ಗೊಂದಲ ಮಧ್ಯೆ ಕವಿವಿ ಘಟಿಕೋತ್ಸವ
ಧಾರವಾಡ: ಕರ್ನಾಟಕ ವಿವಿಯ 63ನೇ ಘಟಿಕೋತ್ಸವದಲ್ಲಿ ಉಪರಾಷ್ಟ್ರಪತಿ ಕೈಯಿಂದ ಚಿನ್ನದ ಪದಕ ಹಾಗೂ ಪದವಿ ಪಡೆಯುವ ಆಸೆ ಹೊತ್ತ ಕೆಲ ವಿದ್ಯಾರ್ಥಿಗಳು ವಿಜೃಂಭಿಸುತ್ತಿದ್ದರೆ, ಇನ್ನು ಕೆಲ ವಿದ್ಯಾರ್ಥಿಗಳು ತಾವು ಪಡೆಯಬೇಕಿದ್ದ ಚಿನ್ನದ ಪದಕಗಳು ತಮ್ಮದಲ್ಲದ ತಪ್ಪಿಗೆ ಕೈ ತಪ್ಪಿದವೆಂದು ದುಃಖಿಸುತ್ತಿದ್ದಾರೆ.
ಘಟಿಕೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದರೆ, ವಿಶ್ವವಿದ್ಯಾಲಯದ ನಿರ್ಲಕ್ಷ್ಯದಿಂದ ಅನೇಕ ವಿದ್ಯಾರ್ಥಿಗಳು ಘಟಿಕೋತ್ಸವದಲ್ಲಿ ಪದಕ ಹಾಗೂ ಪದವಿ ಪಡೆಯುವುದರಿಂದ ವಂಚಿತರಾಗಿದ್ದಾರೆ. ವಿಶ್ವವಿದ್ಯಾಲಯದ ಕನ್ನಡ, ಯೋಗ, ಬಸವ ವಿಭಾಗ, ಇನ್ನಿತರ ವಿಭಾಗಗಳಲ್ಲಿ ಮೊದಲ ಬಾರಿಗೆ ನಡೆಸಿದ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳು ಬಂಗಾರದ ಪದಕ ಪಡೆಯುವ ಆಸೆ ಹೊತ್ತಿದ್ದರು. ಆದರೆ, ಇವರಿಗಿಂತ ತುಸು ಕಡಿಮೆ ಅಂಕ ಪಡೆದ ಕೆಲ ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿದಾಗ ಹೆಚ್ಚು ಅಂಕ ಪಡೆದು ಪ್ರಸ್ತುತ ಅವರೀಗ ಪದವಿ ಚಿನ್ನದ ಹುಡುಗರಾಗಲು ಸಿದ್ಧರಾಗಿದ್ದಾರೆ. ಅಲ್ಲದೇ ಮೊದಲು ಪ್ರಥಮ ಬಂದ ವಿದ್ಯಾರ್ಥಿಗಳಿಗೆ ವಿವಿಯು ಚಿನ್ನ ಪಡೆಯುವಂತೆ ಪತ್ರವನ್ನೂ ಕಳಿಸಿ, ಅವರಿಗಿಂತ ಕಡಿಮೆ ಅಂಕ ಪಡೆದವರಿಗೆ ಮತ್ತೆ ಮರುಮೌಲ್ಯಮಾಪನಕ್ಕೆ ಅವಕಾಶ ಕಲ್ಪಿಸಿರುವುದು ಮಾತ್ರ ಹಲವಾರು ವಿದ್ಯಾರ್ಥಿಗಳಲ್ಲಿ ತೀವ್ರ ಬೇಸರ ಮೂಡಿಸಿದೆ.
ವಿದ್ಯಾರ್ಥಿಗಳಲ್ಲಿ ಬೇಸರ: ಕನ್ನಡ ವಿಭಾಗದ ಜಗದೀಶ ಮುಗಳಿ ಎಂಬ ವಿದ್ಯಾರ್ಥಿ ಒಟ್ಟು 1,585 ಅಂಕಗಳನ್ನು ಪಡೆಯುವ ಮೂಲಕ ವಿಭಾಗಕ್ಕೆ ಪ್ರಥಮ ಸ್ಥಾನ ಪಡೆದು ಚಿನ್ನದ ಹುಡುಗನಾಗಿದ್ದ. ಆದರೆ, ಇದನ್ನು ಪ್ರಶ್ನಿಸಿ ಬಸವ್ವ ಹಮ್ಮಿಣಿ ಎಂಬ ವಿದ್ಯಾರ್ಥಿನಿ ಷರತ್ತಿನ ಮೌಲ್ಯಮಾಪನಕ್ಕೆ ಮೊರೆ ಹೋಗಿದ್ದರು. ಇದನ್ನರಿತ ಜಗದೀಶ ಸಹ ಷರತ್ತು ಮೌಲ್ಯಮಾಪನಕ್ಕೆ ಅರ್ಜಿ ಹಾಕಿದಾಗ ಜಗದೀಶನಿಗೆ ಮೂರು ಅಂಕ ಹಾಗೂ ಬಸವ್ವಳಿಗೆ 15 ಅಂಕ ಹೆಚ್ಚಿಸಲಾಗಿದೆ. ಸದ್ಯ ಬಸವ್ವ ಚಿನ್ನದ ಪದಕಗಳನ್ನು ಪಡೆಯಲು ಸಿದ್ಧರಾಗಿದ್ದರೆ, ಜಗದೀಶ ಮಾತ್ರ ಅಸಮಾಧಾನ ವ್ಯಕ್ತಪಡಿಸಿ, ಫಲಿತಾಂಶ ತಡೆಹಿಡಿಯುವಂತೆ ಹಾಗೂ ಸರಿಯಾಗಿ ಪರಿಶೀಲಿಸುವಂತೆ ಮೌಲ್ಯಮಾಪನ ಕುಲಸಚಿವರನ್ನು ಆಗ್ರಹಿಸಿದ್ದಾರೆ.
ಅದೇ ರೀತಿ ಸ್ನಾತಕೋತ್ತರ ಯೋಗ ವಿಭಾಗದಲ್ಲಿ ಅನುರಾಧಾ ಸಿರಿಯಣ್ಣವರ ಪ್ರಥಮ ರ್ಯಾಂಕ್ ಪಡೆದಿದ್ದು, ವಿವಿಯಿಂದ ಪತ್ರವನ್ನೂ ರವಾನಿಸಲಾಗಿತ್ತು. ಆದರೆ, ಸಾವಿತ್ರಿ ರೋಣದ ಷರತ್ತು ಮೌಲ್ಯಮಾಪನ ಹಾಕಿದ ಹಿನ್ನೆಲೆಯಲ್ಲಿ ಸದ್ಯ ಚಿನ್ನದ ಪದಕ ನೀಡುವುದನ್ನು ತಡೆಹಿಡಿಯಲಾಗಿದ್ದು, ಇದರಿಂದ ಅನುರಾಧಾ ಚಿನ್ನದ ಪದಕ ಪಡೆಯುವುದರಿಂದ ಸದ್ಯಕ್ಕೆ ವಂಚಿತರಾಗಿದ್ದಾರೆ.
ಇದು ಒಂದು ರೀತಿ ವಿದ್ಯಾರ್ಥಿಗಳ ಗೋಳಾದರೆ, ಘಟಿಕೋತ್ಸವವನ್ನು ಕೇವಲ 90 ನಿಮಿಷಕ್ಕೆ ಸೀಮಿತಗೊಳಿಸಿದ್ದು, ಸಾಂಕೇತಿಕವಾಗಿ ಬಂಗಾರದ ಪದಕ, ಪದವಿ ಪ್ರದಾನ ಮಾಡುತ್ತಿರುವುದು ಇನ್ನೂ ಹಲವು ವಿದ್ಯಾರ್ಥಿಗಳಲ್ಲಿ ಬೇಸರ ಮೂಡಿಸಿದೆ.
ವಿದ್ಯಾರ್ಥಿನಿ ಅಳಲು: ಕಳೆದೆರಡು ಘಟಿಕೋತ್ಸವದಲ್ಲಿ ರಾಜ್ಯಪಾಲರು ಪಾಲ್ಗೊಂಡಿಲ್ಲ. ಈ ಬಾರಿ ರಾಜ್ಯಪಾಲರು, ಉಪರಾಷ್ಟ್ರಪತಿಗಳು ಪಾಲ್ಗೊಳ್ಳುತ್ತಿದ್ದಾರೆ. ನಮಗೂ ಮುಖ್ಯ ಸಮಾರಂಭದಲ್ಲಿ ಪದವಿ ಪಡೆಯುವ ಆಸೆ ಇತ್ತು. ಅಲ್ಲದೇ ಮುಖ್ಯ ಸಮಾರಂಭದಲ್ಲಿ ಪಾಲಕರಿಗೂ ಅವಕಾಶ ನೀಡಿಲ್ಲ. ಹಾಗಿದ್ದರೆ ಘಟಿಕೋತ್ಸವ ಮಾಡುವುದರಿಂದ ಏನು ಪ್ರಯೋಜನ ಎಂದು ಪಿಎಚ್ಡಿ ವಿದ್ಯಾರ್ಥಿನಿಯೊಬ್ಬರು ಕನ್ನಡಪ್ರಭದೊಂದಿಗೆ ಅಳಲು ತೋಡಿಕೊಂಡರು.
ಘಟಿಕೋತ್ಸವ ಪೂರ್ವ ನಡೆದ ಗೊಂದಲಗಳ ಹಿನ್ನೆಲೆಯಲ್ಲಿ ಎಬಿವಿಪಿ ಸಂಘಟನೆ ಹಲವು ವಿದ್ಯಾರ್ಥಿಗಳು ಗುರುವಾರ ವಿವಿ ಆವರಣದಲ್ಲಿ ಪ್ರತಿಭಟಿಸಿ, ಮಾಲ್ಯಮಾಪನ ಕುಲಸಚಿವರು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮನವಿ ಸಲ್ಲಿಸಿದ್ದಾರೆ. ಅನ್ಯಾಯವಾದ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸದೆ ಫಲಿತಾಂಶ ಪ್ರಕಟಿಸಿದರೆ ವೇದಿಕೆ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟನೆ ಪದಾಧಿಕಾರಿಗಳು ಎಚ್ಚರಿಸಿದ್ದಾರೆ.