ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

20ರಿಂದ ದೇಶವ್ಯಾಪಿ ಮುಷ್ಕರ

Mainashree
Updated On : 16 Feb 2013, 10:31 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 15
ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ ದೇಶದ ಪ್ರಮುಖ 11 ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಫೆ.20 ಮತ್ತು 21ರಂದು ಎರಡು ದಿನಗಳ ಕಾಲ ದೇಶವ್ಯಾಪಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಧಾರವಾಡ ಜಿಲ್ಲಾ ಸಿಐಟಿಯು ಪದಾಧಿಕಾರಿ ಮಹೇಶ ಪತ್ತಾರ ಹೇಳಿದರು.
ಶುಕ್ರವಾರ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿರುದ್ಧ 11 ಕಾರ್ಮಿಕ ಸಂಘಟನೆಗಳು ಒಟ್ಟಿಗೆ ಸೇರಿ 48 ಗಂಟೆಗಳ ಮುಷ್ಕರಕ್ಕೆ ಪ್ರಪ್ರಥಮ ಬಾರಿಗೆ ಕರೆ ನೀಡಿವೆ. ಮುಷ್ಕರದಲ್ಲಿ ಬ್ಯಾಂಕಿಂಗ್, ವಿಮೆ, ಆಟೋ, ಸಾರಿಗೆ, ದೂರಸಂಪರ್ಕ, ಅಂಗನವಾಡಿ ಮತ್ತು ಗ್ರಾಪಂ ನೌಕರರು ಸೇರಿದಂತೆ ವಿವಿಧ ಕ್ಷೇತ್ರಗಳ ಕಾರ್ಮಿಕರು ತಮ್ಮ ಸಂಘಟನೆಗಳ ನೇತೃತ್ವದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದ ಬಿಬಿಎಂಪಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ, ವಾಯವ್ಯ ಕರ್ನಾಟಕ ಸಾರಿಗೆ ಮತ್ತು ಈಶಾನ್ಯ ಸಾರಿಗೆ ಸಂಸ್ಥೆ ಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದು, ಫೆ. 20ರಂದು ರಾಜ್ಯದಲ್ಲಿ ಬಸ್ ಸಂಚಾರ ಪೂರ್ಣ ಪ್ರಮಾಣದಲ್ಲಿ ಸ್ಥಗಿತಗೊಳ್ಳಲಿದೆ. 21ರಂದು ಈ ಸಾರಿಗೆ ನಿಗಮಗಳ ಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದು ಎರಡನೇ ದಿನ ಸಾರಿಗೆ ವ್ಯವಸ್ಥೆ ಸುಗಮವಾಗಿರುತ್ತದೆ.  ಮುಷ್ಕರದಲ್ಲಿ ಅಖಿಲ ಭಾರತ ವಿಮಾ ನೌಕರರ ಸಂಘ, ಅಖಿಲ ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಫೆಡರೇಷನ್, ಬಿಎಸ್ಸೆನ್ನೆಲ್ ನೌಕರರ ಸಂಘ, ಆಲ್ ಇಂಡಿಯಾ ಜನರಲ್ ಇನ್ಶೂರೆನ್ಸ್ ಎಂಪ್ಲಾಯಿಸ್ ಯೂನಿಯನ್, ಅಖಿಲ ಭಾರತೀಯ ಬ್ಯಾಂಕ್ ನೌಕರರ ಒಕ್ಕೂಟ, ಭಾರತೀಯ ಮಜ್ದೂರ್ ಸಂಘ, ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್, ಇಂಟಕ್, ಎಐಯುಟಿಯುಸಿ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ. ಪತ್ರಿಕಾಗೋಷ್ಠಿಯಲ್ಲಿ ಬಿಎಂಎಸ್‌ನ ಎಂ.ಡಿ. ಸವಣೂರ, ಐಎನ್‌ಟಿಯುಸಿ ಪದಾಧಿಕಾರಿ ಇಸೂಫ್ ಬಳ್ಳಾರಿ, ಆರ್.ಎಫ್. ಕವಳಿಕಾಯಿ, ಸ್ಟಿಫನ್ ಜಯಚಂದ್ರ, ಕೃಷ್ಣದಾಸ್, ಬಿ.ಎನ್. ಪೂಜಾರಿ ಇದ್ದರು.
ಹುಬ್ಬಳ್ಳಿ ಧಾರವಾಡದಲ್ಲಿ ಮುಷ್ಕರ: ಫೆ. 20ರಂದು ಹುಬ್ಬಳ್ಳಿಯ ಡಾ. ಅಂಬೇಡ್ಕರ್ ವೃತ್ತದಿಂದ ಚನ್ನಮ್ಮ ವೃತ್ತದವರೆಗೆ ಮತ್ತು ಧಾರವಾಡದಲ್ಲಿ ಕಲಾಭವನದಿಂದ ಗಾಂಧಿ ವೃತ್ತದ ಮುಖಾಂತರ ಜ್ಯೂಬಿಲಿ ಸರ್ಕಲ್‌ವರೆಗೆ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಫೆ. 21ರಂದು ಬೆಳಗ್ಗೆ 11ಕ್ಕೆ ಹುಬ್ಬಳ್ಳಿಯಲ್ಲಿ ತಹಸೀಲ್ದಾರ್ ಮತ್ತು ಧಾರವಾಡದಲ್ಲಿ ಡಿಸಿಗೆ ಮನವಿ ಸಲ್ಲಿಸಲಾಗುವುದು ಎಂದು ಅಖಿಲ ಭಾರತೀಯ ವಿಮಾ ನೌಕರರ ಸಂಘದ ಪದಾಧಿಕಾರಿ ಎಂ.ಬಿ. ಪೂಜಾರಿ ತಿಳಿಸಿದರು.
 ಸಾರಿಗೆ ಸಂಸ್ಥೆ ಮುಚ್ಚಬೇಕಾ?
ಸಗಟು ಡಿಸೇಲ್ ಖರೀದಿಸುವ ಸಾರಿಗೆ ಸಂಸ್ಥೆ ಮುಚ್ಚಬೇಕು ಎಂಬ ಏಕೈಕ ಉದ್ದೇಶದಿಂದ ಸಗಟು ಡಿಸೇಲ್ ಖರೀದಿ ದರವನ್ನು ಲೀಟರ್ 12 ಹೆಚ್ಚಿಸಿದೆ. ವಿಪರೀತ ಪ್ರಮಾಣದಲ್ಲಿ ಡಿಸೇಲ್ ಬೆಲೆ ಏರಿಕೆ ಮಾಡಿರುವುದರಿಂದ ಸಾರಿಗೆ ಸಂಸ್ಥೆಗಳು ಬಸ್ ಸೌಲಭ್ಯ ನಿಲ್ಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ಪ್ರಯಾಣ ದರ ಹೆಚ್ಚಿಸುವಂತೆಯೂ ಇಲ್ಲ ಅತ್ತ ಕೈಬಿಡುವಂತೆಯೂ ಇಲ್ಲದಂತಹ ಸ್ಥಿತಿ ಉಂಟಾಗಿದೆ ಎಂದು ಸಾರಿಗೆ ನಿಗಮ ಕಾರ್ಮಿಕ ಒಕ್ಕೂಟದ ಪದಾಧಿಕಾರಿ ಎಂ.ಎಚ್. ಮುಲ್ಲಾ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement