ಪುಟಾಣಿ ರೈಲಿಗೆ ಬಾಲಕನ ಪ್ರಾಣ ಆಹುತಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 1
ಇಂದಿರಾ ಗಾಜಿನ ಮನೆಯಲ್ಲಿನ ಪುಟಾಣಿ ರೈಲನ್ನು ಚಾಲಕ ಅತಿವೇಗವಾಗಿ ಚಲಾಯಿಸಿದ ಪರಿಣಾಮ ಹಳಿತಪ್ಪಿ ಅದರಲ್ಲಿ ಪ್ರಯಾಣಿಸುತ್ತಿದ್ದ ಶಾಲಾ ಬಾಲಕನೋರ್ವ ಮಾರಣಾಂತಿಕ ಗಾಯಗೊಂಡು ಮೃತಪಟ್ಟ ದಾರುಣ ಘಟನೆ ಶುಕ್ರವಾರ ಸಂಭವಿಸಿದೆ.
ನವಅಯೋಧ್ಯಾ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಶುಭಂ ರಾಜು ಕಲಾಲ (11) ಎಂಬುವನೇ ಮೃತಪಟ್ಟ ದುರ್ದೈವಿಯಾಗಿದ್ದು, ಶರಾವತಿ ನಗರ ನಿವಾಸಿಯಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಉಪನಗರ ಠಾಣೆ ಇನ್ಸ್ಪೆಕ್ಟರ್ ಶ್ರೀನಿವಾಸ ಹಂಡಾ, ಪುಟಾಣಿ ರೈಲು ಚಾಲಕ ಹಳೆಹುಬ್ಬಳ್ಳಿ ನಿವಾಸಿ ಬಸವರಾಜ ಶಿವಪುತ್ರಪ್ಪ ಕಿರೇಸೂರನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಹಿನ್ನೆಲೆ: ಸರ್ಕಾರದ ಆದೇಶದಂತೆ ಶಾಲಾ ಮಕ್ಕಳನ್ನು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಲನಚಿತ್ರ ವೀಕ್ಷಣೆಗಾಗಿ ನವಅಯೋಧ್ಯಾ ನಗರ ಪ್ರಾಥಮಿಕ ಶಾಲೆಯ 5 ರಿಂದ 7ನೇ ತರಗತಿವರೆಗಿನ ಒಟ್ಟು 97 ವಿದ್ಯಾರ್ಥಿಗಳೊಂದಿಗೆ 7 ಜನ ಶಿಕ್ಷಕರು ಮ್ಯಾಟ್ನಿ ಶೋ ವೀಕ್ಷಣೆಗೆ ಜ. 31ರಂದು ತೆರಳಿದ್ದರು. ಚಲನಚಿತ್ರ ವೀಕ್ಷಣೆ ನಂತರ ಊಟ ಮಾಡಲು ಪ್ರವೇಶ ಟಿಕೆಟ್ ಪಡೆದು ಇಂದಿರಾ ಗಾಜಿನ ಮನೆ ಒಳಕ್ಕೆ ತೆರಳಿದ್ದರು. ಊಟದ ನಂತರ ಮಧ್ಯಾಹ್ನ 3.30ರ ಸುಮಾರಿಗೆ 7-8 ವಿದ್ಯಾರ್ಥಿಗಳು ಪುಟಾಣಿ ರೈಲು ಏರಿದ್ದು ಆಗಲೇ ಈ ಅವಾಂತರ ಸಂಭವಿಸಿದೆ. ಪುಟಾಣಿ ರೈಲಿನ ಚಾಲಕ ಅತ್ಯಂತ ವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ರೈಲು ಚಲಾಯಿಸಿದ ಪರಿಣಾಮ ರೈಲಿನ ಹಳಿ ತಪ್ಪಿದೆ. ಮಾತ್ರವಲ್ಲದೇ, ಹಿಂದಿನ ಬೋಗಿಯಲ್ಲಿ ಕುಳಿತಿದ್ದ ಶುಭಂ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಾಗ ಆತನ ಕಾಲು ರೈಲಿನ ಗಾಲಿಯಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು 108 ಅಂಬ್ಯುಲೆನ್ಸ್ ವಾಹನದಲ್ಲಿ ಉಪಚಾರಕ್ಕಾಗಿ ಮೊದಲು ಕಿಮ್ಸ್ಗೆ ಕರೆದ್ಯೊಯಲಾಯಿತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಎಸ್ಡಿಎಂ ಆಸ್ಪತ್ರೆಗೆ ಸಾಗಿಸಲಾಯಿತು. ಆದಾಗ್ಯೂ ತೀವ್ರವಾಗಿ ಗಾಯಗೊಂಡಿದ್ದ ಶುಭಂ, ಹೆಚ್ಚು ರಕ್ತಸ್ರಾವವಾಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ.
ಅನುಮತಿ ಇರಲಿಲ್ಲ?: ಚಲನಚಿತ್ರ ವೀಕ್ಷಣೆಗೆ ಮಾತ್ರ ಸರ್ಕಾರ ಆದೇಶ ನೀಡಿತ್ತು. ಹೀಗಿದ್ದಾಗಲೂ, ಶಾಲೆಯ ಮುಖ್ಯೋಪಾಧ್ಯಾಪಕಿ ಹಿರೇಮಠ, ಚಿತ್ರ ವೀಕ್ಷಣೆ ನಂತರ ಊಟಕ್ಕೆ ಇಂದಿರಾ ಗಾಜಿನ ಮನೆಗೆ ತೆರಳುತ್ತಿರುವ ವಿಷಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದಿರಲಿಲ್ಲ. ಮಾತ್ರವಲ್ಲದೇ, ಅವರಿಂದ ಯಾವುದೇ ರೀತಿ ಅನುಮತಿ ಪಡೆಯದೇ ಬೇಜವಾಬ್ದಾರಿತನ ಪ್ರದರ್ಶಿಸಿದ್ದಾರೆ ಎಂಬ ಮಾತು ಕೇಳಿಬಂದಿವೆ.
ವಿದ್ಯಾರ್ಥಿಗಳೊಂದಿಗೆ ಊಟಕ್ಕೆ ತೆರಳುತ್ತಿರುವ ವಿಷಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದಿದ್ದಲ್ಲಿ, ಗಾಜಿನ ಮನೆಯಲ್ಲಿ ಹೆಚ್ಚಿನ ಬಂದೊಬಸ್ತ್ ಕೈಗೊಳ್ಳಲು ಅವರು ಪೊಲೀಸ್ ಇಲಾಖೆಗೆ ಕೋರಿಕೊಳ್ಳುತ್ತಿದ್ದರು. ಆದರೆ, ಮುಖ್ಯೋಪಾಧ್ಯಾಯನಿ ಇಂತಹ ಯಾವುದೇ ಕ್ರಮಕ್ಕೆ ಮುಂದಾಗದೇ ಇರುವುದು ಮುಗ್ದ ಬಾಲಕನ ಪ್ರಾಣ ಪಕ್ಷಿ ಹಾರಿ ಹೋಗಲು ಕಾರಣವಾಯಿತು.
ಸಾಂತ್ವಾನ: ಸುದ್ದಿ ತಿಳಿದು ಶುಕ್ರವಾರ ಬೆಳಗ್ಗೆ ಆಸ್ಪತ್ರೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಮುಳ್ಳೂರ, ಡಿಡಿಪಿಐ ಕಚೇರಿ ಅಧಿಕಾರಿ ಮಮತಾ ನಾಯಕ, ಸಂಪನ್ಮೂಲ ವ್ಯಕ್ತಿಗಳು, ಮುಖ್ಯೋಪಾಧ್ಯಾಯಿನಿ ಹಿರೇಮಠ ಹಾಗೂ ಶಿಕ್ಷಕರು ಆಸ್ಪತ್ರೆಗೆ ತೆರಳಿ, ಮೃತ ಬಾಲಕನ ಪಾಲಕರಿಗೆ ಸಾಂತ್ವಾನ ಹೇಳಿದ್ದಾರೆ.
ವರದಿಗೆ ಸೂಚನೆ: ನವಅಯೋಧ್ಯಾ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಶುಭಂ ರಾಜು ಕಲಾಲನ ಸಾವಿಗೆ ಸಂಬಂಧಿಸಿದಂತೆ ವರದಿ ಒಪ್ಪಿಸುವಂತೆ ಶಾಲೆಯ ಮುಖ್ಯೋಪಾಧ್ಯಾಪಕಿ ಹಿರೇಮಠ ಅವರಿಗೆ ಸೂಚಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಮುಳ್ಳೂರ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತಮ್ಮನ್ನು ದೂರವಾಣಿ ಮೂಲಕ ಸಂಪರ್ಕಿಸಿದ 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಅವರು, ಶಾಲಾ ವಿದ್ಯಾರ್ಥಿಗಳಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಲನಚಿತ್ರ ವೀಕ್ಷಣೆಗೆ ಕರೆದ್ಯೊಯುವಂತೆ ಸರ್ಕಾರದ ಆದೇಶವಿದ್ದು, ಅಂತೆಯೇ ನವಅಯೋಧ್ಯಾ ನಗರ ಶಾಲೆಯ ವಿದ್ಯಾರ್ಥಿಗಳನ್ನು ಚಿತ್ರ ವೀಕ್ಷಣೆಗೆ ಕರೆದ್ಯೊಯಲಾಗಿತ್ತು.
ಇಂದಿರಾ ಗಾಜಿನ ಮನೆಗೆ ಊಟಕ್ಕೆ ತೆರಳಲು ಹಿರೇಮಠರಿಗೆ ಅನುಮತಿ ನೀಡಲಾಗಿತ್ತೇ ಎಂಬ ಪ್ರಶ್ನೆಗೆ ಉತ್ತರಿಸಿದ ಮುಳ್ಳೂರ, ಒಟ್ಟಾರೆ ಇಡೀ ಘಟನೆಗೆ ಸಂಬಂಧಿಸಿದಂತೆ ವರದಿ ಒಪ್ಪಿಸುವಂತೆ ಮುಖ್ಯೋಪಾಧ್ಯಾಪಕಿಗೆ ಸೂಚಿಸಲಾಗಿದ್ದು, ವರದಿ ಬಂದ ನಂತರವಷ್ಟೇ ಅವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚಿಸಲಾಗುವುದೆಂದರು.
ನಿರ್ಮಿತಿ ಕೇಂದ್ರದಿಂದ ನಡೆದಿರುವ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದಾಗಿದೆ. ಈ ಕುರಿತಂತೆ ತಾವು ಹಲವಾರು ಬಾರಿ ಪಾಲಿಕೆ ಹಾಗೂ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದೆವು. ಆದಾಗ್ಯೂ, ನಿರ್ಮಿತಿ ಕೇಂದ್ರ ಹಾಗೂ ಸಂಬಂಧಿತರ ವಿರುದ್ಧ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಮುಗ್ದ ಜೀವವೊಂದು ಪ್ರಾಣ ಕಳೆದುಕೊಳ್ಳುವಂತಾಗಿದೆ.
- ಗಣೇಶ ಟಗರಗುಂಟಿ
ಇಂದಿರಾ ಗಾಜಿನ ಮನೆಗೆ ಮನರಂಜನೆಗಾಗಿ ಮಕ್ಕಳನ್ನು ಕಳುಹಿಸುವಾಗ ಪಾಲಕರು ಜವಾಬ್ದಾರಿವಹಿಸಬೇಕು. ನಮ್ಮ ಜಾಗೃತಿಯಲ್ಲಿಯೂ ನಾವಿದ್ದರೇ ಇಂತಹ ಅನಿರೀಕ್ಷಿತ ಘಟನೆಗಳಿಗೆ ಬ್ರೇಕ್ ಹಾಕಲು ಸಾಧ್ಯ.
- ಜೈನುದ್ದೀನ್ ಅನ್ಸಾರಿ
ಘಟನೆಯಿಂದ ಮನಸ್ಸು ತಲ್ಲಣಗೊಂಡಿದೆ. ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಸಂಬಂಧಪಟ್ಟವರು ನಿಗಾವಹಿಸಬೇಕು. ಇಲ್ಲಿಗೆ ಬರುವ ಮಕ್ಕಳ ಹಾಗೂ ಸಾರ್ವಜನಿಕರ ಭದ್ರತೆಗೆ ಆದ್ಯತೆ ನೀಡಬೇಕು.
- ಚೇತನ ಹಳ್ಳಿಕೇರಿ
ಪುಟಾಣಿ ರೈಲಿನಲ್ಲಿ ವಯಸ್ಕರರು ಪ್ರಯಾಣಿಸುತ್ತಿರುವುದೇ ಇಂತಹ ಅವಘಡಗಳಿಗೆ ಕಾರಣ. ಆದ್ದರಿಂದ ಪುಟಾಣಿ ರೈಲು ಚಿಣ್ಣರಿಗಾಗಿಯೇ ಮೀಸಲಿಡಬೇಕು. ಅಲ್ಲದೇ, ಅಲ್ಲೊಬ್ಬ ಗಾರ್ಡ್ನ್ನು ನೇಮಿಸುವುದು ಸೂಕ್ತ.
- ಮಹೇಶ ರಾಮದುರ್ಗ
ಮೃತ ಬಾಲಕನ ಕುಟುಂಬದ ಆರ್ಥಿಕ ಸ್ಥಿತಿ ತೀರಾ ಕೆಟ್ಟದಾಗಿದೆ. ಇಂತಹದ್ದರಲ್ಲಿ ಈ ಘಟನೆ ಸಂಭವಿಸಿದ್ದು ನಿಜಕ್ಕೂ ನೋವು ತಂದಿದೆ. ಸರ್ಕಾರ, ಪಾಲಿಕೆ ಹಾಗೂ ಜಿಲ್ಲಾಡಳಿತ ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು.
- ಮಂಜುನಾಥ, ವಿದ್ಯಾರ್ಥಿ
ಪುಟಾಣಿ ರೈಲಿನಲ್ಲಿ ವಯಸ್ಕರರಿಗೆ ಯಾವುದೇ ಕಾರಣಕ್ಕೂ ಆಸ್ಪದ ನೀಡಬಾರದು. ಅಲ್ಲದೇ, ಪ್ರಯಾಣದ ಸಂದರ್ಭದಲ್ಲಿ ಸಂಭವಿಸುವ ಅನಿರೀಕ್ಷಿತ ಘಟನೆಗಳಿಗೆ ತಕ್ಷಣ ಸ್ಪಂದಿಸುವಂತಹ ವ್ಯವಸ್ಥೆ ಕೈಗೊಳ್ಳಬೇಕು.
- ಕಿಶೋರ ಕಾಟವೆ