಿದ್ದಾಗಿಯೂ ಖೊಟ್ಟಿ ಕೇಸ್ ದಾಖಲಿಸಲಾಗಿದೆ. ಅನುಮತಿ ಪಡೆದಿರುವ ಪ್ರತಿ ತಮ್ಮ ಬಳಿ ಇದೆ ಎಂದು ಗೋಷ್ಠಿಯಲ್ಲಿ ಮಿರ್ಜಿ ತೋರಿ ಪ್ರತಿ ಪ್ರದರ್ಶಿಸಿದರು.
17 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾಗಿಯೂ ಈ ಬಗ್ಗೆ ಯಾವುದೇ ನೋಟಿಸ್ ಜಾರಿ ಮಾಡಿಲ್ಲ. ಪ್ರಕರಣ ದಾಖಲಿಸುವ ಪೂರ್ವ ಕನಿಷ್ಠ ಪಕ್ಷ ತಮ್ಮ ಹೇಳಿಕೆ ಪಡೆದಿಲ್ಲ, ವಿಚಾರಣೆ ನಡೆಸಿಲ್ಲ. ಇದೀಗ ಕೋರ್ಟ್‌ನಿಂದ 17 ಜನರಿಗೆ ಸಮನ್ಸ್ ಜಾರಿಯಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಬಿಜೆಪಿಗರ ಕೈಗೊಂಬೆಯಂತೆ ವರ್ತಿಸಿದ್ದಾರೆ ಎಂದು ದೂರಿದ ಮಿರ್ಜಿ, ಸಾರ್ವಜನಿಕ ಆಸ್ತಿ ಉಳಿಸಲು ಹೋರಾಡುತ್ತಿರುವ ತಾವುಗಳು ಅಪರಾಧಿಗಳಲ್ಲ. ಹೀಗಿರುವಾಗ ಜಾಮೀನು ಪಡೆಯುವುದಿಲ್ಲ. ಜೈಲಿಗೆ ಹೋಗಲು ನಾವು ಸಿದ್ಧರಾಗಿದ್ದೇವೆ ಎಂದರು.
ಅಗತ್ಯವೆನಿಸಿದರೆ ಪ್ರತಿಭಟನಾಕಾರರ ಮೇಲೆ ಖೊಟ್ಟಿ ಕೇಸ್ ದಾಖಲಿಸಿರುವುದನ್ನು ಸರ್ಕಾರ ಹಿಂಪಡೆಯಲಿ. ಈ ವಿಷಯವಾಗಿ ಸರ್ಕಾರಕ್ಕೆ ತಾವು ಮನವಿ ಮಾಡಿಕೊಳ್ಳುವುದಿಲ್ಲ. ಇನ್ನು, ಸರ್ಕಾರ ನಿಜವಾದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಮಿರ್ಜಿ ಹೇಳಿದರು.
ಸಿ. ಬಿ. ಎಲ್. ಹೆಗಡೆ, ಮನೋಜ ಹಾನಗಲ್, ಅಮೃತ ಇಜಾರೆ, ಹೂವಪ್ಪ ದಾಯಗೋಡಿ, ವೇದವ್ಯಾಸ ಕೌಲಗಿ, ಶೈಲೇಂದ್ರಕುಮಾರ ಪಾಟೀಲ, ಜಾಧವ ಮತ್ತಿತರರು ಗೋಷ್ಠಿಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement