ಶಿಕ್ಷಣ ಗುಣಮಟ್ಟ ಕುಸಿಯುತ್ತಿದೆ ಡಾ. ಆನಂದ ಕಳವಳ
ಧಾರವಾಡ: ಮಕ್ಕಳು ಹುಟ್ಟು ಸಂಶೋಧಕರು. ಕುತೂಹಲ, ಪ್ರಯೋಗಶೀಲತೆ ಮಕ್ಕಳ ಸಹಜ ಗುಣಗಳು. ಮಕ್ಕಳಿಗೆ ವೈಯಕ್ತಿಕ ಪ್ರೀತಿ, ಕಾಳಜಿ, ತಪ್ಪು ಮಾಡುತ್ತ ಕಲಿಯುವ ಸ್ವಾತಂತ್ರ್ಯ ಸಿಕ್ಕಿದ್ದಾದರೆ ಅವರು ತಮ್ಮೊಳಗಿನ ಪ್ರತಿಭೆಯನ್ನು ಅರಳಿಸಿಕೊಂಡು ದೊಡ್ಡ ಸಾಧನೆಯ ವ್ಯಕ್ತಿಗಳಾಗಿ ಬೆಳೆಯಲು ಸಾಧ್ಯ ಎಂದು ಶಿಕ್ಷಣ ತಜ್ಞ ಡಾ. ಆನಂದ ಕಬ್ಬೂರ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು ಆಯೋಜಿಸಿದ್ದ ಸಂಪಿಗೆ ಲೋಕ ಶಿಕ್ಷಣ ಉಪನ್ಯಾಸ ಮಾಲೆಯ 8ನೇ ಉಪನ್ಯಾಸವಾಗಿ ನಮ್ಮ ಶಾಲಾ ಶಿಕ್ಷಣ ಗುಣಮಟ್ಟ ವಿಷಯ ಕುರಿತು ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದೊಳಗಿನ ಹಲವಾರು ಸಮಸ್ಯೆಗಳು ಮತ್ತು ಮಿತಿಗಳಿಂದಾಗಿ ಇಂದು ಮಕ್ಕಳ ಪ್ರತಿಭೆ ಹೊರ ಬರುತ್ತಿಲ್ಲ. ಹಾಗಾಗಿ ಶಾಲಾ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ ಎಂದರು.
ಅತ್ಯುತ್ತಮ ವಿವಿ ಪಟ್ಟಿಯಲ್ಲಿಲ್ಲ: ಗಣಿತ, ಖಗೋಳಶಾಸ್ತ್ರ, ತತ್ವಶಾಸ್ತ್ರ, ಆರೋಗ್ಯಶಾಸ್ತ್ರ ಕ್ಷೇತ್ರಗಳಲ್ಲಿ ಜಗತ್ತಿಗೆ ಅಮೂಲ್ಯ ಜ್ಞಾನ ನೀಡಿರುವ ಪರಂಪರೆ ಭಾರತಕ್ಕಿದೆ. ಆದರೆ, ಇಂದು ಭಾರತದಲ್ಲಿ 550 ವಿವಿಗಳಿದ್ದರೂ ಇವುಗಳಲ್ಲಿ ಒಂದು ಕೂಡ ಜಗತ್ತಿನ ಅತ್ಯುತ್ತಮ 200 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿಲ್ಲ ಎಂದು ಡಾ. ಆನಂದ ಕಬ್ಬೂರ ವಿಷಾದ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಅಪರ ಆಯುಕ್ತರ ಕಚೇರಿ ಸಹ ನಿರ್ದೇಶಕ ಸಿದ್ದರಾಮ ಮನಹಳ್ಳಿ, ಧರ್ಮ, ರಾಜಕಾರಣ, ವಾಣಿಜ್ಯ ಹೀಗೆ ಬದುಕಿನ ಇತರ ಎಲ್ಲ ಕ್ಷೇತ್ರಗಳಲ್ಲೂ ನೈತಿಕತೆ ಕುಸಿದು ಭ್ರಷ್ಟಾಚಾರ ಹೆಚ್ಚುತ್ತಿರುವಾಗ ಕೇವಲ ಶಿಕ್ಷಣ ಕ್ಷೇತ್ರದಲ್ಲಿ ಮಾತ್ರ ಒಳ್ಳೆಯ ಗುಣಮಟ್ಟವನ್ನು ನಿರೀಕ್ಷಿಸುವುದು ತಪ್ಪು. ಶಿಕ್ಷಕರ ಮಟ್ಟವೇ ಮಕ್ಕಳಿಗೆ ಸಿಗುವ ಶಿಕ್ಷಣದ ಮಟ್ಟ ಎಂದು ಹೇಳಿದರು. ಶಿಕ್ಷಣ ಮಂಟಪದ ಸಂಚಾಲಕ ಡಾ. ಸಂಜೀವ ಕುಲಕರ್ಣಿ ಪ್ರಾಸ್ತಾವಿಕ ಮಾತನ್ನಾಡಿದರು. ನಿವೃತ್ತ ಶಿಕ್ಷಕ ಕೆ.ಎಚ್. ನಾಯಕ ಸ್ವಾಗತಿಸಿದರು. ಕೀರ್ತಿವತಿ ನಿರೂಪಿಸಿದರು. ನಿಂಗಣ್ಣ ಕುಂಟಿ, ಡಾ. ಸೋಮಶೇಖರ ಇಮ್ರಾಪುರ, ಪಂಚಮುಖಿ, ರಾಮಚಂದ್ರ ಪಾಟೀಲ, ಶಿವಾನಂದ ಹೊಂಬಳ ಇದ್ದರು.