ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನಂಜುಂಡಪ್ಪ ವರದಿ: ಬಜೆಟ್‌ನಲ್ಲಿ ರು. 2,900 ಕೋಟಿ

Parashurama
Updated On : 8 Feb 2013, 11:08 am

ಕನ್ನಡಪ್ರಭ ವಾರ್ತೆ, ಧಾರವಾಡ, ಫೆ. 7
ಡಾ೤ ಡಿ.ಎಂ. ನಂಜುಂಡಪ್ಪ ವರದಿ ಅನುಷ್ಠಾನಕ್ಕಾಗಿ ಕಳೆದ ಬಜೆಟ್‌ನಲ್ಲಿ ರು. 2,650 ಕೋಟಿ ನೀಡಿದ್ದು, 2013-14ನೇ ಆಯವ್ಯಯ ಪತ್ರದಲ್ಲಿ ರು. 2,900 ಕೋಟಿ ಅನುದಾನ ನಿಗದಿ ಪಡಿಸಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾಗಿ ಡಾ೤ ಡಿ.ಎಂ. ನಂಜುಂಡಪ್ಪ ವರದಿ ಅನುಷ್ಠಾನ ಉನ್ನತಾಧಿಕಾರ ಸಮಿತಿ ಅಧ್ಯಕ್ಷ ತ್ರಿವಿಕ್ರಮ ಜೋಶಿ ಹೇಳಿದರು.
ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷದ ಬಜೆಟ್‌ನಲ್ಲಿ ಶೇ. 60 ಹಣ ಬಳಕೆಯಾಗಿದೆ. ವರ್ಷಾಂತ್ಯಕ್ಕೆ ಇನ್ನೂ ಮೂರು ತಿಂಗಳು ಬಾಕಿ ಇದ್ದು, ರು. 600 ಕೋಟಿ ಅನುದಾನದ ಅಭಿವೃದ್ಧಿ ಕಾಮಗಾರಿ ನಡೆಸಲಾಗುವುದು ಎಂದರು.
ಈ ಅನುದಾನ ಸಾಮಾನ್ಯ ಬಜೆಟ್‌ನಲ್ಲಿ ಬಂದುದಲ್ಲ. ವಿಶೇಷ ಅನುದಾನವೆಂದು ಬಿಡುಗಡೆ ಆಗಿರುವ ಹಣದ ಸಮರ್ಪಕವಾಗಿ ಸದುಪಯೋಗವಾಗಬೇಕು. ನಿಗದಿತ ಅವಧಿಯಲ್ಲಿ ಕಾಮಗಾರಿ ಗುಣಮಟ್ಟದೊಂದಿಗೆ ಪೂರ್ಣಗೊಳ್ಳಬೇಕು. ಈ ಕುರಿತು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ವಿಶೇಷ ಹಣದಲ್ಲಿ ಮುಕ್ತಾಯವಾದ ಕಾಮಗಾರಿಗೆ ಕಡ್ಡಾಯವಾಗಿ ಹೆಸರು ಸೂಚಿಸುವುದು ಅಗತ್ಯ ಎಂದರು.
114 ಹಿಂದುಳಿದ ತಾಲೂಕು:  ನಂಜುಂಡಪ್ಪ ವರದಿ 2000ನೇ ಇಸ್ವಿಯಲ್ಲಿ ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಇದ್ದಾಗಲೇ ಸಲ್ಲಿಕೆಯಾಗಿದೆ. ಒಟ್ಟು ರು. 31 ಸಾವಿರ ಕೋಟಿ ಹಣ ವಿನಿಯೋಗಿಸಿ ರಾಜ್ಯದ 114 ಹಿಂದುಳಿದ ತಾಲೂಕುಗಳು (35 ಹಿಂದುಳಿದ, 40 ಅತಿ ಹಿಂದುಳಿದ ಹಾಗೂ 39 ತಾಲೂಕು ಅತ್ಯಂತ ಹಿಂದುಳಿದ) ಅಭಿವೃದ್ಧಿ ಆಗಬೇಕೆಂದು ವರದಿಯಲ್ಲಿ ಹೇಳಲಾಗಿತ್ತು. ಇದರಲ್ಲಿ ಶೇ. 60ರಷ್ಟು (16 ಸಾವಿರ ಕೋಟಿ) ಉತ್ತರ ಕರ್ನಾಟಕಕ್ಕೆ ಹಾಗೂ ಶೇ. 40ರಷ್ಟು (15 ಸಾವಿರ ಕೋಟಿ) ಇತರೆಡೆ ವಿನಿಯೋಗಿಸಬೇಕೆಂದು ಹೇಳಲಾಗಿತ್ತು. 2007ರಿಂದ ವರದಿ ಅನುಷ್ಠಾನವಾಗಿದೆ. ಕಳೆದ ಡಿ. 31ರ ವರೆಗೆ ಒಟ್ಟು ರು. 10,421 ಕೋಟಿ ವೆಚ್ಚದ ಅಭಿವೃದ್ಧಿ ಕೆಲಸಗಳಾಗಿವೆ ಎಂದು ಜೋಶಿ ಹೇಳಿದರು.
  ಧಾರವಾಡ ಜಿಲ್ಲೆಗೆ ನಂಜುಂಡಪ್ಪ ವರದಿ ಅನುಷ್ಠಾನಕ್ಕಾಗಿ ರು. 54.37 ಕೋಟಿ ನಿಗದಿಯಾಗಿದ್ದು, ಬಿಡುಗಡೆಯಾದ ರು. 7.79 ಕೋಟಿ ಪೈಕಿ ರು. 6.02 ಕೋಟಿ ಖರ್ಚಾಗಿದೆ. ಬಾಕಿ ಹಣದಲ್ಲಿ ರು. 35 ಕೋಟಿಯನ್ನು ಹುಬ್ಬಳ್ಳಿ ವಿಮಾನ ನಿಲ್ದಾಣ ಮೂಲಸೌಕರ್ಯಕ್ಕೆ ಬಳಸಲಾಗುತ್ತಿದೆ. ಸದ್ಯದಲ್ಲೇ ವರದಿ ಅನುಷ್ಠಾನದ ಸಿಂಹಾವಲೋಕನ ಮಾಡಲಾಗುತ್ತಿದೆ. ಆಗ ಕಂಡುಬರುವ ಲೋಪ ತಿದ್ದಿಕೊಳ್ಳಲು ಅವಕಾಶ ಸಿಗಲಿದೆ. ಈ ಕುರಿತು ಹಣಕಾಸು ಇಲಾಖೆಗೆ ಸೂಚನೆ ಸಲ್ಲಿಸಲಾಗಿದೆ. ಮೂರು ತಿಂಗಳಲ್ಲಿ ಸಮಗ್ರ ಅಭಿವೃದ್ಧಿ ಕುರಿತು ಪೂರ್ಣ ವಿವರ ದೊರೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಸಮೀರ ಶುಕ್ಲಾ, ಜಿಪಂ ಸಿಇಓ ಪಿ.ಎ. ಮೇಘಣ್ಣವರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments