ಸುಜಾತಾಗೆ ಕ್ಯಾನ್ಸರ್: ಕುಟುಂಬಕ್ಕೆ ಕಂಟಕ
ಧಾರವಾಡ: ಕಿವಿ ಕೇಳದ ವೃದ್ಧ ತಂದೆ, ಮೂರ್ಛೆ ರೋಗದಿಂದ ಬಳಲುತ್ತಿರುವ ತಾಯಿ. ಕಿತ್ತು ತಿನ್ನುವ ಬಡತನದ ಈ ಕುಟುಂಬಕ್ಕೆ ಆಧಾರವಾಗಿದ್ದ ಸಹೋದರ ಅಪಘಾತದಲ್ಲಿ ತೀರಿಹೋದ. ಇನ್ನು ತಾನಾದರೂ ದುಡಿದು ಮನೆ ನಡೆಸಬೇಕೆಂಬ ಛಲದಲ್ಲಿದ್ದ ಆಕೆಗೂ ಈಗ ಕ್ಯಾನ್ಸರ್ ಎಂಬ ಮಾರಕ ರೋಗ.
ಧಾರವಾಡ ಕಲ್ಯಾಣ ನಗರದ ಸುಜಾತಾ ಜಾಧವ ಎಂಬ ಕ್ಯಾನ್ಸರ್ ಪೀಡಿತೆಯೊಬ್ಬರ ಚಿಂತಾಜನಕ ಕಥೆ ಇದು. ಒಂದೆಡೆ ವೃದ್ಧ ತಂದೆ, ತಾಯಿಯ ಆರೋಗ್ಯದ ಚಿಂತೆ. ಇನ್ನೊಂದೆಡೆ ತನ್ನ ಜೀವಕ್ಕೆ ಕಂಟಕವಾಗಿರುವ ಸ್ತನ ಕ್ಯಾನ್ಸರ್. ಮತ್ತೊಂದೆಡೆ ಕುಟುಂಬದ ನಿರ್ವಹಣೆಯ ಸಂಕಷ್ಟದಿಂದ ಸುಜಾತಾ ತೀರಾ ನೊಂದಿದ್ದಾಳೆ.
ಖಾಸಗಿ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಪಡಿಯಚ್ಚು ಕೆಲಸ ಮಾಡುತ್ತಿದ್ದ ಸುಜಾತಾಳ ತಂದೆ ಬಾಬುರಾವ್ ಜಾಧವ ನಿವೃತ್ತಿ ಹೊಂದಿ ಹಲವು ವರ್ಷಗಳೇ ಕಳೆದಿವೆ. ಈಗ ಒಂದು ಕಣ್ಣು ಕಾಣೋದಿಲ್ಲ, ಕಿವಿ ಕೇಳೋದಿಲ್ಲ. 56 ವಯಸ್ಸಿನ ತಾಯಿ ಗೀತಾ ಅವರಿಗೆ ಆಗಾಗ ಮೂರ್ಛೆ ಕಾಯಿಲೆ ಬರುತ್ತದೆ. ಮನೆಗೆ ಆಧಾರವಾಗಿದ್ದ ಸುಜಾತಾಳ ತಮ್ಮ ಪ್ರವೀಣ ಆರು ವರ್ಷದ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಇನ್ನು ಸುಜಾತಾ ಹೊಲಿಗೆ ಯಂತ್ರ ಇಟ್ಟುಕೊಂಡು ಅವರಿವರ ಬಟ್ಟೆ ಹೊಲಿದು ಕುಟುಂಬ ಸಾಗಿಸುತ್ತಿದ್ದಳು. 37 ವಯಸ್ಸಿನ ಸುಜಾತಾಳಿಗೆ ಕಳೆದ ಎರಡು ವರ್ಷಗಳ ಹಿಂದೆ ಬಂದ ಸ್ತನ ಕ್ಯಾನ್ಸರ್ ಆಕೆಯ ಬದುಕನ್ನೇ ಹಿಂಡಿ ಹಿಪ್ಪೆಯಾಗಿಸಿದೆ.
ಆಸರೆ ಬೇಕಿದೆ: ಆರ್ಥಿಕ ಸಹಾಯ ಮಾಡಿರೆಂದು ಶಾಸಕ ಚಂದ್ರಕಾಂತ ಬೆಲ್ಲದ ಸೇರಿದಂತೆ ಹಲವರಲ್ಲಿ ಬೇಡಿಕೊಂಡಿದ್ದ ಈ ಕುಟುಂಬಕ್ಕೆ ಕೇವಲ ಭರವಸೆಗಳ ಮಹಾಪೂರವೇ ಹೊರತು ಸಹಾಯದ ಹಸ್ತ ಮಾತ್ರ ದೊರೆಯಲಿಲ್ಲ.
ಬಾಡಿಗೆ ಮನೆಯಲ್ಲಿರುವ ಈ ಕುಟುಂಬದ ನಿಕೃಷ್ಟ ಸ್ಥಿತಿ ನೋಡಲಾರದೆ ಅಲ್ಲಿನ ಯುವಕ ಮಂಡಳವೊಂದರ ಕೃಷ್ಣಾ ಕೊಟ್ಟಾಯಿನ್ ಎಂಬುವವರು ಕಳೆದ ಗಣೇಶೋತ್ಸವದಲ್ಲಿ ದಾನಿಗಳಿಂದ ತುಸು ಹಣ ಕೂಡಿಸಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸುಜಾತಾಳಿಗೆ ಚಿಕಿತ್ಸೆ ಕೊಡಿಸುವ ಪುಣ್ಯದ ಕೆಲಸ ಮಾಡಿದ್ದಾರೆ. ಈಗಾಗಲೇ ಚಿಕಿತ್ಸೆಗೆ ಒಂದೂವರೆ ಲಕ್ಷ ವೆಚ್ಚವಾಗಿದೆ. ಇನ್ನೂ ಲಕ್ಷ ರುಪಾಯಿ ಚಿಕಿತ್ಸೆಗೆ ಬೇಕಿದೆ. ಜೊತೆಗೆ ತಂದೆ-ತಾಯಿ ಆಸ್ಪತ್ರೆ ಖರ್ಚು ಇದೆ. ಬಾಡಿಗೆ ಮನೆಯಲ್ಲಿರುವ ನಮಗೆ ಒಂದು ತುತ್ತಿನ ಊಟಕ್ಕೂ ತತ್ವಾರ ಉಂಟಾಗಿದೆ ಎಂದು ಬೇಸರದ ನುಡಿಗಳನ್ನಾಡುತ್ತಾರೆ ಸುಜಾತಾ.
-ಬಸವರಾಜ ಹಿರೇಮಠ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.