ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಪತ್ತೆ (ಸುದ್ದಿ ಸಂಕ್ಷೇಪ)
ಹುಬ್ಬಳ್ಳಿ: ನಗರದಿಂದ ನಾಪತ್ತೆಯಾಗಿದ್ದ ಸರ್ಕಾರಿ ಪಾಲಿಟೆಕ್ನಿಕ್ನ ಮೊದಲು ವರ್ಷದ ಡಿಪ್ಲೋಮಾ ವಿದ್ಯಾರ್ಥಿನಿ ಉಡುಪಿ ಬಳಿಯ ಸಾಲಿಗ್ರಾಮದಲ್ಲಿ ಪತ್ತೆಯಾಗಿದ್ದಾಳೆ. ಸೊರಬ ತಾಲೂಕಿನ ಆನವಟ್ಟಿ ಗ್ರಾಮದ ಚೈತ್ರಾ ಸುರೇಶ ನಿರುಂಬ್ಳೇರ್ (17) ಎಂಬುವಳೇ ಪತ್ತೆಯಾದ ವಿದ್ಯಾರ್ಥಿನಿ. ಫೆ. 11ರಂದು ನಗರದ ಹಳೆಬಸ್ ನಿಲ್ದಾಣದಿಂದ ಕಾಣೆಯಾಗಿದ್ದ ವಿದ್ಯಾರ್ಥಿನಿ ಚೈತ್ರಾ, ಉಡುಪಿ ಬಳಿಯ ಸಾಲಿಗ್ರಾಮದಲ್ಲಿದ್ದಾಳೆಂಬ ಮಾಹಿತಿಯನ್ನಾಧರಿಸಿ ಉಪನಗರ ಠಾಣೆ ಪೊಲೀಸರು ಹಾಗೂ ಆಕೆಯ ಪೋಷಕರು ಪತ್ತೆ ಹಚ್ಚಿ ನಗರಕ್ಕೆ ಕರೆ ತಂದಿದ್ದಾರೆ.
ಲಾರಿ ಹರಿದು ಸಾವು
ಹುಬ್ಬಳ್ಳಿ: ರಸ್ತೆ ಬದಿ ಹೊರಟಿದ್ದ ಮೂವರ ಮೇಲೆ ಲಾರಿಯೊಂದು ಹಾಯ್ದ ಪರಿಣಾಮ ಒಬ್ಬ ಸಾವನ್ನಪ್ಪಿದ ಘಟನೆ ಗುರುವಾರ ತಡರಾತ್ರಿ ತಾಲೂಕಿನ ಅದರಗುಂಚಿ ಗ್ರಾಮದ ಬ್ರಿಜ್ ಬಳಿ ಸಂಭವಿಸಿದೆ. ನೂಲ್ವಿ ಗ್ರಾಮದ ಮಹೇಶ ಮಲ್ಲಪ್ಪ ಬಿದರಿ (45) ಮೃತಪಟ್ಟಿದ್ದು, ಇದೇ ಗ್ರಾಮದ ಗದಿಗೆಪ್ಪ ವೀರಭದ್ರಪ್ಪ ಅವ್ವಾರಿ ಹಾಗೂ ಬಸಪ್ಪ ಪರಪ್ಪ ಇಂಗಳಹಳ್ಳಿ ಎಂಬಿಬ್ಬರು ಗಾಯಗೊಂಡಿದ್ದಾರೆ. ನೂಲ್ವಿಯಲ್ಲಿ ಕೆಲಸ ಮುಗಿಸಿ ಅದರಗುಂಚಿಗೆ ರಸ್ತೆ ಮೂಲಕ ನಡೆದುಕೊಂಡು ಹೋಗುತ್ತಿದ್ದ ಮೂವರ ಮೇಲೆ ಹುಬ್ಬಳ್ಳಿಯಿಂದ ಲಕ್ಷ್ಮೇಶ್ವರಕ್ಕೆ ತೆರಳುತ್ತಿದ್ದ ಲಾರಿ ಹಾಯ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಸುದ್ದಿ ತಿಳಿದ ಗ್ರಾಮೀಣ ಠಾಣೆ ಇನ್ಸ್ಪೆಕ್ಟರ್ ಆರ್.ಕೆ. ಪಾಟೀಲ, ಪಿಎಸ್ಐ ಜಮಾದಾರ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಾಗಿದೆ.
ಬಾವಿಗೆ ಬಿದ್ದ ಮಹಿಳೆ ಸಾವು
ಹುಬ್ಬಳ್ಳಿ: ಬಾವಿಯಲ್ಲಿ ಬಿದ್ದು ಗಾಯಗೊಂಡು ಉಪಚಾರಕ್ಕಾಗಿ ಕಿಮ್ಸ್ಗೆ ದಾಖಲಾಗಿದ್ದ ಮಹಿಳೆಯೊಬ್ಬಳು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ.
ರಾಮಾಪುರ ಗ್ರಾಮದ ರತ್ನವ್ವ ರುದ್ರಗೌಡ ಪಾಟೀಲ (45) ಮೃತಪಟ್ಟ ದುರ್ದೈವಿ. 15-20 ದಿನಗಳಿಂದ ಮಾನಸಿಕವಾಗಿ ಅಸ್ವಸ್ಥಳಾಗಿದ್ದ ರತ್ನವ್ವ, ಗ್ರಾಮದ ನೀರಿಲ್ಲದ ಬಾವಿಯಲ್ಲಿ ಬಿದ್ದು ತೀವ್ರ ಗಾಯಗೊಂಡಿದ್ದಳು. ಚಿಕಿತ್ಸೆಗಾಗಿ ಕಿಮ್ಸ್ಗೆ ದಾಖಲಿಸಲಾಗಿತ್ತಾದರೂ ಉಪಚಾರ ಫಲಿಸದೆ ಶುಕ್ರವಾರ ಬೆಳಗ್ಗೆ ಸಾವನ್ನಪ್ಪಿದ್ದಾಳೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.