ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಮಠಗಳಿಗೆ ಅನಗತ್ಯ ಹಣ ಹೊರಟ್ಟಿ ಆಕ್ಷೇಪ

Parashurama
Updated On : 15 Feb 2013, 12:12 pm

ವಿಧಾನಪರಿಷತ್ತು:  ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಗೋ.ಮಧುಸೂದನ್ ಅಂಡ್ ಕಂಪನಿ ರಿಮೋಟ್ ಕಂಟ್ರೋಲ್ ಮೂಲಕ ನಿಯಂತ್ರಿಸುತ್ತಿದೆ ಎಂದು ಜೆಡಿಎಸ್‌ನ ಬಸವರಾಜ ಹೊರಟ್ಟಿ ಲೇವಡಿ ಮಾಡಿದರು. ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದ ಅವರು, ಮಠಗಳಿಗೆ ಅನಗತ್ಯವಾಗಿ ಹಣ ಒದಗಿಸಿರುವುದಕ್ಕೆ ಆಕ್ಷೇಪಿಸಿದರು. ಕಳೆದ ಬಾರಿ ಅನುದಾನ ನೀಡಿದ್ದ ಮಠಗಳಿಗೇ ಬಜೆಟ್‌ನಲ್ಲಿ ಮತ್ತೆ ಹಣ ಒದಗಿಸಲಾಗಿದೆ. ಏಕೆಂದರೆ, ಶೆಟ್ಟರ್ ಅವರು ಗೋ.ಮಧುಸೂದನ್ ಅಂಡ್ ಕಂಪನಿ ರಿಮೋಟ್ ಕಂಟ್ರೋಲ್‌ನ ನಿಯಂತ್ರಣಕ್ಕೊಳಗಾಗಿದ್ದಾರೆ. ಅವರು ತಾನೇ ಏನು ಮಾಡಲು ಸಾಧ್ಯ? ಈಗಲಾದರೂ ನಿಮ್ಮ ರಿಮೋಟ್ ಕಂಟ್ರೋಲ್ ಕಡಿಮೆ ಮಾಡಿ ಎಂದು ಟೀಕಿಸಿದರು. ಮಠಗಳಿಗೆ ಅನುದಾನ ಒದಗಿಸಿರುವ ಬಗ್ಗೆ ನನ್ನ ಆಕ್ಷೇಪವಿಲ್ಲ. ಆದರೆ, ಜಾತ್ಯತೀತ ಮಠವಾದ ಗದಗದ ತೋಂಟದಾರ್ಯ ಮಠ, ಬೆಳಗಾವಿಯ ಕಾಡಸಿದ್ದೇಶ್ವರ ಮಠಗಳು ಉತ್ತಮ ಕಾರ್ಯ ಮಾಡುತ್ತಿದ್ದರೂ ಏಕೆ ಅನುದಾನ ನೀಡಿಲ್ಲ? ಕೆಲವು ಮಠಗಳಿಗೆ ಕಳೆದ ಬಾರಿ ರು. 2 ಕೋಟಿ ಕೊಡಲಾಗಿತ್ತು. ಈ ಬಾರಿ ಮತ್ತೆ ರು. 2 ಕೋಟಿ ನೀಡಿದ್ದೀರಿ. ಇದು ಸರಿಯೇ ಎಂದು ಹೊರಟ್ಟಿ ಪ್ರಶ್ನಿಸಿದರು.  ಗೋ.ಮಧುಸೂಧನ್, ಮಠಗಳಿಗೆ ನಿಮ್ಮ ಸರ್ಕಾರ ಎಷ್ಟೆಷ್ಟು ನೀಡಿತ್ತು ಹೇಳಿ ಎಂದು ಮೂದಲಿಸುವಂತೆ ಪ್ರಶ್ನಿಸಿದರು. ಇದರಿಂದ ಸಿಟ್ಟಿಗೆದ್ದ ಜೆಡಿಎಸ್‌ನ ಪುಟ್ಟಣ್ಣ, ನಾವೇನೂ ನಿಮ್ಮಂತೆ ಮಠಗಳಿಗೆ ಹಣ ನೀಡಿ ಮನವೊಲಿಸಲು ಯತ್ನಿಸಲಿಲ್ಲ ಎಂದು ತಿರುಗೇಟು ನೀಡಿದರು. ನಾನು ಶಿಕ್ಷಣ ಸಚಿವ ಆಗಿದ್ದಾಗ ಮಾಡಿದ್ದ ಕೆಲಸಗಳನ್ನು ಈ ಬಜೆಟ್‌ನಲ್ಲಿ ನಿಮ್ಮ ಸಾಧನೆ ಎನ್ನುವಂತೆ ಹೇಳಿಕೊಂಡಿದ್ದೀರಿ. ಇದು ಸುಳ್ಳಲ್ಲವೇ ಎಂದು ಹೊರಟ್ಟಿ ಸರ್ಕಾರವನ್ನು ತರಾಟೆ ತೆಗೆದುಕೊಂಡರು. ನಾನು ಸಚಿವ ಆಗಿದ್ದಾಗ 1039 ಪ್ರೌಢಶಾಲೆಗಳನ್ನು ಆರಂಭಿಸಿದ್ದೆ. ನಿಮ್ಮ ಅವಧಿಯಲ್ಲಿ ಒಂದೇ ಒಂದು  ಪ್ರೌಢಶಾಲೆ ತೆರೆದಿಲ್ಲ. ಒಂದು ಪದವಿಪೂರ್ವ ಕಾಲೇಜು ಆರಂಭಿಸಿಲ್ಲ. ಒಬ್ಬ ಶಿಕ್ಷಕರನ್ನೂ ನೇಮಕ ಮಾಡಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ನಿಮ್ಮ ಸಾಧನೆ ಶೂನ್ಯ. ಆದರೂ ಬಜೆಟ್‌ನಲ್ಲಿ ಸುಳ್ಳು ಹೇಳಿದ್ದೀರಿ ಎಂದು ಆಡಳಿತ ಪಕ್ಷದವರನ್ನು ಇಕ್ಕಟ್ಟಿಗೆ ಸಿಕ್ಕಿಸಿದರು. ವಿದ್ಯಾಸಂಸ್ಥೆಗಳಿಗೆ ಅನುದಾನ ನೀಡುವ ವಿಚಾರದಲ್ಲೂ ತಾರತಮ್ಯ ಮಾಡಿದ್ದೀರಿ. ಯಾವುದು ಮುಸ್ಲಿಂ ವಿದ್ಯಾಸಂಸ್ಥೆ? ಯಾವುದು ಕ್ರಿಶ್ಚಿಯನ್ ಸಂಸ್ಥೆ ಮತ್ತು ಹಿಂದೂ ಸಂಸ್ಥೆಗಳಾವುವು ಎಂದು ಪರಿಶೀಲಿಸಿ ಅನುದಾನ ನೀಡಿದ್ದೀರಿ ಎಂದು ದೂರಿದರು.
ಘರ್ಷಣೆ: ಐವರ ಬಂಧನ
ಧಾರವಾಡ: ಹುಡುಗಿಯನ್ನು ಚುಡಾಯಿಸಿದ್ದಕ್ಕಾಗಿ ಬುಧವಾರ ತಡರಾತ್ರಿ ಒಂದೇ ಕೋಮಿನ ಎರಡು ಗುಂಪುಗಳ ಮಧ್ಯೆ ನಡೆದಿದ್ದ ಘರ್ಷಣೆಗೆ ಸಂಬಂಧಿಸಿದಂತೆ ವಿದ್ಯಾಗಿರಿ ಪೊಲೀಸರು ಗುರುವಾರ ಎರಡೂ ಗುಂಪುಗಳ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.  ಇಲ್ಲಿಯ ಲಕ್ಷ್ಮೀಸಿಂಗನಕೇರಿಯಲ್ಲಿ ಹುಡುಗಿಯನ್ನು ಚುಡಾಯಿಸಿದ್ದಕ್ಕಾಗಿ ಯುವಕನೋರ್ವನಿಗೆ ಬುದ್ಧಿ ಮಾತು ಹೇಳಿದವರ ಮೇಲೆ ಆತ ತನ್ನ ಜನರೊಂದಿಗೆ ಬಂದು ಹಲ್ಲೆ ನಡೆಸಿದ್ದ. ಇದರಿಂದ ಕೆಲ ಹೊತ್ತು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ನಡು ರಾತ್ರಿಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದರು. ಗಲಾಟೆಯಲ್ಲಿ ಕಲ್ಲು ತೂರಾಟ ನಡೆಸಿದ್ದರಿಂದ ಪಿಎಸೈ ಪರಶುರಾಮ ಅವರಿಗೆ ಪೆಟ್ಟು ಬಿದ್ದಿತ್ತು. ಬಂಧಿತ ಆರೋಪಿಗಳ ಹೆಸರು ತಿಳಿದು ಬಂದಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement