ಎಪಿಎಂಸಿಗೆ ಬಂದರೆ ಹುಷಾರ್!
ಹುಬ್ಬಳ್ಳಿ: ರೈತರಲ್ಲದವರು ಎಪಿಎಂಸಿಗೆ ಬಂದರೆ ಹುಷಾರ್!
ಇಂಥದೊಂದು ಫರ್ಮಾನು ಹೊರಡಿಸುವ ಮೂಲಕ ಹುಬ್ಬಳ್ಳಿ ಅಮರಗೋಳ ಎಪಿಎಂಸಿ ರೈತರೂ ಸೇರಿದಂತೆ ರೈತ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದೆ. ಈರುಳ್ಳಿ ಬೆಳೆಗಾರರರು ತಾವು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುತ್ತಿಲ್ಲ ಎಂದು ಪ್ರತಿಭಟನೆಯ ಹಾದಿ ತುಳಿದಿರುವುದೇ ಇಂಥದೊಂದು ಫರ್ಮಾನು ಎಪಿಎಂಸಿಯಿಂದ ಹೊರಬೀಳಲು ಕಾರಣವಾಗಿದೆ.
ಈರುಳ್ಳಿ ಹೋರಾಟದಿಂದ: ಪ್ರಸಕ್ತ ವರ್ಷ ಬರದ ನಡುವೆಯೂ ಧಾರವಾಡ ಜಿಲ್ಲೆಯಲ್ಲಿ ಒಂದಿಷ್ಟು ಈರುಳ್ಳಿ ಉತ್ತಮವಾಗಿ ಬೆಳೆದಿದೆ. ಆರಂಭದಲ್ಲಿ ಈರುಳ್ಳಿಗೆ ಉತ್ತಮ ಬೆಲೆಯೂ ಸಿಕ್ಕಿತ್ತು. ಆದರೆ ದಿನ ಕಳೆದಂತೆ ಈರುಳ್ಳಿ ಬೆಲೆ ಕುಸಿಯಲಾರಂಭಿಸಿತು. ಮಹಾರಾಷ್ಟ್ರದಿಂದ ಆಮದಾಗುತ್ತಿದ್ದ ಈರುಳ್ಳಿಯೂ ಇದಕ್ಕೆ ಕಾರಣವಾಗಿತ್ತು. ಈರುಳ್ಳಿ ಬೆಲೆ ಕುಸಿದ ಪರಿಣಾಮ ರೈತರು ಪ್ರತಿಭಟನೆಯ ಹಾದಿ ಹಿಡಿದರು. ಇದಕ್ಕೆ ಪ್ರತಿಯಾಗಿ ವ್ಯಾಪಾರಸ್ಥರೂ ವ್ಯಾಪಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಇವರಿಬ್ಬರ ನಡುವಿನ ಹಗ್ಗಜಗ್ಗಾಟ ಸಂಧಾನದ ಮೂಲಕ ಬಗೆಹರಿಯಿತಾದರೂ ಈರುಳ್ಳಿ ಬೆಳೆಗಾರರಿಗೆ ಇಂದಿಗೂ ಉತ್ತಮ ಬೆಲೆ ಸಿಗುತ್ತಿಲ್ಲ. ಇವೆಲ್ಲದರ ಮಧ್ಯೆ ಇದೀಗ ರೈತರ ಆಕ್ರೋಶಕ್ಕೆ ತಡೆಯೊಡ್ಡಬೇಕು ಎನ್ನುವ ರೀತಿಯಲ್ಲಿ ಎಪಿಎಂಸಿ ಫರ್ಮಾನೊಂದನ್ನು ಹೊರಡಿಸಿದ್ದು ವಿವಾದಕ್ಕೆ ಕಾರಣವಾಗಿದೆ.
ಫರ್ಮಾನಿನಲ್ಲಿ ಏನಿದೇ?: ಅಮರಗೋಳ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ 1966ರ ಕರ್ನಾಟಕ ಕೃಷಿ ಉತ್ಪನ್ನ ಮಾರಾಟ (ನಿಯಂತ್ರಣ ಮತ್ತು ಅಭಿವೃದ್ಧಿ) ಶಾಸನದ 2ನೇ ಪ್ರಕರಣದ 42ನೇ ಉಪ ಪ್ರಕರಣದ ಪ್ರಕಾರ 'ಸ್ಥಾಯಿ ಆದೇಶ' ಹೊರಡಿಸಿದೆ. ಈ ಆದೇಶದನ್ವಯ ಹುಬ್ಬಳ್ಳಿಯ ಅಮರಗೋಳ ಮುಖ್ಯ ಮಾರುಕಟ್ಟೆ ಪ್ರಾಂಗಣಕ್ಕೆ ಕೃಷಿ ಉತ್ಪನ್ನಗಳ ವಹಿವಾಟಿಗೆ ಸಂಬಂಧಿಸಿದಂತೆ ಬರುವ ಹಾಗೂ ಹೋಗುವ ಜನರು, ಗಾಡಿಗಳು, ವಾಹನಗಳು ಒಳಗೆ ಬರುವುದನ್ನು ಅಥವಾ ಹೊರಗೆ ಹೋಗುವುದನ್ನು ಹೊರತು ಪಡಿಸಿ ಇತರೇ ಕಾರಣ ಹಾಗೂ ಮಾರುಕಟ್ಟೆ ವಹಿವಾಟಿಗೆ ತೊಂದರೆಯನ್ನುಂಟು ಮಾಡುವ ದುರುದ್ದೇಶದಿಂದ ಬರುವ ಜನರು, ಗಾಡಿಗಳ ಪ್ರವೇಶ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.
ಉತ್ಪಾದಕ ರೈತರು, ಎಪಿಎಂಸಿ ಅಧಿಕಾರಿಗಳು, ಎಪಿಎಂಸಿ ಆಡಳಿತ ಮಂಡಳಿ ಸದಸ್ಯರು, ಇಲಾಖೆಯಿಂದ ನಿಯೋಜನೆಗೊಂಡ ಪ್ರಶಿಕ್ಷಣಾರ್ಥಿಗಳು, ಸರ್ಕಾರದ ವಿವಿಧ ಇಲಾಖೆ ಅಧಿಕಾರಿಗಳು, ಮಾಧ್ಯಮದವರು ಮಾತ್ರ ಎಪಿಎಂಸಿ ಪ್ರಾಂಗಣದೊಳಕ್ಕೆ ಪ್ರವೇಶಿಸಬಹುದು. ಒಂದು ವೇಳೆ ಸಾರ್ವಜನಿಕ ಹಿತದೃಷ್ಟಿಯಿಂದ ಪ್ರಾಂಗಣ ಪ್ರವೇಶಿಸುವುದು ಅಗತ್ಯವೆಂದಾದರೆ ಪೂರ್ವಾನುಮತಿ ಪಡೆದುಕೊಳ್ಳಬೇಕು. ಯಾವುದೇ ವ್ಯಕ್ತಿ ಪ್ರಾಂಗಣದೊಳಕ್ಕೆ ಪ್ರವೇಶಿಸಿ ಮುಷ್ಕರಕ್ಕೆ ಪ್ರಚೋದನೆ ನೀಡಿದರೆ, ಪ್ರಾಂಗಣಕ್ಕೆ ಅಕ್ರಮವಾಗಿ ಪ್ರವೇಶಿಸಿದರೆ, ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಪಿಎಂಸಿ ಆದೇಶದಲ್ಲಿ ಎಚ್ಚರಿಸಿದೆಯಲ್ಲದೇ ಎಪಿಎಂಸಿ ಪ್ರವೇಶಿಸುವವರನ್ನು ಭದ್ರತಾ ಸಿಬ್ಬಂದಿ ಪರಿಶೀಲನೆ ಮಾಡಿ ಒಳ ಬಿಡುತ್ತಿದೆ.
ಕಾನೂನಲ್ಲಿ ಅವಕಾಶವಿದ್ದರೂ: ಎಪಿಎಂಸಿಯಲ್ಲಿ ನಡೆಯಬಹುದಾದ ಗಲಾಟೆ ತಪ್ಪಿಸುವ ನಿಟ್ಟಿನಲ್ಲಿ ಇಂಥದೊಂದು ಅವಕಾಶವಿದ್ದರೂ ಹುಬ್ಬಳ್ಳಿ ಎಪಿಎಂಸಿಯಲ್ಲಿ ಇತ್ತೀಚಿನ ದಿನಗಳಲ್ಲಿ ಇಂಥದೊಂದು ಫರ್ಮಾನು ಹೊರಬಿದ್ದಿರಲಿಲ್ಲ. ರೈತರು ಹಾಗೂ ವ್ಯಾಪಾರಸ್ಥರ ಮಧ್ಯೆ ಬೆಲೆಗಾಗಿ ನಡೆಯುತ್ತಿದ್ದ ಸಮರ ಸಂಧಾನದ ಮೂಲಕವೇ ಬಗೆ ಹರಿಸಲಾಗುತ್ತಿತ್ತು. ರೈತರಿಗೆ ಅನ್ಯಾಯವಾಗಿದೆ ಎಂದ ಮೇಲೆ ಸಹಜವಾಗಿ ರೈತ ಹೋರಾಟಗಾರರು ಹೋರಾಟಕ್ಕೆ ಕೈಜೋಡಿಸುತ್ತಿದ್ದರು. ಇದೀಗ ರೈತ ಹೋರಾಟಗಾರರು ಎಪಿಎಂಸಿಯೊಳಕ್ಕೆ ಕಾಲಿಡಬಾರದೆಂದು ಎಪಿಎಂಸಿ ಸೂಚಿಸಿರುವ ಪರಿಣಾಮ ರೈತರಿಗೆ ನ್ಯಾಯ ಕೊಡಿಸುವವರ್ಯಾರು? ಎನ್ನುವ ಪ್ರಶ್ನೆ ಉದ್ಭವಿಸಿದೆ.
ರೈತ ಹೋರಾಟ ಹತ್ತಿಕ್ಕುವ ಯತ್ನ?: ರೈತ ಮುಖಂಡರು ಹೇಳುವ ಪ್ರಕಾರ ಇದು ರೈತ ಹೋರಾಟ ಹತ್ತಿಕ್ಕುವ ಪ್ರಯತ್ನ. ರೈತರು ಮುಗ್ಧ ವ್ಯಾಪಾರಸ್ಥರು ತಮಗೆ ಅನ್ಯಾಯಲಾದರೂ ಅವರು ದನಿ ಎತ್ತುವುದಿಲ್ಲ. ಇಂಥ ಸಂದರ್ಭದಲ್ಲಿ ರೈತ ಮುಖಂಡರು ನೆರವಿಗೆ ಧಾವಿಸುತ್ತಾರೆ. ಆದರೆ, ಎಪಿಎಂಸಿ ಫರ್ಮಾನು ಹೊರಡಿಸುವ ಮೂಲಕ ರೈತರ ದನಿ ಅಡಗಿಸಲು ಮುಂದಾಗಿದೆ. ಈ ಫರ್ಮಾನು ಹೊರಡಿಸುವಲ್ಲಿ ವ್ಯಾಪಾರಸ್ಥರೊಂದಿಗೆ ಶಾಮೀಲಾಗಿದೆ ಎಂದು ರೈತ ಮುಖಂಡರು ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ.
ವ್ಯಾಪಕ ಟೀಕೆ-ಟಿಪ್ಪಣಿ: ಎಪಿಎಂಸಿ ಹೊರಡಿಸಿರುವ ಆದೇಶಕ್ಕೆ ವ್ಯಾಪಕ ಟೀಕೆ- ಆಕ್ರೋಶ ವ್ಯಕ್ತವಾಗಿದೆ. ಎಪಿಎಂಸಿ ಆವರಣದಲ್ಲಿ ಗೌಜು-ಗದ್ದಲ ನಡೆಯದಿರಲಿ ಎನ್ನುವ ಸದುದ್ದೇಶದಿಂದ ಎಪಿಎಂಸಿ ಪೊಲೀಸ್ ಬಂದೋಬಸ್ತ್, ಭದ್ರತಾ ಸಿಬ್ಬಂದಿಯಂತಹ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬಹುದಾಗಿತ್ತು. ರೈತರ, ರೈತ ಹೋರಾಟಗಾರರ ಸ್ವತ್ತಾಗಿರುವ ಎಪಿಎಂಸಿ ಆವರಣಕ್ಕೆ ಅನ್ಯರು ಬರಬಾರದು ಎಂದು ಆದೇಶ ಹೊರಡಿಸಿದ್ದು ಸರಿಯಲ್ಲ. ಈ ಆದೇಶ ಎಪಿಎಂಸಿ ಹಿಂಪಡೆಯಬೇಕೆಂಬ ಒತ್ತಾಯ ಎಲ್ಲೆಡೆ ವ್ಯಕ್ತವಾಗಿದೆ.
ಎಪಿಎಂಸಿ ಅಧಿಕಾರಿಗಳು ಹಾಗೂ ವ್ಯಾಪಾರಸ್ಥರು ಒಳಒಪ್ಪಂದ ಮಾಡಿಕೊಂಡು ಇಂಥದೊಂದು ಆದೇಶ ಹೊರಡಿಸಿದ್ದಾರೆ. ರೈತರಿಗೆ ಅನ್ಯಾಯ ಮಾಡಬೇಕೆಂಬ ಉದ್ದೇಶದಿಂದಲೇ ಈ ಆದೇಶ ಹೊರಡಿಸಲಾಗಿದೆ. ರೈತರಿಗೆ ನ್ಯಾಯ ಕೊಡಿಸಲು ರೈತ ಹೋರಾಟಗಾರರು ಹೋರಾಡುತ್ತಾರೆಯೇ ವಿನಃ ಲಾಭ ಮಾಡಿಕೊಳ್ಳಲಿಕ್ಕೆ ಅಲ್ಲ. ಎಪಿಎಂಸಿ ಈ ಆದೇಶ ಹಿಂಪಡೆಯಲಿ.
- ಬಿ. ಎಂ. ಹನಸಿ
ರೈತ ಹೋರಾಟಗಾರ
-ಪ್ರಕಾಶ ಎಸ್. ಶೇಟ್