ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಮಂಕಾದ ಪ್ರೇಮಿಗಳ ದಿನಾಚರಣೆ

Parashurama
Updated On : 15 Feb 2013, 12:11 pm

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 14
ಹಿಂದುಪರ ಸಂಘಟನೆಗಳ ಬೆದರಿಕೆಯಿಂದಾಗಿ ನಗರದಲ್ಲಿ ಗುರುವಾರ ಪ್ರೇಮಿಗಳ ದಿನಾಚರಣೆ ಮಂಕಾಗಿತ್ತು.
ಆದರೆ ನಗರ ಪ್ರದೇಶದಿಂದ ದೂರವಿರುವ ಸ್ಥಳಗಳನ್ನು ಈ ಬಾರಿ ಪ್ರೇಮಿಗಳು ಆಯ್ಕೆ ಮಾಡಿಕೊಳ್ಳುವ ಮೂಲಕ ಹಿಂದುಪರ ಸಂಘಟನೆಗಳಿಗೆ ಚಳ್ಳೆಹಣ್ಣು ತಿನ್ನಿಸಿದರು.
ಪ್ರೇಮಿಗಳ ದಿನಾಚರಣೆ (ವ್ಯಾಲೆಂಟೈನ್ಸ್ ಡೇ) ಆಚರಿಸದಂತೆ ಪ್ರತಿವರ್ಷ ಹಿಂದುಪರ ಸಂಘಟನೆಗಳು ಕರೆ ನೀಡುತ್ತಿದ್ದರೂ ಉದ್ಯಾನವನಗಳಲ್ಲಿ ಜೋಡಿಗಳ ವಿಹಾರ ಸಾಮಾನ್ಯವಾಗಿತ್ತು. ಈ ಸಂದರ್ಭ ಜೋಡಿಗಳಿಗೆ ಮಸಿ ಬಳಿಯುವುದು, ಬೆದರಿಕೆ ಹಾಕುವುದು, ಅವರ ಪಾಲಕರಿಗೆ ಕರೆ ಮಾಡುವಂತಹ ಕಾರ್ಯಗಳು ಸಂಘಟನೆಗಳ ಕಾರ್ಯಕರ್ತರಿಂದ ನಡೆಯುತ್ತಿದ್ದವು.
ಹಿಂದುಪರ ಸಂಘಟನೆ ಕಾರ್ಯಕರ್ತರ ಕಾರ್ಯವೈಖರಿಯಿಂದ ಬೆದರಿರುವ ಪ್ರೇಮಿಗಳು ಈ ಬಾರಿಯ ಪ್ರೇಮಿಗಳ ದಿನಾಚರಣೆಯಂದು ನಗರದ ಉದ್ಯಾನವನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾಲಿಡಲೇ ಇಲ್ಲ. ಬದಲಾಗಿ ಜೋಡಿಗಳಿರುವ ಬೈಕ್‌ಗಳು ನಗರ ಪ್ರದೇಶದ ಹೊರಗಡೆ ಸಂಚರಿಸುತ್ತಿದ್ದ ಹಾಗೂ ಚಿತ್ರಮಂದಿರಗಳೆದುರು ಪಾರ್ಕ್ ಮಾಡಿರುವ ದೃಶ್ಯ ಕಂಡುಬಂದವು.
ಪ್ರೇಮಿಗಳ ದಿನ ಆಚರಿಸದಂತೆ ಹಿಂದುಪರ ಸಂಘಟನೆ ನೀಡಿದ್ದ ಬೆದರಿಕೆಯಿಂದಾಗಿ ಇಂದಿರಾ ಗಾಜಿನ ಮನೆ, ಉಣಕಲ್ ಉದ್ಯಾನವನ, ನೃಪತುಂಗಬೆಟ್ಟ, ಸಂಜೀವಿನಿ ಪಾರ್ಕ್ ಸೇರಿದಂತೆ ವಿವಿಧೆಡೆ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಪ್ರೇಮಿಗಳಿಗೆ ಕಿರುಕುಳ ನೀಡಿದರೆ ಕಾರ್ಯಕರ್ತರಿಗೆ ಬಿಸಿ ಮುಟ್ಟಿಸಲು ಪೊಲೀಸರೂ ಸಜ್ಜಾಗಿದ್ದರು. ಆದರೂ ಪ್ರೇಮಿಗಳು ಉದ್ಯಾನವನಗಳಿಗೆ ಕಾಲಿಡಲೇ ಇಲ್ಲ. ಉದ್ಯಾನವನಗಳಲ್ಲಿ ಕಾಣಿಸಿಕೊಂಡಿದ್ದ ಒಂದೆರೆಡು ಜೋಡಿಗಳು ಹಿಂದುಪರ ಸಂಘಟನೆಗಳ ಬೆದರಿಕೆಯಿಂದಾಗಿ ತರಾತುರಿಯಲ್ಲಿ ಜಾಗ ಖಾಲಿ ಮಾಡಿದವು. ನೃಪತುಂಗ ಬೆಟ್ಟ ಸೇರಿದಂತೆ ವಿವಿಧೆಡೆ ದಾಳಿ ನಡೆಸಿದ ಶ್ರೀರಾಮ ಸೇನೆ ಕಾರ್ಯಕರ್ತರು, ಬೆರಳೆಣಿಕೆಯಷ್ಟಿದ್ದ ಜೋಡಿಗಳನ್ನು ಮರಳಿ ಕಳಿಸಿದರು. ನೃಪತುಂಗ ಬೆಟ್ಟದಲ್ಲಿದ್ದ ಕಾಲೇಜೊಂದರ ಮೂರು ಜೋಡಿಗಳು ತಾವು ಪ್ರೇಮಿಗಳಲ್ಲ, ಸ್ನೇಹಿತರು ಎಂದು ಸಮಜಾಯಿಷಿ ನೀಡಲು ಯತ್ನಿಸಿದರು. ಆದರೆ, ಶ್ರೀರಾಮ ಸೇನೆ ಕಾರ್ಯಕರ್ತರು ಅವರ ಮಾತಿಗೆ ಮನ್ನಣೆ ನೀಡದೆ ತಕ್ಷಣ ಬೆಟ್ಟದಿಂದ ಜಾಗ ಖಾಲಿ ಮಾಡುವಂತೆ ತಾಕೀತು ಮಾಡಿದರು. ಬೆಟ್ಟಕ್ಕೆ ಶ್ರೀರಾಮ ಸೇನೆ ಕಾರ್ಯಕರ್ತರು ಕಾಲಿಡುತ್ತಿದ್ದಂತೆ ಜೋಡಿಯೊಂದು ಎತ್ತರದ ಪ್ರದೇಶದಿಂದ ಜಿಗಿದು ಪರಾರಿಯಾಯಿತೆಂದು ಸ್ಥಳದಲ್ಲಿದ್ದ ಪೊಲೀಸರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಇದಕ್ಕೂ ಮೊದಲು ನೃಪತುಂಗ ಬೆಟ್ಟದಲ್ಲಿದ್ದ ಜೋಡಿಯೊಂದನ್ನು ಶ್ರೀರಾಮ ಸೇನೆ ಕಾರ್ಯಕರ್ತರು ಅಶೋಕನಗರ ಪೊಲೀಸ್ ಠಾಣೆಯಲ್ಲಿ ಹಾಜರು ಪಡಿಸಿದರು. ವಿಚಾರಣೆ ವೇಳೆ ಯುವತಿ ಅಪ್ರಾಪ್ತೆಯೆಂದು ತಿಳಿದುಬಂದಿದ್ದರಿಂದ ಆಕೆಯನ್ನು ಪಾಲಕರ ವಶಕ್ಕೆ ಒಪ್ಪಿಸಲಾಯಿತು. ಆಕೆಯೊಂದಿಗೆ ಇದ್ದ ಅನ್ಯ ಕೋಮಿನ ಯುವಕನನ್ನು ವಿಚಾರಣೆಗೊಳಪಡಿಸಿದ ಪೊಲೀಸರು, ನಂತರ ಯುವಕನ ಪಾಲಕರನ್ನು ಠಾಣೆಗೆ ಕರೆಯಿಸಿದರು.
ಬುದ್ಧಿ ಹೇಳಿದ ಪೊಲೀಸರು: ಉದ್ಯಾನವನಗಳಿಗೆ ಆಗಮಿಸಿದ್ದ ಕೆಲ ಪ್ರೇಮಿಗಳಿಗೆ ಭದ್ರತಾ ಕರ್ತವ್ಯದಲ್ಲಿದ್ದ ಪೊಲೀಸರೇ ಮರಳಿ ಹೋಗುವಂತೆ ಮನವೊಲಿಸುತ್ತಿದ್ದ ದೃಶ್ಯ ಕಂಡುಬಂತು. ಮಾಧ್ಯಮ ಪ್ರತಿನಿಧಿಗಳು ಹಾಗೂ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಬರುವ ಮುನ್ನವೇ ಉದ್ಯಾನವನಗಳಿಂದ ಮರಳುವಂತೆ ಪೊಲೀಸರು ತಿಳಿವಳಿಕೆ ನೀಡುತ್ತಿದ್ದರು. ಪ್ರೇಮದ ಸಂದೇಶವುಳ್ಳ ಗ್ರೀಟಿಂಗ್ ಮಾರಾಟ ಮಾಡುವ ಅಂಗಡಿಗಳು ಸಹ ಗುರುವಾರ ಬಿಕೋ ಎನ್ನುತ್ತಿದ್ದವು. ಹಿಂದುಪರ ಸಂಘಟನೆಗಳ ಬೆದರಿಕೆಯಿಂದಾಗಿ ಹೆಚ್ಚಿನ ಯುವಕ-ಯುವತಿಯರು ಪ್ರೇಮಿಗಳ ದಿನಾಚರಣೆ ಮುನ್ನಾದಿನವಾದ ಬುಧವಾರವೇ ಗ್ರೀಟಿಂಗ್ಸ್ ಖರೀದಿಸಿದ್ದಾಗಿ ಹೆಸರು ಹೇಳಲಿಚ್ಛಿಸದ ವ್ಯಾಪಾರಿಯೊಬ್ಬರು ಪತ್ರಿಕೆಗೆ ತಿಳಿಸಿದರು.
ಪ್ರೇಮಿಗಳ ದಿನಾಚರಣೆ ಮುನ್ನಾ ದಿನವಾದ ಬುಧವಾರವೇ ಬಹುತೇಕ ಕಾಲೇಜುಗಳಲ್ಲಿ ಗ್ರೀಟಿಂಗ್‌ಗಳು ಹಸ್ತಾಂತರಗೊಂಡಿವೆಯಲ್ಲದೇ, ಕಾಲೇಜು ಅವಧಿ ಪೂರ್ಣಗೊಂಡ ನಂತರ ಯುವಕ-ಯುವತಿಯರು ಉದ್ಯಾನವನಗಳಿಗೆ ಕಾಲಿಟ್ಟು ಒಂದು ದಿನ ಮುಂಚೆಯೇ ಪ್ರೇಮಿಗಳ ದಿನ ಆಚರಿಸಿಕೊಂಡಿರುವುದು ಗುಟ್ಟಾಗಿ ಉಳಿದಿಲ್ಲ. ಇನ್ನೂ ಕೆಲವರು ಪ್ರೇಮಿಗಳ ದಿನಾಚರಣೆ ಮಾರನೇ ದಿನವಾದ ಶುಕ್ರವಾರ ಗ್ರೀಟಿಂಗ್ ಹಾಗೂ ಶುಭಾಶಯ ಹಸ್ತಾಂತರಿಸಿಕೊಳ್ಳಲಿದ್ದಾರೆ.
ಕಾಲೇಜು ಆವರಣಗಳಲ್ಲಿಯೂ ಜೋಡಿಗಳು ಕಾಣಿಸಿಕೊಂಡಿದ್ದು ತೀರಾ ವಿರಳ. ಬಹುತೇಕ ಪಾಲಕರು ಗುರುವಾರ ತಮ್ಮ ಮಕ್ಕಳನ್ನು ಕಾಲೇಜುಗಳಿಗೆ ಕಳುಹಿಸದೇ ಇರುವ ಮಾಹಿತಿಯೂ ಬೆಳಕಿಗೆ ಬಂದಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement