ಸಾಹಿತ್ಯ ಸಮ್ಮೇಳನವೋ ಮಾವನ ಮನೆ ಆತಿಥ್ಯವೋ?: ನಾಡೋಜ ಡಾ. ಪಾಟೀಲ ಪುಟ್ಟಪ್ಪ
ಧಾರವಾಡ: ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನಗಳಲ್ಲಿ ನೀರಿನಂತೆ ಹಣ ಖರ್ಚಾಗುತ್ತಿದ್ದು, ಸಾಹಿತ್ಯ ಸಮ್ಮೇಳನಗಳು ಮಾವನ ಮನೆಯ ಆತಿಥ್ಯಗಳಾಗುತ್ತಿವೆ ಎಂದು ನಾಡೋಜ ಡಾ. ಪಾಟೀಲ ಪುಟ್ಟಪ್ಪ ಹೇಳಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋಟಿಗಟ್ಟಲೇ ಖರ್ಚು ಮಾಡಿ ನಡೆಸುವ ಸಾಹಿತ್ಯ ಸಮ್ಮೇಳನಗಳು ಯಾವ ಪುರುಷಾರ್ಥಕ್ಕೆ? ಅಲ್ಲಿ ಕೇವಲ ರೊಟ್ಟಿ, ಹೋಳಿಗೆ, ಊಟ ಕುರಿತೇ ಹೆಚ್ಚಿನ ಗಮನ ಹೋಗುತ್ತಿದೆಯೇ ಹೊರತು ಕನ್ನಡದ ಕುರಿತು ಗಂಭೀರ ಚಿಂತನೆಗಳಾಗುತ್ತಿಲ್ಲ. ಅಲ್ಲಿ ಹೋಗುವವರು ಸಮ್ಮೇಳನಕ್ಕೆ ಹೋಗುತ್ತಾರೋ ಅಥವಾ ಆತಿಥ್ಯಕ್ಕೆ ಹೋಗುತ್ತಾರೋ ಎಂಬುದು ತಿಳಿಯುತ್ತಿಲ್ಲ ಎಂದರು.ಸರ್ಕಾರದ ಹಣ ಜನರ ಹಣ. ಅದನ್ನು ಮಿತವಾಗಿ ಖರ್ಚು ಮಾಡಬೇಕು. ನೀರಿನಂತೆ ಹಣ ಖರ್ಚು ಮಾಡುವುದರಿಂದ ಭಾಷೆ ಉಳಿಯುವುದಿಲ್ಲ. ಬೆಳೆಯುವುದಿಲ್ಲ ಎನ್ನುವುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ. ಸರ್ಕಾರ ಅನಗತ್ಯ ವಿಷಯಗಳಿಗೆ ಸಾಕಷ್ಟು ಹಣ ಖರ್ಚು ಮಾಡುತ್ತಿದೆ. ಅಮೆರಿಕದಲ್ಲಿ ನಡೆಯುವ ಅಕ್ಕ ಸಮ್ಮೇಳನಕ್ಕೆ ಕೋಟಿಗಟ್ಟಲೇ ಹಣ ನೀಡುತ್ತದೆ. ಅಲ್ಲಿ ಹಣ ಹಾಳು ಮಾಡುವುದಕ್ಕಿಂತ ಇಲ್ಲಿ ಕನ್ನಡ ಬೆಳೆಸುವ ಕೆಲಸ ಮಾಡಬೇಕಿದೆ ಎಂದರು.
ತಮಿಳುನಾಡಿನ ಕೊಯಮತ್ತೂರ ಜಿಲ್ಲೆಯ ತಾಳವಾಡಿಯಲ್ಲಿ ಕನ್ನಡಿಗರೇ ಇದ್ದಾರೆ. ಅಲ್ಲಿನ ಶಾಲೆಯಲ್ಲಿ ಎಲ್ಲರೂ ಕನ್ನಡ ಕಲಿಯುವವರೇ. ಆದ್ದರಿಂದ ಅದು ಕರ್ನಾಟಕ ರಾಜ್ಯಕ್ಕೆ ಸೇರಬೇಕೆಂದು ಪ್ರತಿಭಟಿಸಿದ ವಾಟಾಳ್ ನಾಗರಾಜ್ ಮತ್ತು ಸಂಗಡಿಗರನ್ನು ಬಂಧಿಸಿದ್ದು ಖಂಡನಾರ್ಹ. ಅವರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.