ಸ್ಥಳದಲ್ಲೇ ಪರವಾನಗಿ ನವೀಕರಣ: ಪಾಲಿಕೆ
ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಅವಳಿ ನಗರಗಳ ವ್ಯಾಪ್ತಿಯಲ್ಲಿರುವ ಉದ್ದಿಮೆ ಮತ್ತು ಹೋಟೆಲುಗಳಿಗೆ ಫೆ. 5ರಿಂದ ಮಾರ್ಚ್ 1ರ ವರೆಗೆ ಸ್ಥಳದಲ್ಲೇ ಪರವಾನಗಿ ನವೀಕರಣಗೊಳಿಸಿಕೊಡುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಸ್ಥಳದಲ್ಲಿ ನವೀಕರಣ ಬಯಸುವ ಉದ್ಯಮಿಗಳು, ವ್ಯಾಪಾರಸ್ಥರು ಮೂಲ ಪರವಾನಗಿ ಪತ್ರ ಹಾಜರುಪಡಿಸಬೇಕು. ಪರವಾನಗಿ ಇಲ್ಲದಿದ್ದರೆ ಅರ್ಜಿ ಜೊತೆಗೆ ಈ ಹಿಂದೆ ಪಾವತಿಸಿದ ನವೀಕರಣ ಶುಲ್ಕದ ಚಲನ್‌ಗಳ ಪ್ರತಿ ಲಗತ್ತಿಸಬೇಕು. ಅರ್ಜಿ ಜೊತೆಗೆ ಚಾಲ್ತಿ ಆಸ್ತಿ ಕರ ಪಾವತಿಸಿದ ಚಲನ್ ಲಗತ್ತಿಸಬೇಕು. ಉದ್ಯಮಿಗಳು ಮಹಾನಗರ ಪಾಲಿಕೆ ಈ ಅಭಿಯಾನವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಪಾಲಿಕೆಯ ಪ್ರಕಟಣೆ ತಿಳಿಸಿದೆ.
ಇಂದು ಸ್ನೇಹ ಸಮ್ಮೇಳನ
ಕಲಘಟಗಿ: ಪಟ್ಟಣದ ಸಂಸ್ಕಾರ ಮಾಡೆಲ್ ಸ್ಕೂಲ್‌ನ ವಾರ್ಷಿಕ ಸ್ನೇಹ ಸಮ್ಮೇಳನವು ಶಾಲಾ ಆವರಣದಲ್ಲಿ ಫೆ. 6ರಂದು ಸಾಯಂಕಾಲ 5.30ಕ್ಕೆ ಜರುಗಲಿದೆ. ಸಮಾರಂಭದ ಉದ್ಘಾಟಕರಾಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಿಂಧು ಬಿ. ಆಗಮಿಸಲಿದ್ದು, ತಾಲೂಕು ದಂಡಾಧಿಕಾರಿ ವಿದ್ಯಾಧರ ಗುಳಗುಳಿ, ಕ್ಷೇತ್ರಶಿಕ್ಷಣಾಧಿಕಾರಿ ಎಂ.ಬಿ. ಮಾಳಗಿ, ಪಪಂ ಮುಖ್ಯಾಧಿಕಾರಿ ರವಿ ಬಾಗಲಕೋಟ ಅತಿಥಿಗಳಾಗಿ ಆಗಮಿಸಲಿದ್ದು, ಸಂಸ್ಥೆಯ ಅಧ್ಯಕ್ಷ ರಾಕೇಶ ಅಳಗವಾಡಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.