ಹುಬ್ಬಳ್ಳಿ: ಸಹಾಯಧನ ವಿತರಣೆ
ಹುಬ್ಬಳ್ಳಿ: ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಇತ್ತೀಚೆಗೆ ಶಾಸಕ ಪ್ರಸಾದ ಅಬ್ಬಯ್ಯ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಸಹಾಯಧನ ವಿತರಿಸಿದರು. ಮಾನಮಲ ಜೈನ್‌ಗೆ ರು. 30,000, ಆಸೀಫ್ ಅಹ್ಮದ ಬೆನ್ನೂರು ಅವರಿಗೆ ರು. 25,000, ಪ್ರಸಾದ ನಾರಾಯಣಗೆ ರು. 25,000, ಪ್ರಿಯಾಂಕಾ ಬಿಲಾನಾಗೆ 23,000 ಮೌಲ್ಯದ ಚೆಕ್‌ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ರಾಜಶೇಖರ ಮೆಣಸಿನಕಾಯಿ, ಮಜರಖಾನ್, ರಾಜಮ್ಮ ಬಿಲಾನಾ, ಮೌಲಾ ಕುಮಟೇಕರ, ವಿ.ಜೆ. ತೋಡಕರ, ಟಿ.ಎನ್. ಶಿವಳ್ಳಿಮಠ, ಪ್ರಭು ಪ್ರಭಾಕರ, ರಾಜಶೇಖರ ಮೆಣಸಿನಕಾಯಿ, ಸತೀಸ ಪಾಟೀಲ, ರಾಜು ಗಾಣದಾಳ, ಬಾಬಾಜಾನ್ ಮುಧೋಳ ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯಮಟ್ಟಕ್ಕೆ ಆಯ್ಕೆ: ವಿದ್ಯಾರ್ಥಿಗಳಿಗೆ ಸನ್ಮಾನ
ಧಾರವಾಡ: ಕಲಾಶ್ರೀಯಲ್ಲಿ ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ 9ರಿಂದ 16 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಇಲ್ಲಿನ ಬಾಲಭವನದಲ್ಲಿ ಶನಿವಾರ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರೊಬೆಷನರಿ ಐಎಎಸ್ ಅಧಿಕಾರಿ ಚಾರುಲತಾ ಸೊನೆಲ್, ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಅಲ್ಲದೆ, ಮಕ್ಕಳು ಕೇವಲ ಪಠ್ಯ ಚಟವಟಿಕೆಯಲ್ಲದೆ ಪಠ್ಯೇತರ ಚಟುವಟಿಕೆಯಲ್ಲಿಯೂ ಭಾಗವಹಿಸಬೇಕು. ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ವಿದ್ಯಾರ್ಥಿಗಳಲ್ಲಿ ಹುದುಗಿದ ಪ್ರತಿಭೆಯ ಅನಾವರಣಕ್ಕಾಗಿ ಇಂತಹ ಕಾರ್ಯಯೋಜನೆಗಳನ್ನು ಹಾಕಿಕೊಳ್ಳಲಾಗಿರುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಇಂತಹ ವೇದಿಕೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಪಿ.ವೈ. ಶೆಟ್ಟಪ್ಪನವರ, ಎಚ್.ಎಸ್. ಕುಲಕರ್ಣಿ ಮಾತನಾಡಿದರು. ಅನುಪಮಾ ಕುಬಸದ ನಿರೂಪಿಸಿದರು. ನಿರ್ಮಲಾ ವಂದಿಸಿದರು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.