ಧಾರವಾಡಕ್ಕಿಂದು ಉಪರಾಷ್ಟ್ರಪತಿ ಹೈ ಅಲರ್ಟ್
ಧಾರವಾಡ: ಶುಕ್ರವಾರ ನಡೆಯಲಿರುವ ಕರ್ನಾಟಕ ವಿವಿ 63ನೇ ಘಟಿಕೋತ್ಸವಕ್ಕೆ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ವಿವಿ ಆವರಣ ಸೇರಿದಂತೆ ಧಾರವಾಡ ನಗರದಲ್ಲೂ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಕರ್ನಾಟಕ ವಿವಿ ಆವರಣ ಪೂರ್ತಿಯಾಗಿ ಸ್ವಚ್ಛಗೊಳಿಸಿ, ಸಮಾರಂಭ ನಡೆಯುವ ಗಾಂಧಿಭವನ ಹಾಗೂ ಕವಿವಿಯ ಪ್ರತಿಷ್ಠಿತ ಮುಖ್ಯ ಕಟ್ಟಡಕ್ಕೆ ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಲಾಗಿದೆ. ಗಾಂಧಿ ಭವನದಲ್ಲಿ ಉಪರಾಷ್ಟ್ರಪತಿಗಳಿಗಾಗಿಯೇ ತಾತ್ಕಾಲಿಕ ಪ್ರತ್ಯೇಕ ಕೊಠಡಿ ಸಿದ್ಧಗೊಳಿಸಿದ್ದು, ಗುರುವಾರ ಸಂಜೆಯಿಂದಲೇ ಅಲ್ಲಿ ಹೈ ಅಲರ್ಟ್ ಜಾರಿ ಮಾಡಲಾಗಿದೆ. ಕರ್ನಾಟಕ ವಿವಿ ಹಾಗೂ ಜಿಲ್ಲಾಡಳಿತ ನೀಡಿದ ಪ್ರವೇಶ ಪತ್ರ ಹೊಂದಿದವರಿಗೆ ಮಾತ್ರ ಗಾಂಧಿ ಭವನದಲ್ಲಿ ಪ್ರವೇಶವಿದ್ದು, ಪ್ರತಿ ಸಾರಿ ನಡೆಯುವ ಘಟಿಕೋತ್ಸವದಂತೆ ಎಲ್ಲರಿಗೂ ಈ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ.
ಸಾವಿರಕ್ಕೂ ಹೆಚ್ಚು ಪೊಲೀಸ್: ಉಪರಾಷ್ಟ್ರಪತಿಗಳಿಗೆ ಸೂಕ್ತ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಹುಬ್ಬಳ್ಳಿ-ಧಾರವಾಡ ಹಾಗೂ ಹಾವೇರಿ, ಗದಗ, ಬೆಳಗಾವಿ ಜಿಲ್ಲೆಗಳಿಂದ ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, ಪಿಎಸೈ, ಸಿಪಿಐ ಹಾಗೂ ಹಿರಿಯ ಅಧಿಕಾರಿಗಳು ಆಗಮಿಸಿದ್ದಾರೆ.
ವಿಮಾನ ನಿಲ್ದಾಣದಿಂದ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರನ್ನು ಸಮಾರಂಭದ ಸ್ಥಳಕ್ಕೆ ಕರೆದು ತರಲು ಹಾಗೂ ಹೋಗಲು ಗುಂಡು ನಿರೋಧಕ ವಾಹನ ಬೆಂಗಳೂರಿನಿಂದ ಆಗಮಿಸಿದೆ.
ಘಟಿಕೋತ್ಸವ ನಡೆಯುವ ಸ್ಥಳವಾದ ಗಾಂಧಿ ಭವನವನ್ನು ಪೊಲೀಸ್ ಆಯುಕ್ತ ಬಿ.ಎ. ಪದ್ಮನಯನ ಹಾಗೂ ಡಿಸಿ ಸಮೀರ ಶುಕ್ಲಾ ಸೇರಿದಂತೆ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ವಿವಿಯ ಮುಖ್ಯ ವೃತ್ತದಲ್ಲಿ ಚಿನ್ನದ ಪದಕ ಪಡೆಯುವ ವಿದ್ಯಾರ್ಥಿಗಳಿಬ್ಬರ ಕಂಚಿನ ಪುತ್ಥಳಿ ಎಲ್ಲರನ್ನೂ ಆಕರ್ಷಿಸುತ್ತಿದೆ. ವಿವಿಯಲ್ಲಿ ಕೇವಲ ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ಹಾಗೂ ದ್ವಿಚಕ್ರ ವಾಹನಗಳಿಗೆ ಮಾತ್ರ ಅವಕಾಶವಿದ್ದು, ಕಾರು ಮತ್ತಿತರೆ ವಾಹನಗಳಿಗೆ ನಿಷೇಧ ಹೇರಲಾಗಿದೆ.
ಶುಕ್ರವಾರ ಬೆಳಿಗ್ಗೆ 9.35ಕ್ಕೆ ಬೆಂಗಳೂರಿನ ರಾಜಭವನದಿಂದ ಉಪರಾಷ್ಟ್ರಪತಿಗಳು ಹೊರಟು 9.55ಕ್ಕೆ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದು, ಅಲ್ಲಿಂದ 10ಕ್ಕೆ ವಿಶೇಷ ವಿಮಾನದ ಮೂಲಕ 11ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಾರೆ. 11.30ಕ್ಕೆ ಕರ್ನಾಟಕ ವಿವಿಯ ಗಾಂಧಿಭವನದಲ್ಲಿ 90 ನಿಮಿಷದ ಸಮಾರಂಭದ ನಂತರ 1.05ಕ್ಕೆ ವಿವಿಯ ಅತಿಥಿ ಗೃಹದಲ್ಲಿ ಊಟ ಮುಗಿಸಿ ನಂತರ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ 2.15ಕ್ಕೆ ಹೋಗುತ್ತಾರೆ. ಅಲ್ಲಿಂದ ಮತ್ತೆ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಾರೆಂದು ಪತ್ರಿಕೆಗೆ ಅಧಿಕೃತ ಮಾಹಿತಿ ದೊರೆತಿದೆ.