ಕದ್ದು ಮುಚ್ಚಿ ವ್ಯಾಲೆಂಟೈನ್ಸ್ ಡೇ
ಧಾರವಾಡ: ಪ್ರೀತಿ ಮಾಡಬಾರದು, ಮಾಡಿದರೆ ಜಗಕ್ಕೆ ಹೆದರಬಾರದು ಎಂಬ ಹಾಡಿಗೆ ಇಲ್ಲಿದೆ ನೋಡಿ ಈ ವರ್ಷದ ವ್ಯಾಲೆಂಟೈನ್ಸ್ ಡೇ ಉತ್ತರ...
ಹಿಂದೂ ಪರ ಸಂಘಟನೆಗಳ ಭಯಕ್ಕಂಜಿದ ಯುವ ಪ್ರೇಮಿಗಳು ಅಂತು ಇಂತೂ ಕದ್ದು ಮುಚ್ಚಿ ವ್ಯಾಲೆಂಟೈನ್ ಡೇ ಆಚರಣೆ ಮಾಡಿ ಪ್ರೇಮ ನಿವೇದನೆ ಮಾಡಿಕೊಂಡರು.
ಫೆ. 14 ಪ್ರೇಮಿಗಳಿಗೆ ಎಲ್ಲಿಲ್ಲದ ಹಿಗ್ಗು. ಪ್ರತಿ ವರ್ಷದಂತೆ ಈ ವರ್ಷವೂ ಹಿಂದೂ ಸಂಘಟನೆಗಳು ಎಲ್ಲಿ ನಮ್ಮ ಪ್ರೇಮ ನಿವೇದನೆಗೆ ಅಡ್ಡಿಪಡಿಸುತ್ತವೆ ಎಂಬ ಕನವರಿಕೆ ಪ್ರೇಮಿಗಳದ್ದಾಗಿತ್ತು. ಹೀಗಾಗಿ ನಗರ ಪ್ರದೇಶದಲ್ಲಿರುವ ಹೋಟೆಲ್, ಚಿತ್ರಮಂದಿರ, ಉದ್ಯಾನವನ, ಉಡುಗೊರೆಯ ಅಂಗಡಿಗಳಲ್ಲಿ ಈ ಬಾರಿ ಹೇಳಿಕೊಳ್ಳುವಷ್ಟು ಪ್ರೇಮಿಗಳು ಕಾಣ ಸಿಗಲಿಲ್ಲ. ನಗರ ಪ್ರದೇಶದಿಂದ ಕಾಲ್ಕಿತ್ತ ಯುವ ಪ್ರೇಮಿಗಳು ಪ್ರೇಮ ನಿವೇದನೆ ಮಾಡಿಕೊಂಡಿದ್ದು ಹೆಚ್ಚಾಗಿ ಗ್ರಾಮೀಣ ಪ್ರದೇಶದ ವಾತಾವರಣದಲ್ಲಿ. ಪ್ರೇಮಿಗಳು ಖುಷಿಯಿಂದ ನಗರದ ಮಧ್ಯೆ ತಮ್ಮ ದಿನ ಸಂಭ್ರಮಿಸಬೇಕೆಂದರೆ, ಈ ದಿನ ಪಾಶ್ಚಿಮಾತ್ಯ ಸಂಸ್ಕೃತಿ ಬಂದಿದ್ದೆಂದು ಪ್ರೇಮಿಗಳ ಉತ್ಸಾಹ ಹತ್ತಿಕ್ಕಿದಂತಾಗಿದೆ. ಹೀಗಾಗಿ ಯುವ ಪ್ರೇಮಿಗಳು ತಂಡೋಪ ತಂಡವಾಗಿ ಗ್ರಾಮೀಣ ಪ್ರದೇಶಗಳತ್ತ ಹೆಜ್ಜೆ ಹಾಕಿದ್ದು, ಹಿಂದೂ ಸಂಘಟನೆಯ ಕಣ್ಣತಪ್ಪಿಸಲು ಎಂಬುದಂತು ಸತ್ಯ.
ಗ್ರಾಮೀಣ ಪ್ರದೇಶದಲ್ಲಿ ಪ್ರೇಮಿಗಳ ದಿನಾಚಾರಣೆ ಮಾತ್ರ ಸದ್ದು ಗದ್ದಲವಿಲ್ಲದೇ ವಿಜೃಂಭಣೆಯಿಂದ ಆಚರಣೆಯಾಗಿದೆ. ಸುತ್ತಮುತ್ತಲಿನ ಹಳ್ಳಿ ಗೆಳೆಯರ ಸಹಕಾರದೊಂದಿಗೆ ಗೆಳೆಯರ ತೋಟದ ಮನೆಗಳಲ್ಲಿ ಪ್ರೇಮಿಗಳ ದಿನ ಆಚರಣೆಯಾಗಿದ್ದು, ಈ ಬಾರಿಯ ವ್ಯಾಲೆಂಟೈನ್ಸ್ ಡೇ ವಿಶೇಷ. ಮಾರುಕಟ್ಟೆಯಲ್ಲಿ ಮೇಲ್ನೋಟಕ್ಕೆ ಪ್ರೇಮಿಗಳ ದಿನ ಗರಿಗೆದರಿಕೊಂಡಿಲ್ಲ ಎನ್ನುವ ಹಾಗೆ ಕಂಡರೂ ಫೆ. 14ರ ಮುನ್ನಾ ದಿನ ಬುಧವಾರ ಹೆಚ್ಚು ಪ್ರೇಮಿಗಳು ಖರೀದಿಗೆ ಬಂದಿದ್ದರು. ಗುಲಾಬಿ ಹೂ ಮಾರಾಟಗಾರರಿಗೆ ಒಂದು ರೀತಿಯ ಹಬ್ಬದ ವಾತಾವರಣವನ್ನೆ ನಿರ್ಮಿಸಿತ್ತು.
ಕಾಲೇಜು ಕ್ಯಾಂಪಸ್ ಕಲರ್ಪುಲ್ ಹಕ್ಕಿಗಳ ತರಹ ಕಾಣುತ್ತಿತ್ತು. ವ್ಯಾಲೆಂಟೈನ್ಸ್ ಡೇ ನಿಮಿತ್ತ ಹೆಚ್ಚು ವಿದ್ಯಾರ್ಥಿಗಳು ಬಣ್ಣ ಬಣ್ಣದ ಬಟ್ಟೆ ಧರಿಸಿ ಪ್ರೇಮಿಗಳ ದಿನಕ್ಕೆ ಮೆರಗು ತಂದಿದ್ದರು. ಅಲ್ಲದೇ, ಗುಲಾಬಿ ಬಟ್ಟೆ ತೊಟ್ಟರೆ, ತನ್ನ ಪ್ರೇಮದ ಕುರಿತು ಅಭಿವ್ಯಕ್ತಗೊಳಿಸಲಿದ್ದಾರೆ ಎಂದರ್ಥ. ಹೀಗೆ ಕೇಸರಿ-ಈಗಾಗಲೆ ಪ್ರೀತಿಯಲ್ಲಿ, ನೀಲಿ-ಪ್ರೀತಿಗಾಗಿ ಕಾಯುತ್ತಿರುವ, ಕಪ್ಪು-ಪ್ರೀತಿಯಲ್ಲಿ ಆಸಕ್ತಿ ಇಲ್ಲ, ಹಳದಿ-ಪ್ರೀತಿಯಿಂದ ವಂಚಿತ, ಹಸಿರು-ಪ್ರೀತಿಗೆ ಹಸಿರು ನಿಶಾನೆ, ಕೆಂಪು-ಈಗಾಗಲೇ ನೋಂದಣಿಯಾಗಿದೆ ಎಂಬರ್ಥದ ಮೊಬೈಲ್ ಸಂದೇಶಗಳು ವಿದ್ಯಾರ್ಥಿಗಳ ಮೊಬೈಲ್ನಿಂದ ಮೊಬೈಲ್ಗೆ ಹರಿದಾಡುತ್ತಿತ್ತು. ಅದೇ ಸಂದೇಶದಂತೆ ಕೆಲ ವಿದ್ಯಾರ್ಥಿಗಳು ಡ್ರೆಸ್ ಸಹ ಮಾಡಿಕೊಂಡು ಬಂದಿದ್ದರು.
ಪ್ರೇಮಿಗಳ ದಿನ ಭಾರತೀಯ ಸಂಸ್ಕೃತಿಗೆ ಧಕ್ಕೆ ತರುವ ಒಂದು ಪಾಶ್ಚಿಮಾತ್ಯ ಸಂಸ್ಕೃತಿ ಅದನ್ನು ಪಾಲನೆ ಮಾಡಬಾರದೆಂಬ ಧ್ಯೇಯ ವ್ಯಾಖ್ಯೆಯೊಂದಿಗೆ ಹಿಂದೂ ಸಂಘಟನೆಗಳೂ ತಂಡೋಪ ತಂಡವಾಗಿ ನಗರ ಪ್ರದೇಶದ ಪ್ರೇಮಿಗಳು ಹುಡುಕಾಟದಲ್ಲಿ ಕಾಲ ಕಳೆದರು. ಆದರೂ ಪ್ರೇಮಿಗಳು ಸಂಘಟನೆಗಳ ಕಣ್ತಪ್ಪಿಸಿ ಪ್ರೇಮಿಗಳ ದಿನ ಕದ್ದು ಮುಚ್ಚಿ ಆಚರಿಸಿದರು.
- ಕಲ್ಮೇಶ ಪಟ್ಟಣದವರ