ಬಿಆರ್ಟಿಎಸ್ ವಿಳಂಬಕ್ಕೆ ಈಗ ರಾಜಕೀಯ ಲೆಕ್ಕಾಚಾರ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 4-
ವಿಧಾನಸಭೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಹೊಸ್ತಿಲಲ್ಲೇ ಬಿಆರ್ಟಿಎಸ್ ಯೋಜನೆ ಎದ್ದು ಕುಳಿತಿರುವುದು ಜನಪ್ರತಿನಿಧಿಗಳಿಗೆ ಅದರಲ್ಲಿಯೂ ಶಾಸಕರಿಗೆ ದೊಡ್ಡ ತಲೆ ನೋವಾಗಿದೆ. ಯೋಜನೆಗೆ ಅಗತ್ಯ ಭೂಮಿ ವಶ ಪಡಿಸಿಕೊಳ್ಳಲು ಹೋಗಿ ಮತದಾರನ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂಬ ಭೀತಿಯಿಂದ ಚುನಾವಣೆ ಮುಗಿಯುವವರೆಗೆ ಬಿಆರ್ಟಿಎಸ್ ಸಹವಾಸವೇ ಬೇಡ ಎನ್ನುವಂತಿರುವುದರಿಂದಲೇ ಯೋಜನೆ ಆಮೆಗತಿಯಲ್ಲಿ ಸಾಗಿದೆ.
22 ಕಿ.ಮೀ. ಉದ್ದದ ರಸ್ತೆ ನಿರ್ಮಾಣವಾಗಬೇಕಾದರೆ ಅವಳಿ ನಗರದ ಇಕ್ಕೆಲಗಳಲ್ಲಿ ಸುಮಾರು 68 ಎಕರೆಗೂ ಹೆಚ್ಚು ಭೂಸ್ವಾಧೀನವಾಗಬೇಕಾಗುತ್ತದೆ. ಸುಮಾರು 650ಕ್ಕೂ ಹೆಚ್ಚು ಕಟ್ಟಡಗಳು ಬಿಆರ್ಟಿಎಸ್ ಕಾರಿಡಾರ್ ಮತ್ತು ಮಿಕ್ಸೆಡ್ ಟ್ರಾಫಿಕ್ ಲೈನ್ಗೆ ಬಲಿಯಾಗುವಂತಹ ಪರಿಸ್ಥಿತಿ ಇದೆ.
ಮೊದಲಿನಿಂದಲೂ ಹುಬ್ಬಳ್ಳಿ ನಗರ ವಾಣಿಜ್ಯಕ್ಕೆ ಹೆಸರುವಾಸಿ, ಮುಖ್ಯ ರಸ್ತೆ ಪಕ್ಕ ಇರುವ ಇಲ್ಲಿನ ಗೇಣುದ್ದ ಜಾಗಕ್ಕೂ ಚಿನ್ನದ ಬೆಲೆ. ವ್ಯಾಪಾರಸ್ಥರಿಗೆ ಇಂತಹ ಜಾಗ ಬಿಟ್ಟುಕೊಟ್ಟು ಬೇರೆಲ್ಲೊ ಸ್ಥಳಾಂತರವಾಗುವುದಕ್ಕೆ ಇಚ್ಛೆ ಇಲ್ಲ. ಇದೇ ಕಾರಣಕ್ಕಾಗಿಯೇ ಈ ರಸ್ತೆ ಅಗಲ ಕಡಿಮೆ ಎಂದು ಸಿಎಂ ಶೆಟ್ಟರ್ಗೆ ಮನವಿ ಮಾಡಿದ್ದರು. ಮನವಿಗೆ ಸರ್ಕಾರವಾಗಲಿ ಎಚ್ಡಿಬಿಆರ್ಟಿಎಸ್ ಕಂಪನಿಯಾಗಲಿ ಕವಡೆ ಕಾಸಿನ ಕಿಮ್ಮತ್ತು ಕೊಡದ ಕಾರಣ ಜನರಲ್ಲಿ ಯೋಜನೆ ಬಗ್ಗೆ ಆಕ್ರೋಶವಿದೆ. ಈ ಆಕ್ರೋಶದ ನಡುವೆ ಸರ್ಕಾರ ಬಿಆರ್ಟಿಎಸ್ಗೆಂದು ಭೂಸ್ವಾಧೀನ ಮಾಡಿಕೊಳ್ಳಲು ಮುಂದಾದರಂತೂ ಮುಗಿದೇ ಹೋಯಿತು. ಭವಿಷ್ಯದಲ್ಲಿ ಎದುರಾಗುವ ಚುನಾವಣೆಯಲ್ಲಿ ತಿರುಗಿ ಬೀಳುವುದು ಖಂಡಿತ. ಇದನ್ನು ಮನನ ಮಾಡಿಕೊಂಡಿರುವ ಜನಪ್ರತಿನಿಧಿಗಳು ಸದ್ಯದ ಮಟ್ಟಿಗೆ ಯೋಜನೆಯ ಬಗ್ಗೆ ಉಸಿರಾಡುವುದೇ ಬೇಡ ಎನ್ನುವ ಧೋರಣೆ ತಾಳಿದ್ದಾರೆ.
ಎಲೆಕ್ಷನ್ ಗಿಮಿಕ್: ಇಡೀ ಯೊಜನೆಗೆ ಅಡ್ಡಗಾಲು ಆಗಿ ನಿಂತಿರುವ ಭೂಸ್ವಾಧೀನದ ಗುಮ್ಮನನ್ನು ಆಡಳಿತಾರೂಢ ಪಕ್ಷ ಹೆದರಿಕೆಯಿಂದ ನೋಡುತ್ತಿದ್ದರೆ, ಈ ಗುಮ್ಮ ಎದ್ದರೆ ಸಾಕು ರಾಜಕೀಯ ಬೆಳೆ ಬೇಯಿಸಿಕೊಳ್ಳೊಣ ಎಂದು ವಿರೋಧ ಪಕ್ಷಗಳು ತುದಿಗಾಲ ಮೇಲೆ ನಿಂತಿವೆ.
ಏತನ್ಮಧ್ಯೆ, ಆಡಳಿತಾರೂಢ ಪಕ್ಷದ ಜಿಲ್ಲೆಯಲ್ಲೂ ಒಡೆದು ಹೋಳಾಗಿದೆ. ಹೀಗಾಗಿ ಒಂದೊಮ್ಮೆ ಒಟ್ಟಾಗಿದ್ದವರೇ ಪರಸ್ಪರ ಕತ್ತಿ ಮಸೆಯಲು ಕಾದುಕುಳಿತಿದ್ದಾರೆ. ಈ ಯೋಜನೆಯ ವಿರುದ್ಧ ದನಿ ಎತ್ತುವವರ ಆಕ್ರೋಶದ ಬೆಂಕಿಗೆ ಇವರು ತುಪ್ಪ ಸುರಿಯಬಹುದು ಎನ್ನುವ ಆತಂಕ ಆಡಳಿತಾರೂಢ ಪಕ್ಷದ ಮುಖಂಡರಿಗೆ.
ಅಪರೂಪಗಳಿಗೆ ಸಾಕ್ಷಿಯಾಗುತ್ತಿದೆಯೇ?
ಒಂದಂತೂ ಸತ್ಯ. 692 ಕೋಟಿ ಮಹಾತ್ವಾಕಾಂಕ್ಷಿ ಯೋಜನೆಗೆ ಆದ್ಯತೆ ನೀಡಿ ಸರ್ಕಾರದ ಮಟ್ಟದಲ್ಲಿ ಮಂಜೂರು ಆಗುವಂತೆ ಮಾಡಿದ್ದು ಮುಖ್ಯಮಂತ್ರಿ ಜಗದೀಶ ಶೆಟ್ಟರ್. ರಾಜ್ಯ ರಾಜಕೀಯದಲ್ಲಿ ಆಗುತ್ತಿರುವ ತಲ್ಲಣಗಳಿಂದಾಗಿ ಯೋಜನೆಯ ಜಾರಿಗೆ ಸಂಬಂಧಿಸಿದಂತೆ ಗಟ್ಟಿ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಅವರಿಂದ ಆಗುತ್ತಿಲ್ಲ. ಇನ್ನೊಂದು ಗಮನಾರ್ಹ ಸಂಗತಿ ಎಂದರೆ, ಎಂದೂ ಒಟ್ಟಾಗಿ ಕಾಣಿಸಿಕೊಳ್ಳದ ಎ.ಎಂ. ಹಿಂಡಸಗೇರಿ, ಜಬ್ಬಾರಖಾನ ಹೊನ್ನಳ್ಳಿ, ಯೂಸುಫ್ ಸವಣೂರು ಈ ಯೋಜನೆಯಲ್ಲಿ ಸಂತ್ರಸ್ತರಾಗುತ್ತಿರುವ ಜನರನ್ನು ತಮ್ಮತ್ತ ಸೆಳೆಯಲು ಮುಂದಾಗಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಕೆಲವು ದಿನಗಳ ಹಿಂದೆ ನಡೆದ ಯೋಜನಾ ಸಂತ್ರಸ್ತರ ಸಭೆಯಲ್ಲಿ ಈ ಮೂವರು ಒಟ್ಟಾಗಿ ಕಾಣಿಸಿಕೊಂಡಿದ್ದರು.
ರಾಜಕೀಯ ಲೆಕ್ಕಾಚಾರ: ಕಳೆದ ಒಂದು ವರ್ಷದ ಹಿಂದೆ ಆರಂಭವಾಗಿರುವ ಈ ಯೋಜನೆ ಮುಂದೆ ಸಾಗದಂತೆ ರಾಜಕೀಯ ತಂತ್ರ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ. ಸರ್ಕಾರ ಹಣ ಬಿಡುಗಡೆ ಮಾಡಿದರೂ ಭೂಸ್ವಾಧೀನಕ್ಕೆ ಕೆಲವೇ ದಿನಗಳ ಹಿಂದಷ್ಟೆ ಚಾಲನೆ ನೀಡಲಾಗಿದೆ. ಅದೂ ಕೂಡ ವೇಗ ಪಡೆದುಕೊಳ್ಳುವ ಲಕ್ಷಣಗಳಿಲ್ಲ. ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಅಧ್ಯಕ್ಷರಾಗಿರುವ ಭೂಸ್ವಾಧೀನ ಕಮೀಟಿ ಇನ್ನೂ ಶೇ.50ಕ್ಕೂ ಹೆಚ್ಚು ಸಂತ್ರಸ್ತರಿಗೆ ಮೊದಲನೇ ನೋಟಿಸು ಜಾರಿಗೊಳಿಸಬೇಕಾಗಿದೆ. ಇದಾದ ಮೇಲೆ ಕಟ್ಟಡಗಳ, ಮರಗಳ, ಬೆಳೆ, ಬೊರವೆಲ್ ಇತ್ಯಾದಿಗಳ ಮೌಲ್ಯಾಂಕನವಾಗಬೇಕು. ನೋಟಿಸು ಸ್ವೀಕರಿಸಿದ ಹಲವಾರು ಸಂತ್ರಸ್ತರ ಕಟ್ಟಡಗಳ ಸಮೀಕ್ಷೆಯೂ ಆಗಿಲ್ಲ. ಅಂತಹ ಸಂತ್ರಸ್ತರಿಗೆ ನೀಡಬೇಕಾದ ಮೊದಲನೇ ಕಂತಿನ ಪರಿಹಾರವೂ ನಿಗದಿಯಾಗಿಲ್ಲ. ಒಟ್ಟಿನಲ್ಲಿ ಭೂಸ್ವಾಧೀನ ಮತ್ತು ಪರಿಹಾರ ವಿತರಣೆಗೆ ಕನಿಷ್ಟ ಏನಿಲ್ಲವೆಂದರೂ ಇನ್ನೂ ಒಂದು ವರ್ಷ ಬೇಕು. ಅಲ್ಲಿಯವರೆಗೆ ಜನಪ್ರತಿನಿಧಿಗಳ ಅಣತಿಯಂತೆ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಈಗ ಆರಂಭಿಸಿರುವ ರಸ್ತೆ ನಿರ್ಮಾಣ ಕಾಮಗಾರಿಯನ್ನು ಅತ್ತ ನಿಂತಂತೆಯೂ ಅಲ್ಲ ಇತ್ತ ವೇಗ ಪಡೆದಂತೆಯೂ ಅಲ್ಲ ಎನ್ನುವಂತೆ ಕಾಮಗಾರಿ ಮುಂದುವರಿಸಬೇಕಾಗಿದೆ.
ಅಮೆರಿಕದಿಂದ ಭಾರತದ ವರೆಗೆ
ಬಿಆರ್ಟಿಎಸ್ ಅಥವಾ ಬಸ್ ರ್ಯಾಪಿಡ್ ಸಿಸ್ಟಮ್ ಸಾರಿಗೆ ವ್ಯವಸ್ಥೆ ಮೊದಲು ಪರಿಚಿತಗೊಂಡಿದ್ದು ದಕ್ಷಿಣ ಅಮೆರಿಕ ದೇಶಗಳಲ್ಲಿ. ಭಾರತಕ್ಕೆ ಕಾಲಿರಿಸಿದ್ದು ಪುಣೆ ಮುಖಾಂತರ. ತದನಂತರ ಅಹ್ಮದಾಬಾದ್, ದೆಹಲಿ, ಸೂರತ್ ಮತ್ತು ಇಂದೋರ್ಗಳಿಗೂ ವ್ಯಾಪಿಸಿ ಇದೀಗ ರಾಜ್ಯದಲ್ಲಿ ಪ್ರಥಮ ಬಾರಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ಜಾರಿಯಾಗುತ್ತಿದೆ.
ಹು-ಧಾದಲ್ಲಿ ಎಲ್ಲಿಂದ ಎಲ್ಲಿಗೆ?
ಹುಬ್ಬಳ್ಳಿ ನಗರದ ರೈಲ್ವೆ ನಿಲ್ದಾಣ ಮತ್ತು ನಗರ ಸಾರಿಗೆ ಬಸ್ ನಿಲ್ದಾಣದಿಂದ ಆರಂಭಗೊಳ್ಳುವ ಬಿಆರ್ಟಿಎಸ್ ಸಾರಿಗೆ ಬಸ್ ಹೊಸುರ ಸರ್ಕಲ್, ಉಣಕಲ್ ಕ್ರಾಸ್, ಉಣಕಲ್ ಗ್ರಾಮ, ಉಣಕಲ್ ಕೆರೆ, ಭೈರಿದೇವರಕೊಪ್ಪ, ನವನಗರ ಕ್ಯಾನ್ಸರ್ ಆಸ್ಪತ್ರೆ, ನವನಗರ, ರಾಯಾಪುರ, ಎಸ್ಡಿಎಂ ಆಸ್ಪತ್ರೆ, ನವಲೂರ ಕೆರೆ, ಧಾರವಾಡದ ಎನ್ಟಿಟಿಎಫ್, ಕೋರ್ಟ್ ಸರ್ಕಲ್, ಜುಬೀಲಿ ಸರ್ಕಲ್ವರೆಗೆ ತಲುಪಲಿದೆ. ಬಿಆರ್ಟಿಎಸ್ ಲೇನ್: ಎಂಟು ಪಥಗಳನ್ನು ಹೊಂದಿರುವ ಬಿಆರ್ಟಿಎಸ್ ರಸ್ತೆ ನಗರಪ್ರದೇಶ ಹೊರಭಾಗದಲ್ಲಿ ಒಟ್ಟು ಅಗಲ 44 ಮೀಟರ್ ಇದ್ದರೆ, ಹುಬ್ಬಳ್ಳಿ ಮತ್ತು ಧಾರವಾಡ ನಗರದ ವ್ಯಾಪ್ತಿಯಲ್ಲಿ ರಸ್ತೆ ಅಗಲ 35 ಮೀಟರ್ ಮತ್ತು ಏಳು ಲೇನ್ಗಳಿರಲಿವೆ.
ಹೇಗಿರಲಿದೆ ಸಾರಿಗೆ ವ್ಯವಸ್ಥೆ?
ಬಿಆರ್ಟಿಎಸ್ ಬಸ್ಗಳಿಗೆ ಎಂದು ಎರಡೂ ಬದಿಗೆ ಪ್ರತ್ಯೇಕ ಲೇನ್ಗಳನ್ನು ಮೀಸಲು ಇರಿಸಲಾಗಿದೆ. ಈ ಲೇನ್ಗಳಲ್ಲಿ ಸಂಚರಿಸುವ ಬಸ್ಗಳು ಗಂಟೆಗೆ 25ರಿಂದ 35 ಕಿ.ಮೀ. ವೇಗದಲ್ಲಿ ಸಂಚರಿಸಲಿವೆ. ಸದ್ಯ ಧಾರವಾಡ ಮತ್ತು ಹುಬ್ಬಳ್ಳಿ ಮಧ್ಯೆ ಪ್ರತಿದಿನ 16 ಸಾವಿರಕ್ಕಿಂತ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಮುಂದಿನ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಗಂಟೆಗೆ 12ರಿಂದ 15 ಸಾವಿರ ಪ್ರಯಾಣಿಕರು ಹಳೇ ಪಿಬಿ ರಸ್ತೆಯಲ್ಲಿ ಸಂಚರಿಸಬಹುದು ಎಂದು ಅಂದಾಜಿಸಲಾಗಿದೆ.
-ಸತೀಶ ಪಾಗಾದ