ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಎಲ್ಲ ವಾರ್ಡ್‌ಗಳಿಗೂ ನಿರಂತರ ಕುಡಿವ ನೀರು

Parashurama
Updated On : 11 Feb 2013, 12:18 pm

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 10
ಹುಬ್ಬಳ್ಳಿ-ಧಾರವಾಡ ಮಹಾನಗರದ 15 ವಾರ್ಡ್‌ಗಳಿಗೆ ನಿರಂತರ ನೀರು ಪೂರೈಕೆ ಯೋಜನೆಗೆ ಚಾಲನೆ ನೀಡಿದ ಸಿಎಂ ಜಗದೀಶ ಶೆಟ್ಟರ್, ಉಳಿದ ವಾರ್ಡ್‌ಗಳಿಗೂ ಆದಷ್ಟು ಶೀಫ್ರದಲ್ಲೇ ಈ ಯೋಜನೆ ವಿಸ್ತರಣೆಗೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆವರಣದಲ್ಲಿ ಭಾನುವಾರ ಸಂಜೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನೂತನ ಚಿಟಗುಪ್ಪಿ ಆಸ್ಪತ್ರೆ, ಸಮುದಾಯ ರೈತ ಭವನ ಹಾಗೂ ಹು-ಧಾ ವಿಭಾಗದ 24/7 ನಿರಂತರ ನೀರು ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಅವಳಿನಗರದ ಒಟ್ಟು 67 ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ 8 ವಾರ್ಡ್‌ಗಳಲ್ಲಿ ಅನುಷ್ಠಾನಕ್ಕೆ ತರಲಾಗಿದ್ದ ನಿರಂತರ ನೀರು ಯೋಜನೆ ಅತ್ಯಂತ ಯಶಸ್ವಿಯಾಗಿದ್ದರಿಂದ ಇದೀಗ ಮತ್ತೆ 15 ವಾರ್ಡ್‌ಗಳಿಗೆ ಈ ಯೋಜನೆಯ ಅನುಷ್ಠಾನಗೊಳಿಸಲು ಪ್ರಥಮ ಹಂತ ಭಾಗ-1ರಲ್ಲಿ ರು. 42.50 ಕೋಟಿ ಹಾಗೂ ಪ್ರಥಮ ಹಂತ ಭಾಗ-2ರಲ್ಲಿ ರು. 71 ಕೋಟಿ ಹೀಗೆ ಒಟ್ಟು ರು. 113.50 ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು. ಉಳಿದ ವಾರ್ಡ್‌ಗಳಿಗೂ ಈ ಯೋಜನೆ ವಿಸ್ತರಿಸಲು 2ನೇ ಹಂತದಲ್ಲಿ ರು. 152.20 ಕೋಟಿ, 3ನೇ ಹಂತದಲ್ಲಿ ರು. 153 ಕೋಟಿ, 4ನೇ ಹಂತದಲ್ಲಿ ರು. 141 ಕೋಟಿ ಹಾಗೂ 5ನೇ ಹಂತದಲ್ಲಿ 135 ಕೋಟಿಗಳನ್ನು ಹಂತ-ಹಂತವಾಗಿ ಸರ್ಕಾರದಿಂದ ಅನುಮೋದನೆ ಪಡೆಯಲಾಗುವುದೆಂದರು.
ಟೀಕೆ ಎದುರಿಸಲು ಸಿದ್ಧ: ತಮ್ಮ ಚೊಚ್ಚಲ ಬಜೆಟ್‌ನಲ್ಲಿ ಧಾರವಾಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಬಜೆಟ್‌ನ್ನು ಕಾಯ್ದಿರಿಸಿದ್ದು, ಇದಕ್ಕಾಗಿ ಟೀಕೆ-ಟಿಪ್ಪಣಿಗಳು ಬಂದರೂ ಅದನ್ನು ಎದುರಿಸಲು ಸಿದ್ಧ ಎಂದು ಹೇಳುವ ಮೂಲಕ ಸಿಎಂ ಶೆಟ್ಟರ್ ತವರೂರಿನ ಪ್ರೇಮ ಮೆರೆದರು.
ಜನರ ಬಾಗಿಲಿಗೆ: ಅಧಿಕಾರ ವಿಕೇಂದ್ರೀಕರಣದಿಂದ ಮಾತ್ರ ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆ ತರಲು ಸಾಧ್ಯ. ಇದನ್ನು ಗಮನದಲ್ಲಿಟ್ಟುಕೊಂಡು ತಾವು ಬಜೆಟ್‌ನಲ್ಲಿ ಹೊಸ ತಾಲೂಕುಗಳ ರಚನೆಗೆ ಕ್ರಮಕೈಗೊಂಡಿದ್ದು, ಇದಕ್ಕೆ ರಾಜ್ಯಾದ್ಯಂತ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.  ಹುಬ್ಬಳ್ಳಿ ನಗರ, ಅಣ್ಣಿಗೇರಿ, ಅಳ್ನಾವರಗಳನ್ನು ಹೊಸ ತಾಲೂಕುಗಳನ್ನಾಗಿಸಬೇಕೆಂಬುದು ದಶಕಗಳ ಕನಸಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ದೃಢ ನಿರ್ಧಾರ ಕೈಗೊಂಡಿದ್ದೇವೆ ಎಂದು ಸಿಎಂ ಶೆಟ್ಟರ್ ಹೆಮ್ಮೆಯಿಂದ ನುಡಿದರು.
ಚರ್ಚಿಸಿ ಕ್ರಮ: ಮಹಾನಗರದ ಜನಸಂಖ್ಯೆ ಹೆಚ್ಚುತ್ತ ಸಾಗಿದೆ. ಇಂತಹ ಸಂದರ್ಭದಲ್ಲಿ ಒಬ್ಬರೇ ತಹಸೀಲ್ದಾರರಿಂದ ಎಲ್ಲ ಕೆಲಸ ಕಾರ್ಯಗಳನ್ನು ನಿಭಾಯಿಸುವುದು ಅಸಾಧ್ಯ. ಆದ್ದರಿಂದ ನಗರ ಹಾಗೂ ಗ್ರಾಮೀಣ ಪ್ರದೇಶಕ್ಕೆ ಪ್ರತ್ಯೇಕ ತಹಸೀಲ್ದಾರ್ ಕಚೇರಿಗಳನ್ನು ಆರಂಭಿಸಲಾಗುವುದೆಂದರು. ನಗರ ಹಾಗೂ ಗ್ರಾಮೀಣ ಪ್ರದೇಶಕ್ಕೆ ಸಂಬಂಧಿಸಿದಂತೆ ವ್ಯಾಪ್ತಿ ಗುರುತಿಸುವುದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದೆಂದೂ ಶೆಟ್ಟರ್ ಹೇಳಿದರು.
ಒಳ ರಸ್ತೆಗಳ ಅಭಿವೃದ್ಧಿ: ನಾಲ್ಕೂವರೆ ವರ್ಷದಲ್ಲಿ ಬಿಜೆಪಿ ಸರ್ಕಾರ ಮಹಾನಗರ ಪಾಲಿಕೆಗೆ ಎರಡು ಹಂತದಲ್ಲಿ ತಲಾ ರು. 100 ಕೋಟಿ ವಿಶೇಷ ಅನುದಾನ ನೀಡಿದ್ದರ ಫಲವಾಗಿ ಅವಳಿನಗರದಲ್ಲಿ ಅನೇಕ ರೀತಿಯ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಅನೇಕ ಬಡಾವಣೆಗಳಲ್ಲಿನ ಒಳರಸ್ತೆಗಳನ್ನು ನಿರ್ಲಕ್ಷಿಸಲಾಗಿದೆ ಎಂಬ ಕೂಗು ವ್ಯಾಪಕವಾಗಿ ಕೇಳಿ ಬಂದಿದ್ದರ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ನಂತರ ಪ್ರತ್ಯೇಕ ರು. 26 ಕೋಟಿ ವಿಶೇಷ ಅನುದಾನ ಬಿಡುಗಡೆಗೊಳಿಸಿದ್ದೇವೆ ಎಂದರು.
ಮಾದರಿ ನಗರ: ನೀರಸಾಗರ ಬಳಿ ನೂರಾರು ಎಕರೆ ಜಾಗೆ ಇದ್ದು, ಅಲ್ಲಿ ಬೃಂದಾವನ ಮಾದರಿಯಲ್ಲಿ ಪಾರ್ಕ್ ನಿರ್ಮಿಸುವುದಕ್ಕೆ ಬಜೆಟ್‌ನಲ್ಲಿ ಹಣ ಕಾಯ್ದಿರಿಸಲಾಗಿದೆ. ಬುಡನ್ನಾಳದಲ್ಲಿ ಪರಿಸರ ಉದ್ಯಾನ ಸಂಶೋಧನಾ ಸಂಸ್ಥೆ, ಹುಬ್ಬಳ್ಳಿ-ಧಾರವಾಡ ಮಧ್ಯದಲ್ಲಿ 50 ಎಕರೆ ಜಾಗೆಯಲ್ಲಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಅಂಚಟಗೇರಿಯಲ್ಲಿ ಟ್ರಕ್ ಟರ್ಮಿನಲ್, ಸೌರನಗರ ಸ್ಥಾಪನೆಗೆ ಬಜೆಟ್‌ನಲ್ಲಿ ಆದ್ಯತೆ ನೀಡುವ ಮೂಲಕ ಅವಳಿನಗರವನ್ನು ಮಾದರಿಯಾಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿರುವುದಾಗಿಯೂ ಸಿಎಂ ಶೆಟ್ಟರ್ ಹೇಳಿಕೊಂಡರು.
ಹೈಸ್ಪೀಡ್ ರೈಲು: ಬೆಂಗಳೂರು-ಹುಬ್ಬಳ್ಳಿ-ಬೆಳಗಾವಿಗೆ ಹೈಸ್ಪೀಡ್ ರೈಲು ಸೇವೆ ಆರಂಭಿಸುವುದಕ್ಕೆ ಸಂಬಂಧಿಸಿದಂತೆ ಬಜೆಟ್‌ನಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಕುರಿತಂತೆ ಸರ್ವೇ ಕಾರ್ಯ ನಡೆದಿದೆ. ಮೈಸೂರು ಸೇರಿದಂತೆ ರಾಜ್ಯದ ಇನ್ನೂ 3 ಕಡೆಗಳಲ್ಲಿಯೂ ಇಂತಹ ರೈಲು ಸೇವೆ ಆವಶ್ಯಕವಾಗಿದೆ ಎಂದರು. ಶಾಸಕ ವೀರಭದ್ರಪ್ಪ ಹಾಲಹರವಿ, ಮಹಾನಗರದ ಕೊಳಚೆ ಪ್ರದೇಶಗಳಲ್ಲಿ ವಾಸವಾಗಿರುವವರು ಆರೋಗ್ಯಕರ ಬದುಕು ಸಾಗಿಸುವಂತಾಗಲು ನೇಕಾರನಗರ ಹಾಗೂ ಸೋನಿಯಾ ಗಾಂಧಿ ನಗರಗಳಲ್ಲಿ ನಗರ ಆರೋಗ್ಯ ಕೇಂದ್ರಗಳನ್ನು ಆರಂಭಿಸುವಂತೆ ಆಗ್ರಹಿಸಿದರು. ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ರು. 7.11 ಕೋಟಿ ವೆಚ್ಚದಲ್ಲಿ ಒಟ್ಟು 121 ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಅಲ್ಲದೇ, ರು. 25.45 ಕೋಟಿ ಹೆಚ್ಚುವರಿ ಅನುದಾನವೂ ಈ ಕ್ಷೇತ್ರಕ್ಕೆ ಬಿಡುಗಡೆ ಮಾಡಿದ ಕೀರ್ತಿಗೆ ಸಿಎಂ ಶೆಟ್ಟರ್ ಕಾರಣೀಭೂತರಾಗಿದ್ದಾರೆ ಎಂದರು.
ಮೇಯರ್ ಡಾ. ಪಾಂಡುರಂಗ ಪಾಟೀಲ, ದೇಶದಲ್ಲೇ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರಲಾಗಿರುವ ನಿರಂತರ ನೀರು ಯೋಜನೆ ಸರಬರಾಜು ವ್ಯವಸ್ಥೆಗೆ ರಾಜ್ಯ ಸರ್ಕಾರ ಮೂರುವರೆ ವರ್ಷದಲ್ಲಿ ರು. 337 ಕೋಟಿ ಅನುದಾನ ನೀಡಿದೆ ಎಂದರು.
ಅತ್ಯಂತ ಯಶಸ್ವಿಯಾಗಿರುವ ಈ ಯೋಜನೆ ಬಗ್ಗೆ ತಿಳಿಯಲು ದೇಶದ ಮೂಲೆಮೂಲೆಗಳಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಆಗಮಿಸಿ ವೀಕ್ಷಿಸಿದ್ದಾರೆ. ಅವಳಿನಗರದಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬರಲು ಸಿಎಂ ಶೆಟ್ಟರ್ ಅವರ ಕೊಡುಗೆ ಅಪಾರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಧಾರವಾಡ ಮಾಧವ ನಗರದ ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಿದರು. ಇದಕ್ಕೂ ಮೊದಲು ಸಿಎಂ ಶೆಟ್ಟರ್, ಪೂರ್ವ ಹಾಗೂ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ನಾಮಫಲಕವನ್ನು ಉದ್ಘಾಟಿಸಿದರು. ಪ್ರಾಸ್ತಾವಿಕ ಮಾತನಾಡಿದ ಮಾಜಿ ಮೇಯರ್ ವೀರಣ್ಣ ಸವಡಿ, ರು. 1.38 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಚಿಟಗುಪ್ಪಿ ಆಸ್ಪತ್ರೆ ಮಹಾನಗರದ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಲಿದೆ. ಒಟ್ಟು 40 ಬೆಡ್‌ಗಳ ಈ ಆಸ್ಪತ್ರೆಯಲ್ಲಿ 22 ವೈದ್ಯರ ಹುದ್ದೆಗಳು ಖಾಲಿಯಿದ್ದು, ತಕ್ಷಣಕ್ಕೆ 10-12 ವೈದ್ಯರನ್ನು ಸರ್ಕಾರ ನೇಮಕ ಮಾಡಬೇಕು ಎಂದು ಕೋರಿಕೊಂಡರು. ಸಂಸದ ಪ್ರಹ್ಲಾದ ಜೋಶಿ, ಶಾಸಕ ಚಂದ್ರಕಾಂತ ಬೆಲ್ಲದ, ಬಸವರಾಜ ಹೊರಟ್ಟಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಎಂ.ಎಸ್, ಕರಿಗೌಡರ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಷಣ್ಮುಖಪ್ಪ ಗುರಿಕಾರ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಮಹೇಶ ಟೆಂಗಿನಕಾಯಿ, ಉಪ ಮಹಾಪೌರ ಭಾರತಿ ಪಾಟೀಲ, ಪಾಲಿಕೆ ಸದಸ್ಯ ದಶರಥ ವಾಲಿ, ಸರೋಜಾ ಪಾಟೀಲ, ಶಿವಾನಂದ ಮುತ್ತಣ್ಣವರ, ರಾಮಪ್ಪ ಬಡಿಗೇರ, ಪಾಲಿಕೆ ಆಯುಕ್ತ ವೈ.ಎಸ್. ಪಾಟೀಲ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments