ವಚನ ಸಾಹಿತ್ಯಕ್ಕೆ ವಿಶ್ವ ಸ್ಥಾನಮಾನ
ಧಾರವಾಡ: ವಿಶ್ವದ ಎಲ್ಲ ಪ್ರಕಾರಗಳ ಸಾಹಿತ್ಯದಲ್ಲಿ ವಚನ ಸಾಹಿತ್ಯಕ್ಕೆ ವಿಶೇಷ ಸ್ಥಾನಮಾನವಿದೆ. ಅಪರೂಪ, ವಿಶಿಷ್ಟ, ಸರ್ವಕಾಲಿಕ ಪರಿಪೂರ್ಣತೆಯನ್ನು ಈ ವಚನ ಸಾಹಿತ್ಯ ಹೊಂದಿದೆ ಎಂದು 11ನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಅಜಯಕುಮಾರ ಸಿಂಗ್ ಹೇಳಿದರು.
ಇಲ್ಲಿನ ಮುರುಘಾಮಠದಲ್ಲಿ ನಡೆದ ಮೂರು ದಿನಗಳ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದ ಅವರು, ವಚನ ಸಾಹಿತ್ಯದಲ್ಲಿ ದಾರ್ಶನಿಕತೆ, ಅಧ್ಯಾತ್ಮಿಕತೆ, ಧಾರ್ಮಿಕತೆ ಇದೆ. ಇವುಗಳ ಮೂಲಕ ಮಾನವೀಯತೆಯನ್ನು ಕಟ್ಟಿ ಕೊಡುವ ಕೆಲಸ ಶರಣರು ಮಾಡಿರುವುದನ್ನು ನಾವು ಕಾಣುತ್ತೇವೆ. ಕಾಯಕದ ಮೂಲಕ ಜನ ಸಮೂಹದಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸವನ್ನು ನಮ್ಮ ಶರಣರು ಮಾಡಿದರು. ಅನ್ಯಾಯ ರಹಿತ, ಶೋಷಣೆ ರಹಿತವಾದ ಸಮಾಜ ಕಟ್ಟುವ ಕೆಲಸಕ್ಕೆ ಶರಣರೇ ಪ್ರೇರಣೆ ನೀಡಿದ್ದಾರೆ. ಈಗಿರುವ ಸಮಾಜಕ್ಕಿಂತ ಉತ್ತಮ ಸಮಾಜ ಬೇಕಿದ್ದರೆ ಶರಣ ಸಾಹಿತ್ಯ ಸಿದ್ಧಾಂತಗಳನ್ನೊಳಗೊಂಡ ಇಂತಹ ಶರಣ ಸಾಹಿತ್ಯ ಸಮ್ಮೇಳನಗಳು ನಡೆಯಬೇಕು ಎಂದು ಅಭಿಪ್ರಾಯಿಸಿದರು.
ಹಿರಿಯ ಚಿಂತಕ ಡಾ. ಗುರುಲಿಂಗ ಕಾಪಸೆ ಸಮಾರೋಪದ ಆಶಯ ನುಡಿಗಳನ್ನು ಹೇಳಿ, ಶರಣ ಸಾಹಿತ್ಯದ ಶ್ರೇಯಸ್ಸು ಫ. ಗು. ಹಳಕಟ್ಟಿ ಹಾಗೂ ಮೃತ್ಯುಂಜಯ ಅಪ್ಪಗಳವರಿಗೆ ಸಲ್ಲುತ್ತದೆ ಎಂದರು. 12ನೇ ಶತಮಾನದಲ್ಲಿಯೇ ಹೊಸ ಸಮಾಜವನ್ನು ಕಟ್ಟಿದ ಶರಣರು, ಜನವಾಣಿಯನ್ನು ದೇವವಾಣಿ ಮಟ್ಟಕ್ಕೆ ಎತ್ತರಕ್ಕೆ ಏರಿಸಿದರು. ನುಡಿದಂತೆ ನಡೆದ ಶರಣರು, ಪ್ರಪಂಚದಲ್ಲಿದ್ದುಕೊಂಡು ಪಾರಮಾರ್ಥಿಕ ಸಾಧನೆಗೆ ದಾರಿ ತೋರಿದವರು. ಎಲ್ಲ ಸಾಹಿತ್ಯ ಪ್ರಕಾರಗಳಲ್ಲೂ ಶರಣ ಚಿಂತನೆಗಳಿರುವುದನ್ನು ಕಾಣುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಅಜಯಕುಮಾರ ಸಿಂಗ್ ಅವರನ್ನು ಸಮ್ಮೇಳನ ಪರವಾಗಿ ಸತ್ಕರಿಸಲಾಯಿತು. ಮರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿದರು. ಗಣ್ಯರಾದ ಡಾ. ನಾ. ಮೊಗಸಾಲೆ, ಡಾ. ಆರ್. ಎಫ್. ಪಾಟೀಲ, ಪಂಚಾಕ್ಷರ ಪುಣ್ಯಶೆಟ್ಟಿ ಅವರನ್ನೂ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮಾಜಿ ಶಾಸಕ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯಾಧ್ಯಕ್ಷ ಚಂದ್ರಕಾಂತ ಬೆಲ್ಲದ, ಅಧ್ಯಕ್ಷ ಗೊ. ರು. ಚನ್ನಬಸಪ್ಪ, ಸಮ್ಮೇಳನದ ಪೂರ್ವಾಧ್ಯಕ್ಷ ಜಿ.ಎಸ್. ಸಿದ್ಧಲಿಂಗಯ್ಯ, ನಾಡೋಜ ಚೆನ್ನವೀರ ಕಣವಿ, ಶಾಸಕರಾದ ಅರವಿಂದ ಬೆಲ್ಲದ, ವಿನಯ ಕುಲಕರ್ಣಿ, ಮಾಜಿ ಶಾಸಕ ಮೋಹನ ಲಿಂಬಿಕಾಯಿ, ಮಹಾನಗರ ಪಾಲಿಕೆ ಸದಸ್ಯ ದೀಪಕ ಚಿಂಚೋರೆ ಇದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ವೈಜ್ಞಾನಿಕ ಮನೋಭಾವ, ಚಿಂತನೆ ಅಗತ್ಯ
ಧಾರವಾಡ: ಜನರಲ್ಲಿ ವೈಜ್ಞಾನಿಕ ಮನೋಭಾವ, ಚಿಂತನೆಗಳು ಮೂಡದ ಹೊರತು ಆ ದೇಶದ ಹಾಗೂ ಸಮಾಜದ ಪ್ರಗತಿ ಅಸಾಧ್ಯ ಎಂದು ಚಿಂತಕ ಪ್ರೊ. ಸಿದ್ಧನಗೌಡ ಪಾಟೀಲ ಹೇಳಿದರು.
ಮೌಢ್ಯ, ನಂಬಿಕೆ, ಧರ್ಮಾಂಧತೆ ಹೊಂದಿರುವ ಯಾವ ದೇಶ ಕೂಡ ಈವರೆಗೂ ಉದ್ದಾರ ಆಗಿಲ್ಲ. ಮುಂದೆಯೂ ಆಗೋದಿಲ್ಲ. ಪಾಕಿಸ್ತಾನ, ಅಪಘಾನಿಸ್ತಾನ, ಇರಾಕ್ ಸೇರಿದಂತೆ ವಿವಿಧ ದೇಶಗಳಲ್ಲಿ ಧರ್ಮವೇ ಒಂದಾಗಿದ್ದರೂ ಕೂಡ ಪ್ರಗತಿಯಲ್ಲಿ ಹಿಂದೆ ಬಿದ್ದಿವೆ. ಇದಕ್ಕೆ ಕಾರಣ ಧರ್ಮದ ಹೆಸರಿನಲ್ಲಿ ಜನರಲ್ಲಿರುವ ವೈಜ್ಞಾನಿಕ ಮನೋಭಾವನೆಯನ್ನು ಕೊಲ್ಲಲಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇಲ್ಲಿನ ಮುರುಘಾಮಠದ ಆವರಣದಲ್ಲಿ ಹಮ್ಮಿಕೊಂಡಿರುವ 11ನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದ ಕೊನೆ ದಿನ ಭಾನುವಾರ ನಡೆದ ಅಂಧಶ್ರದ್ಧೆ-ವೈಜ್ಞಾನಿಕ ದೃಷ್ಠಿ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ಶರಣರು ಬರಿ ವಚನಗಳನ್ನು ನೀಡಲಿಲ್ಲ. ವ್ಯವಸ್ಥೆಯಲ್ಲಿರುವ ಲೋಪ-ದೋಷಗಳ ವಿರುದ್ಧ ಪರ್ಯಾಯ ಚಿಂತನೆ ನೀಡಿದ್ದಾರೆ. 12ನೇ ಶತಮಾನದಲ್ಲಿ ಶರಣರು ತಮಗೆ ಕಂಡ ಮೌಢ್ಯಾಚರಣೆ ವಿರುದ್ಧ ಪರ್ಯಾಯ ಚಿಂತನೆ-ಸಂಸ್ಕೃತಿ ನೀಡಿದ್ದಾರೆ. ಈ ಚಿಂತನೆ-ಸಂಸ್ಕೃತಿ ಮುಂದುವರಿಸಿಕೊಂಡು ಹೋಗುವ ಕೆಲಸ ಆಗಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ, ಡಾ. ಕೆ. ಷರೀಪಾ, ಡಾ. ಟಿ.ಆರ್. ಚಂದ್ರಶೇಖರ, ಡಾ. ಶಿವಶಂಕರ ಪೋಳ ಮಾತನಾಡಿದರು. ಹುಬ್ಬಳ್ಳಿ ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಶ್ರೀ ಸಾನ್ನಿಧ್ಯ ವಹಿಸಿದ್ದರು. ಡಾ. ಅಜಯಕುಮಾರ ಸಿಂಗ್ ಇದ್ದರು.
ಕೂಡಲಸಂಗಮದಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಚನ ವಿವಿಸ್ಥಾಪನೆಗೆ ಒತ್ತಾಯ
ಧಾರವಾಡ: ಇಲ್ಲಿನ ಮುರುಘಾಮಠದ ಆವರಣದಲ್ಲಿ 3 ದಿನಗಳಿಂದ ಡಾ. ಅಜಯ ಕುಮಾರ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ 11ನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಮಹತ್ತರ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಕನ್ನಡ ಸಾಹಿತ್ಯದ ಪ್ರಮುಖ ಭಾಗವಾದ ವಚನ ಸಾಹಿತ್ಯದ ಅಧ್ಯಯನ, ಸಂಶೋಧನೆ, ಪ್ರಸರಣ ಮತ್ತು ಪ್ರಕಟಣೆಗಾಗಿ ಕೂಡಲಸಂಗಮದಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಚನ ವಿಶ್ವವಿದ್ಯಾಲಯ ಸ್ಥಾಪಿಸಬೇಕು. ರಾಜ್ಯ, ನೆರೆ ರಾಜ್ಯಗಳ ಶರಣ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು. ಬಸವ ಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು ಅರ್ಧಕ್ಕೆ ನಿಂತಿದ್ದು ಅವನ್ನು ಶೀಘ್ರಮುಗಿಸಬೇಕು. ಹಂಪಿ ಉತ್ಸವ, ಕದಂಬ ಉತ್ಸವಗಳಂತೆ ವಚನೋತ್ಸವವನ್ನು ಬಸವ ಕಲ್ಯಾಣದಲ್ಲಿ ಪ್ರತಿವರ್ಷ ಆಚರಿಸಬೇಕು, ಇದಕ್ಕಾಗಿ ಬಜೆಟ್ನಲ್ಲಿ ಪ್ರತ್ಯೇಕ ಅನುದಾನ ನೀಡಬೇಕು. ಅತ್ಯಂತ ಬೇಡಿಕೆಯಲ್ಲಿರುವ ವಚನ ಸಂಪುಟದ 3ನೇ ಮುದ್ರಣ ಮಾಡಿಸಿ, ತ್ವರಿತಗತಿಯಲ್ಲಿ ಜನರಿಗೆ ಲಭ್ಯವಾಗುವಂತೆ ಸರ್ಕಾರ ಮಾಡಬೇಕು. ವೈಚಾರಿಕ, ವೈಜ್ಞಾನಿಕ ಓರೆಗಲ್ಲಿಗೆ ನಿಲ್ಲದ ಮೂಢನಂಬಿಕೆ, ಮೌಢ್ಯಪದ್ಧತಿಗಳ ಆಚರಣೆಗಳನ್ನು ನಿಷೇಧಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಳ್ಳುವ ಕ್ರಮವನ್ನು ಸಮ್ಮೇಳನ ಸ್ವಾಗತಿಸಿದೆ.