ಜ.17ರಿಂದ ಧಾರವಾಡ ಸಾಹಿತ್ಯ ಸಂಭ್ರಮ
ಕನ್ನಡಪ್ರಭ ವಾರ್ತೆ, ಧಾರವಾಡ, ಡಿ. 30
ಕಳೆದ ವರ್ಷದಿಂದ ಆರಂಭವಾಗಿರುವ, ಸಾಹಿತ್ಯ ಕ್ಷೇತ್ರದಲ್ಲಿ ಬಹು ಚರ್ಚೆಗೆ ಒಳಗಾಗಿ ಕೊನೆಗೂ ಯಶಸ್ವಿಯಾಗಿ ನಡೆದ ಧಾರವಾಡ ಸಾಹಿತ್ಯ ಸಂಭ್ರಮ ಇದೀಗ ಎರಡನೆಯ ಆವೃತ್ತಿಗೆ ಸಿದ್ಧವಾಗಿದೆ.
ಸಾಹಿತ್ಯ ಸಂಭ್ರಮದ ಅಧ್ಯಕ್ಷ ಡಾ. ಗಿರಡ್ಡಿ ಗೋವಿಂದರಾಜ ಸೋಮವಾರ ಸುದ್ದಿಗೋಷ್ಠಿಯಲ್ಲಿ ಬರುವ ಜ. 17, 18 ಹಾಗೂ 19ರಂದು ನಡೆಯಲಿರುವ ಸಾಹಿತ್ಯ ಸಂಭ್ರಮ ಕುರಿತು ಮಾಹಿತಿ ನೀಡಿದರು. ಮೂರು ದಿನಗಳ ಕಾಲ ಕರ್ನಾಟಕ ವಿವಿ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಈ ಸಮಾರಂಭ ನಡೆಯಲಿದ್ದು, ಸಾಹಿತ್ಯ ಸಮ್ಮೇಳನ, ವಿಚಾರ ಸಂಕಿರಣಗಳಿಗಿಂತ ಭಿನ್ನವಾದ ಕಾರ್ಯಕ್ರಮವಿದು. ಭಾಷಣಗಳಿಗಿಂತ ಓದು, ಸಂಭಾಷಣೆ, ಚರ್ಚೆ, ಮಾತುಕತೆ, ಪ್ರಶ್ನೋತ್ತರಗಳೇ ಇಲ್ಲಿ ಪ್ರಧಾನ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅರ್ಥಪೂರ್ಣವಾಗಿ ತೊಡಗಿಸಿಕೊಂಡಿರುವ, ಎಲ್ಲ ಪೀಳಿಗೆಗಳಿಗೆ ಸೇರಿದ ಸಾಹಿತಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಏನಿದೆ ಸಂಭ್ರಮದಲ್ಲಿ...: ನಾಟಕ ಹುಟ್ಟುವ ರೀತಿ, ಮಕ್ಕಳ ಸಾಹಿತ್ಯಕ್ಕೆ ಹೊಸ ತಿರುವು, ಯುವ ಬರಹಗಾರರ ಸವಾಲುಗಳು, ಸಾಹಿತಿಗಳೊಂದಿಗೆ ಸಂವಾದ, ನಾನು ಮಚ್ಚಿದ ಇತ್ತೀಚಿನ ಕನ್ನಡ ಪುಸ್ತಕ, ಬೇಂದ್ರೆ-ಕುವೆಂಪು ಅವರ ಕವಿತೆಗಳ ವಾಚನ, ಅಭಿವ್ಯಕ್ತಿ ಸ್ವಾತಂತ್ರ್ಯದ ನೆಲೆಗಳು, ಜನಪ್ರಿಯ ಸಾಹಿತ್ಯದ ಸಾಂಸ್ಕೃತಿಕ ಆಯಾಮಗಳು, ಹಳೆಗನ್ನಡ ಕಾವ್ಯದ ಓದು ಏಕೆ ಬೇಕು, ಸಾಹಿತ್ಯಿಕ ಪ್ರಸಂಗಗಳ ನಿರೂಪಣೆ, ವಿದ್ಯುನ್ಮಾನ ಮಾಧ್ಯಮ ಮತ್ತು ಸಾಹಿತ್ಯ ಇಂತಹ ಹಲವು ಗೋಷ್ಠಿಗಳು ಇರುತ್ತವೆ ಎಂದ ಗಿರಡ್ಡಿ ಅವರು, ಸಂಭ್ರಮದಲ್ಲಿ ಭಾಗವಹಿಸುವ ಸಂಭವನೀಯ ಸಾಹಿತಿಗಳ ಹೆಸರು ತಿಳಿಸಿದರು.
ಯು.ಆರ್. ಅನಂತಮೂರ್ತಿ, ಎಸ್.ಎಲ್. ಭೈರಪ್ಪ, ಸಿ.ಎನ್. ರಾಮಚಂದ್ರನ್, ಗಿರೀಶ ಕಾರ್ನಾಡ್, ಚಂದ್ರಶೇಖರ ಕಂಬಾರ, ನಾಗತೀಹಳ್ಳಿ ಚಂದ್ರಶೇಖರ, ಎಚ್.ಎಸ್. ವೆಂಕಟೇಶಮೂರ್ತಿ, ಎನ್.ಎಸ್. ಲಕ್ಷ್ಮೀನಾರಾಯಣ ಭಟ್, ಪಿ. ಶೇಷಾದ್ರಿ, ಗಿರೀಶ ಕಾಸರವಳ್ಳಿ, ಟಿ.ಪಿ. ಅಶೋಕ, ಚಂಪಾ, ಹಂಪನಾ, ವೀಣಾ ಬನ್ನಂಜೆ, ಸಿ. ಬಸವಲಿಂಗಯ್ಯ, ಶ್ರೀನಿವಾಸ ಕಪ್ಪಣ್ಣ, ಜೋಗಿ, ಟಿ.ಎಸ್. ನಾಗಾಭರಣ ಇನ್ನೂ ಹಲವರು ಭಾಗವಹಿಸಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು. ಈ ಸಾಹಿತ್ಯ ಸಂಭ್ರಮದಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗೆ ರು. 500 ಪ್ರವೇಶ ಶುಲ್ಕವಿದ್ದು, ಸ್ಮರಣ ಸಂಚಿಕೆ ಹಾಗೂ ಕೆಲವು ಪುಸ್ತಕ ಒಳಗೊಂಡ ಕಿಟ್ ನೀಡಲಾಗುವುದು. 200 ಪ್ರತಿನಿಧಿಗಳಿಗೆ ಸೀಮಿತಗೊಳಿಸಲಾಗಿದೆ. ನೋಂದಣಿ ಅರ್ಜಿ ಮನೋಹರ ಗ್ರಂಥಮಾಲೆಯ ಕಚೇರಿಯಿಂದ ಪಡೆಯಬಹುದು ಅಥವಾ ಢಿಢಿಢಿ.ಝಛ್ಠಢಿಛಜಡಝ್ಝಡಿಣಛಡಛಟಝ್ಠಿಛಟಛ.್ಛ್ಟಟ ಜಾಲತಾಣದಿಂದಲೂ ಪಡೆಯಬಹುದು ಎಂದು ಸಂಭ್ರಮದ ಗೌರವ ಅಧ್ಯಕ್ಷ ಡಾ. ಎಂ.ಎಂ. ಕಲಬುರ್ಗಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಇನ್ನೋರ್ವ ಗೌರವ ಅಧ್ಯಕ್ಷ ನಾಡೋಜ ಚೆನ್ನವೀರ ಕಣವಿ, ಸಾಹಿತಿಗಳಾದ ಬಾಳಣ್ಣ ಶೀಗಿಹಳ್ಳಿ, ಡಾ. ಹ.ವೆಂ. ಕಾಖಂಡಕಿ, ಸುಕನ್ಯಾ, ಸಮೀರ ಜೋಶಿ ಇದ್ದರು.