ಅಲ್ಪಸಂಖ್ಯಾತರಿಗೆ ಬಿಜೆಪಿ, ಕಾಂಗ್ರೆಸ್ ಮೋಸ
ಕನ್ನಡಪ್ರಭ ವಾರ್ತೆ, ಧಾರವಾಡ, ಫೆ. 13
ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಅನೇಕ ರೀತಿಯಲ್ಲಿ ಅಲ್ಪಸಂಖ್ಯಾತರಿಗೆ ಮೋಸ ಮಾಡಿದ್ದು, ಬರುವ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿಸಿ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಇಲ್ಲಿ ಹೇಳಿದರು.
ಕಾಂಗ್ರೆಸ್ ಪ್ರತಿಯೊಂದಕ್ಕೂ ಹೈಕಮಾಂಡ್ ಕೇಳಿಯೇ ನಿರ್ಧಾರ ಕೈಗೊಳ್ಳುತ್ತದೆ. ಬಿಜೆಪಿ ಸರ್ಕಾರ ಆಂತರಿಕ ಕಚ್ಚಾಟದಿಂದ ಮೂರು ಭಾಗಗಳಾಗಿದ್ದು, ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುವ ಸ್ಥಿತಿಯಲ್ಲಿಲ್ಲ. ಅಲ್ಲದೇ, ಕೇವಲ ಅಧಿಕಾರಕ್ಕಾಗಿ ಹಪಹಪಿಸುತ್ತಿದೆ. ಈ ಸ್ಥಿತಿಯಲ್ಲಿ ಮುಂಬರುವ ಚುನಾವಣೆಯಲ್ಲಿ ಮತದಾರರಿಗೆ ಜೆಡಿಎಸ್ ಅನಿವಾರ್ಯವಾಗಿದ್ದು, ಎಲ್ಲ ಸಮುದಾಯದ ಜನರೊಂದಿಗೆ ಬೆರತು ಪಕ್ಷ ಕಾರ್ಯ ಮಾಡಲಿದೆ ಎಂದರು.
ಇಲ್ಲಿನ ಕಡಪಾ ಮೈದಾನದಲ್ಲಿ ಬುಧವಾರ ಸಂಜೆ ಜೆಡಿಎಸ್ ಏರ್ಪಡಿಸಿದ್ದ ಧಾರವಾಡ-71 ಮತ್ತು ಧಾರವಾಡ-74 ವಿಧಾನಸಭಾ ಕ್ಷೇತ್ರದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದ ಬಿಜೆಪಿ ಮತ್ತು ಕಾಂಗ್ರೆಸ್ ಜನರಿಗೆ ಸುಳ್ಳು ಭರವಸೆಗಳನ್ನು ನೀಡುವ ಮೂಲಕ ವಂಚಿಸಿವೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದಾಗ ಎಚ್.ಡಿ. ಕುಮಾರಸ್ವಾಮಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ರು. 120 ಕೋಟಿ ಅನುದಾನ ಒದಗಿಸಿದ್ದರು. ಆ ಪೈಕಿ ಶೇ. 80ರಷ್ಟು ಹಣವನ್ನು ಕೂಡಲೇ ಬಿಡುಗಡೆ ಮಾಡಿದ್ದರು. ಆದರೆ ರಾಜ್ಯ ಬಿಜೆಪಿ ಸರ್ಕಾರ ರು. 300 ಕೋಟಿ ಅನುದಾನ ಒದಗಿಸಿದೆ ಎಂದು ಹೇಳಿಕೊಳ್ಳುತ್ತಿದೆ. ಇದುವರೆಗೆ ಬಿಡುಗಡೆಯಾದ ಹಣ ಕೇವಲ ಶೇ. 16ರಷ್ಟು ಎಂದು ಆರೋಪಿಸಿದರು.
ಅಲ್ಪಸಂಖ್ಯಾತ ಮಹಿಳೆಯರ ಅಭಿವೃದ್ಧಿಗಾಗಿ ಶ್ರಮ ಶಕ್ತಿ ಯೋಜನೆ, ಸಣ್ಣ ಪುಟ್ಟ ವ್ಯಾಪಾರಸ್ಥರ ಅಭಿವೃದ್ಧಿಗಾಗಿ ಕಿರುಸಾಲ ಯೋಜನೆಗಳಂಥ ಜನಪರ ಯೋಜನೆಗಳನ್ನು ಜೆಡಿಎಸ್ ರೂಪಿಸಿತ್ತು. ಶಿಕ್ಷಣ ವಂಚಿತರಾಗಿದ್ದವರಿಗೆ ವಿವಿಧ ಯೋಜನೆಗಳ ಮೂಲಕ ಅನುಕೂಲ ಕಲ್ಪಿಸಲಾಗಿತ್ತು. ರೈತರ ಸಾಲ ಮನ್ನಾ ಕುಮಾರಸ್ವಾಮಿ ಕನಸಿನ ಕೂಸು. ಆದರೆ, ಈ ಎಲ್ಲ ಯೋಜನೆಗಳನ್ನು ಬಿಜೆಪಿ ತನ್ನದೆಂದು ಹೇಳಿಕೊಳ್ಳುತ್ತಿರುವ ಮೂರ್ಖತನವಲ್ಲವೇ ಎಂದರು.
ಜಿಲ್ಲಾ ಮಟ್ಟದಲ್ಲಿ ಶಾದಿ ಮಹಲ್ ನಿರ್ಮಾಣಕ್ಕೆ ಜೆಡಿಎಸ್ ಹೆಚ್ಚು ಒತ್ತು ನೀಡುವ ಮೂಲಕ ಅನುದಾನ ನೀಡಿತ್ತು. ಶಾದಿ ಮಹಲ್ ನಿರ್ಮಾಣಕ್ಕೆ ಜಿಲ್ಲಾ ಮಟ್ಟದಲ್ಲಿ ರು. 50 ಲಕ್ಷ ಮತ್ತು ತಾಲೂಕು ಮಟ್ಟದಲ್ಲಿ ರು. 25 ಲಕ್ಷ ನೀಡಿದ ಮೊದಲ ಸರ್ಕಾರ ಕುಮಾರಸ್ವಾಮಿ ನೇತೃತ್ವದ ಸರ್ಕಾರ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಬಿಜೆಪಿ ರೈತರಿಗೆ 24 ತಾಸು ವಿದ್ಯುತ್ ಪೂರೈಸುವುದಾಗಿ ಮತ್ತು ಪಂಪಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಿತ್ತು. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಇಂದು ಕೇವಲ ಹಗಲು ನಾಲ್ಕು ಗಂಟೆ, ರಾತ್ರಿ ಮೂರು ಗಂಟೆ ಮಾತ್ರ ವಿದ್ಯುತ್ ಪೂರೈಸುತ್ತಿದೆ. ಇದರಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಜೆಡಿಎಸ್ ಅಧಿಕಾರದಲ್ಲಿದ್ದಾಗ ದಿನಕ್ಕೆ 18 ಗಂಟೆ ವಿದ್ಯುತ್ ಪೂರೈಸುತ್ತಿತ್ತು ಎಂದು ಅನ್ಸಾರಿ ಪ್ರತಿಪಾದಿಸಿದರು.
ಶಾಸಕ ಜಮೀರ್ ಅಹ್ಮದ್, ಮಾಜಿ ಸಚಿವ ಆಲ್ಕೋಡ ಹನುಮಂತಪ್ಪ, ಮುಖಂಡರಾದ ಅಬ್ದುಲ್ ಅಜೀಮ, ಎನ್.ಎಚ್. ಕೋನರೆಡ್ಡಿ, ಇಸ್ಮಾಯಿಲ್ ತಮಾಟಗಾರ, ಅಮೃತ ದೇಸಾಯಿ, ಸುರೇಶ ಹಿರೇಮಠ, ಪಾಲಿಕೆ ಸದಸ್ಯರಾದ ವಿಜಯಲಕ್ಷ್ಮೀ ಲೂತಿಮಠ, ಸರೋಜಾ ಪಾಟೀಲ, ತನ್ವೀರ್ ಅಹ್ಮದಸಾಬ ಇದ್ದರು. ಧಾರವಾಡ ಶಹರ, ಧಾರವಾಡ ಗ್ರಾಮೀಣ ಪ್ರದೇಶದಿಂದ ನೂರಾರು ಅಲ್ಪಸಂಖ್ಯಾತರು ಆಗಮಿಸಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.