ಹುಚ್ಚರ ಸಂತೆಯಲ್ಲಿ ಸಿಕ್ಕಾಪಟ್ಟೆ ನಕ್ಕ ಜನ
ಧಾರವಾಡ: ದಿನದ ದುಗುಡಗಳನ್ನೆಲ್ಲಾ ಮರೆತು ಬರೀ ನಗುವಿನ ಲೋಕದಲ್ಲಿ ತೇಲಾಡಿದ ಅನುಭವ ನೀಡಿದ್ದು ಉಮೇಶ ತೇಲಿ ನಿರ್ದೇಶನದ 'ಹುಚ್ಚರ ಸಂತೆ' ನಾಟಕ.
ಖ್ಯಾತ ರಂಗ ನಿರ್ದೇಶಕ, ನಟ ಯಶವಂತ ಸರದೇಶಪಾಂಡೆ ಅವರ ನೇತೃತ್ವದ ಗುರು ಇನ್ಸ್ಟಿಟ್ಯೂಟ್, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಹಾಗೂ ರಂಗಾಯಣ ಜಂಟಿಯಾಗಿ ಇಲ್ಲಿನ ಡಾ. ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಏರ್ಪಡಿಸಿರುವ ಮೂರು ದಿನಗಳ 'ನಾಟಕ ಉತ್ತರ ಕರ್ನಾಟಕ' ನಗೆ ನಾಟಕೋತ್ಸವದ ಮೊದಲ ನಾಟಕ ಶುಕ್ರವಾರ ಯಶಸ್ವಿ ಪ್ರದರ್ಶನ ಕಂಡಿತು. ಬೆಳಕು, ಧ್ವನಿ, ಸೆಟ್ ಇಲ್ಲದೆ ಬರೀ ನಾಲ್ಕು ಜನ ಕೂಡಿ ನೂರಾರು ಜನ ಪ್ರೇಕ್ಷಕರನ್ನು ಬರೋಬ್ಬರಿ ಒಂದು ಗಂಟೆ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಿದ್ದು ಮಾತ್ರ ನಿಜ. ನಾಟಕದಲ್ಲಿ ಪ್ರೇಕ್ಷಕರಿಗೆ ತೀರಾ ಹತ್ತಿರವಾದ ಮಾತುಗಳು ನಾಟಕ ಯಶಸ್ವಿಯಾಗಲು ಸಾಧ್ಯವಾಯಿತು.
ಹಾಸ್ಯದ ಅಪೇಕ್ಷೆ ಹೆಚ್ಚು: ನಾಟಕ ಪ್ರದರ್ಶನಕ್ಕೂ ಮುನ್ನ ನಡೆದ ಸರಳ ಸಮಾರಂಭದಲ್ಲಿ ಹಿರಿಯ ರಂಗಕರ್ಮಿಗಳಾದ ವಿಜಯಾ ಉರಾಳ ಹಾಗೂ ಬಸವರಾಜ ಬೆಂಗೇರಿ ಅವರನ್ನು ಸನ್ಮಾನಿಸಲಾಯಿತು. ಜನಪದ ತಜ್ಞ ಡಾ. ಬಸವರಾಜ ಮ್ಯಾಗೇರಿ ಮಾತನಾಡಿ, ಪ್ರಸ್ತುತ ಒತ್ತಡದ ಬದುಕಿನಲ್ಲಿ ನಗೆಯ ಅಗತ್ಯ ಹೆಚ್ಚಾಗುತ್ತಿದೆ. ನಮ್ಮಲ್ಲಿ ಜಡತ್ವ ಹೆಚ್ಚಿದ್ದರಿಂದ ಜೊತೆಗೆ ಸಮಾಜಕ್ಕೆ ಹಾಸ್ಯದ ಅಪೇಕ್ಷೆ ಹೆಚ್ಚುತ್ತಿದೆ. ಯಾಂತ್ರೀಕೃತ ಬದುಕಿನಲ್ಲಿ ಬದುಕಿನ ಶಕ್ತಿಯನ್ನು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಹಾಸ್ಯ ನಮ್ಮನ್ನು ಉತ್ಸಾಹಿತರನ್ನಾಗಿ ಮಾಡುತ್ತದೆ ಎಂದರು.
ಈ ಹಿಂದೆ ನಾಟಕದ ಒಂದು ಭಾಗವಾಗಿ ಹಾಸ್ಯ ಇರುತ್ತಿತ್ತು. ಆದರೆ, ಇಂದು ಹಾಸ್ಯವೇ ಪ್ರಧಾನವಾಗಿರುವ ನಾಟಕಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ ನಟರು, ನಿರ್ದೇಶಕರು ಹಾಸ್ಯ ನಾಟಕಗಳತ್ತ ವಾಲುತ್ತಿದ್ದಾರೆ. ಇಂಥದೊಂದು ಪರಂಪರೆಯನ್ನು ಹುಟ್ಟು ಹಾಕಿ ನಾಡಿನಾದ್ಯಂತ ಹಾಸ್ಯ ನಾಟಕಗಳನ್ನು ಪ್ರದರ್ಶಿಸುತ್ತಿರುವ ಗುರು ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ನಟಿ ವಿಜಯಾ ಉರಾಳ, ರಂಗಭೂಮಿ ನನಗೆ ಗೌರವ ತಂದು ಕೊಟ್ಟಿದೆ. ಜಯತೀರ್ಥ ಜೋಶಿ ಅವರಂಥ ನಿರ್ದೇಶಕರು ನಮ್ಮನ್ನು ನಟರನ್ನಾಗಿ ರೂಪಿಸಿದವರು. ಇಂದು ಅವರಿಲ್ಲದಿದ್ದರೂ ನಮ್ಮನ್ನು ನಿರ್ದೇಶಿಸುತ್ತಿದ್ದಾರೆ. ಈ ಗೌರವ ಅವರಿಗೆ ಸಲ್ಲಬೇಕು ಎಂದರು.
ಹೊಸ ಪ್ರಯೋಗ: ಪ್ರಾಸ್ತಾವಿಕವಾಗಿ ಮಾತನಾಡಿದ ಗುರು ಸಂಸ್ಥೆ ನಿರ್ದೇಶಕ ಯಶವಂತ ಸರದೇಶಪಾಂಡೆ, ಗುರು ಸಂಸ್ಥೆ ಮರಾಠಿ ರಂಗಭೂಮಿಯ ಯಶಸ್ವಿ ನಾಟಕಗಳನ್ನು ಕನ್ನಡೀಕರಿಸಿ ಪ್ರದರ್ಶಿಸಿ, ಯಶಸ್ಸು ಕಂಡಿದೆ. ಆದರೆ, ಇಂದು ಹೊಸ ನಿರ್ದೇಶಕರು ತಮ್ಮವೇ ಹಾಸ್ಯ ನಾಟಕಗಳನ್ನು ರಚಿಸಿ, ನಿರ್ದೇಶಿಸಿ ಹೊಸ ಪ್ರಯೋಗಕ್ಕೆ ಅಣಿಯಾಗುತ್ತಿರುವುದು ಧನಾತ್ಮಕ ಬೆಳವಣಿಗೆ. ಅಂತಹ ಪ್ರತಿಭಾವಂತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ನಾಟಕೋತ್ಸವ. ಪ್ರೇಕ್ಷಕರಿಲ್ಲದೇ ರಂಗಭೂಮಿ ಚಟುವಟಿಕೆ ಯಶಸ್ವಿಯಾಗಲು ಸಾಧ್ಯವಿಲ್ಲ. ಆದರೆ, ಧಾರವಾಡದಲ್ಲಿ ಯಾವ ನಾಟಕಗಳಿಗೂ ಪ್ರೇಕ್ಷಕರ ಕೊರತೆ ಇರುವುದಿಲ್ಲ. ಇಲ್ಲಿರುವ ಸಾಂಸ್ಕೃತಿಕ ಶ್ರೀಮಂತಿಕೆ ಬೇರೆಡೆ ಕಾಣಲು ಸಾಧ್ಯವಿಲ್ಲ ಎಂದರು.
ರಂಗಾಯಣ ಆಡಳಿತಾಧಿಕಾರಿ ಕೆ.ಎಚ್. ಚೆನ್ನೂರ ವಂದಿಸಿದರು. ರವಿ ಕುಲಕರ್ಣಿ ನಿರೂಪಿಸಿದರು.