ನಾಳೆಯಿಂದ 3 ನಗೆ ನಾಟಕ ಪ್ರದರ್ಶನ: ಸರದೇಶಪಾಂಡೆ
ಧಾರವಾಡ: ಇಲ್ಲಿನ ರಂಗಾಯಣದ ಬಳಿಯ ಡಾ. ಬಸವರಾಜ ರಾಜಗುರು ಬಯಲು ರಂಗ ಮಂದಿರದಲ್ಲಿ ಫೆ.15ರಿಂದ 17ರವರೆಗೆ ಉತ್ತರ ಕರ್ನಾಟಕ ಎಂಬ ಹೆಸರಿನ ಮೂರು ನಗೆ ನಾಟಕ ಪ್ರದರ್ಶನ ಹಾಗೂ ಹಿರಿಯ ರಂಗ ಕರ್ಮಿಗಳಿಗೆ ಸನ್ಮಾನ ಸಮಾರಂಭ ನಡೆಯಲಿದೆ.
ಹುಬ್ಬಳ್ಳಿಯ ಗುರು ಇನ್ಸ್ಟಿಟ್ಯೂಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಜಂಟಿಯಾಗಿ ಈ ಸಮಾರಂಭ ಹಮ್ಮಿಕೊಂಡಿದ್ದು ಬುಧವಾರ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಗುರು ಸಂಸ್ಥೆ ಮುಖ್ಯಸ್ಥ, ರಂಗ ನಿರ್ದೇಶಕ ಯಶವಂತ ಸರದೇಶಪಾಂಡೆ ಮಾಹಿತಿ ನೀಡಿದರು. ಮೂರು ನಾಟಕಗಳು ಪ್ರತಿ ದಿನ ಸಂಜೆ 6.30ಕ್ಕೆ ಪ್ರದರ್ಶನಗೊಳ್ಳಲಿದ್ದು, ಪ್ರವೇಶ ಉಚಿತವಾಗಿದೆ ಹಾಗೂ 6 ಜನ ರಂಗ ಕರ್ಮಿಗಳಿಗೆ ಸನ್ಮಾನ ಮಾಡಲಾಗುವುದು. ಫೆ.15ರಂದು ಉಮೇಶ ತೇಲಿ ರಚನೆ ಹಾಗೂ ನಿರ್ದೇಶನದ 'ಹುಚ್ಚರ ಸಂತೆ' ನಾಟಕ ಪ್ರದರ್ಶನವಾಗಲಿದ್ದು, ಹಿರಿಯ ರಂಗ ಕರ್ಮಿಗಳಾದ ವಿಜಯಾ ಉರಾಳ ಹಾಗೂ ಬಸವರಾಜ ಬೆಂಗೇರಿ ಅವರನ್ನು ಸನ್ಮಾನಿಸಲಾಗುವುದು.
ಫೆ.16ರಂದು ಮಲ್ಲಿಕಾರ್ಜುನ ಎಂ. ರಚಿಸಿದ, ಚಿದಾನಂದ ಕುಲಕರ್ಣಿ ನಿರ್ದೇಶನದ ಅಸಲಿ ನಕಲಿ ನಾಟಕ ಪ್ರದರ್ಶನಗೊಳ್ಳಲಿದೆ. ಮಹಾನಂದಾ ಹುಲ್ಲೂರು ಹಾಗೂ ಧನಂಜಯ ಕುಲಕರ್ಣಿ ಅವರನ್ನು ಸನ್ಮಾನಿಸಲಾಗುವುದು. ಫೆ. 17ರಂದು ನನ್ನದೇ (ಯಶವಂತ ಸರದೇಶಪಾಂಡೆ) ನಿರ್ದೇಶನದ ಆಲ್ ದಿ ಬೆಸ್ಟ್ ನಾಟಕ ಪ್ರದರ್ಶನಗೊಳ್ಳಲಿದ್ದು, ಅರವಿಂದ ಕುಲಕರ್ಣಿ ಹಾಗೂ ಪ್ರಮೋದ ಶಿಗ್ಗಾಂವಿ ಅವರನ್ನು ಸನ್ಮಾನಿಸಲಾಗುವುದು ಎಂದರು.