ಹುಬ್ಬಳ್ಳಿ-ಮುಂಬೈ ಸ್ಪೈಸ್ ಜೆಟ್ ಸೇವೆ ಪ್ರಾರಂಭ
ಹುಬ್ಬಳ್ಳಿ: ಮುಂಬೈ-ಹುಬ್ಬಳ್ಳಿ ಮಧ್ಯೆ ಶುಕ್ರವಾರದಿಂದ (ಫೆ.15) ಸ್ಪೈಸ್ ಜೆಟ್ ವಿಮಾನ ಯಾನ ಆರಂಭವಾಗಿದೆ. ಈಗಾಗಲೇ ಹುಬ್ಬಳ್ಳಿ-ಬೆಂಗಳೂರು ಮಧ್ಯೆ ವಿಮಾನಯಾನ ಪ್ರಾರಂಭಿಸಿರುವ ಸ್ಪೈಸ್ ಜೆಟ್ ಅಗ್ಗದ ದರದ ಪ್ರಯಾಣಕ್ಕೆ ಖ್ಯಾತಿ. ಈ ವಿಮಾನ ಮುಂಬೈನಿಂದ ನಾಂದೇಡ್ಗೂ ಹಾರಾಟ ನಡೆಸಲಿವೆ.
ಶುಕ್ರವಾರದಿಂದ (ಫೆ.15) ಪ್ರತಿ ಸೋಮವಾರ, ಬುಧವಾರ, ಶುಕ್ರವಾರ ಹಾಗೂ ಭಾನುವಾರದಂದು ಎಸ್ಜಿ 3326 ವಿಮಾನವು ಮಧ್ಯಾಹ್ನ 12.40ಕ್ಕೆ ಮುಂಬೈನಿಂದ ನಿರ್ಗಮಿಸಿ ಮಧ್ಯಾಹ್ನ 2.10ಕ್ಕೆ ಹುಬ್ಬಳ್ಳಿಗೆ ಆಗಮಿಸಲಿದೆ.
ಇದೇ ದಿನಗಳಂದು ಮಧ್ಯಾಹ್ನ 2.30ಕ್ಕೆ ಹುಬ್ಬಳ್ಳಿಯಿಂದ ಹೊರಟು ಮಧ್ಯಾಹ್ನ 3.50ಕ್ಕೆ ಎಸ್ಜಿ3327 ವಿಮಾನ ಮುಂಬೈ ತಲುಪಲಿದೆ.
ಬೊಂಬರೈಡರ್ ಕ್ಯೂ 400 ಏರ್ಕ್ರಾಫ್ಟ್ 78 ಪ್ರಯಾಣಿಕರ ಸಾಮರ್ಥ್ಯ ಹೊಂದಿದ್ದು, ಮುಂಬೈನಿಂದ ಹುಬ್ಬಳ್ಳಿಗೆ 1,596 ಹಾಗೂ ಹುಬ್ಬಳ್ಳಿಯಿಂದ ಮುಂಬೈ 2,065 ಪ್ರಯಾಣ ಶುಲ್ಕ ನಿಗದಿಪಡಿಸಲಾಗಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ. ಕಿಂಗ್ಫಿಷರ್ ವಿಮಾನ ಹುಬ್ಬಳ್ಳಿ-ಮುಂಬೈ ಮಧ್ಯೆ ಹಾರಾಟ ಸ್ಥಗಿತಗೊಳಿಸಿದ ನಂತರ ಮುಂಬೈಗೆ ಹೋಗಿ ಬರುವ ಪ್ರಯಾಣಿಕರಿಗೆ ಅಡಚಣೆಯಾಗಿತ್ತು. ಈ ಮಾರ್ಗದಲ್ಲಿ ವಿಮಾನ ಯಾನ ಸ್ಥಗಿತಗೊಂಡಿದ್ದರಿಂದ ಉದ್ಯಮಿಗಳು ಹೆಚ್ಚು ತೊಂದರೆಗೊಳಗಾಗಿದ್ದರು.