ಹೆಸ್ಕಾಂ ವಿರುದ್ಧ ಅಲ್ಲಾಪುರ ಗ್ರಾಮಸ್ಥರ ಆಕ್ರೋಶ (ಸುದ್ದಿ ಸಂಕ್ಷೇಪ)
ಕುಂದಗೋಳ: ತಾಲೂಕಿನ ಅಲ್ಲಾಪುರ ಗ್ರಾಮದಲ್ಲಿ ಇತ್ತೀಚಿಗೆ ವಿದ್ಯುತ್ ತಂತಿ ತಗುಲಿ ಓರ್ವ ಮಹಿಳೆ ತೀವ್ರ ಅಸ್ವಸ್ಥಳಾಗಿದ್ದಳು. ಈ ಸಂಬಂಧ ಗ್ರಾಮಸ್ಥರು ಕುಂದಗೋಳದ ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿಲು ಬಂದಾಗ ಕಚೇರಿಯಲ್ಲಿ ಯಾವೊಬ್ಬ ಅಧಿಕಾರಿಯೂ ಇಲ್ಲದ ಕಾರಣ ಆಕ್ರೋಶಗೊಂಡು ಕೆಲಕಾಲ ಪ್ರತಿಭಟನೆ ನಡೆಸಿದರು.
ಯಾದವಾಡ: ಶೌಚಾಲಯ ಸಾಮಗ್ರಿ ವಿತರಣೆ
ಧಾರವಾಡ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ತಾಲೂಕಿನ ಯಾದವಾಡ ಗ್ರಾಮದಲ್ಲಿ ಇತ್ತಿಚೇಗೆ ಹಮ್ಮಿಕೊಂಡಿದ್ದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಲ್ಲಿ 45 ಫಲಾನುಭವಿಗಳಿಗೆ ಶೌಚಾಲಯ ಸಾಮಗ್ರಿ ವಿತರಿಸಲಾಯಿತು. ಗ್ರಾಪಂ ಮಾಜಿ ಅಧ್ಯಕ್ಷ ಮಡಿವಾಳಪ್ಪ ದಿಂಡಲಕೊಪ್ಪ ಮಾತನಾಡಿ, ಗ್ರಾಮೀಣ ಜನತೆ ಶೌಚಾಲಯ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು. ಗ್ರಾಪಂ ಅಧ್ಯಕ್ಷ ನಿವೇದಿತಾ ಕಣಜನವರ, ಮಂಜುಳಾ ಮಾಕನ್ನವರ, ಕವಿತಾ ಹಳ್ಳಿಗೇರಿಮಠ, ಪಾರ್ವತಿ ಹಳ್ಳಿಗೇರಿಮಠ ಹಾಗೂ ಬಸಮ್ಮ ಇದ್ದರು.
ಗಾಡಾ ಓಡಿಸುವ ಸ್ಪರ್ಧೆ
ಧಾರವಾಡ: ತಾಲೂಕಿನ ಲೋಕೂರಿನಲ್ಲಿ ಶ್ರೀ ಗುರು ಶರಣ ಬಸವೇಶ್ವರ ಯುವಕ ಮಂಡಳ ಹಾಗೂ ಗ್ರಾಮದ ರೈತ ಬಾಂಧವರಿಂದ ಫೆ. 23ರಂದು ಬೆಳಗ್ಗೆ 8ಕ್ಕೆ ರಾಜ್ಯಮಟ್ಟದ ಖಾಲಿ ಗಾಡಾ ಓಡಿಸುವ ಸ್ಪರ್ಧೆ ಹಮ್ಮಿಕೊಂಡಿದೆ. ವೀರಭದ್ರಗೌಡ್ರ ಪಾಟೀಲ ಚಾಲನೆ ನೀಡಲಿದ್ದಾರೆ. ಗುರುಶರಣ ಬಸವೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಭೀಮಣ್ಣ ನರಸಿಂಗನವರ ಅಧ್ಯಕ್ಷತೆ ವಹಿಸಲಿದ್ದಾರೆ. ಫಕ್ಕೀರಗೌಡ್ರು ಪಾಟೀಲ 97418 21246 ಸಂಪರ್ಕಿಸಬಹುದು.
ಇಂದು-ನಾಳೆ ಬಂದ್
ಹುಬ್ಬಳ್ಳಿ: ಬೆಲೆ ಏರಿಕೆ ನಿಯಂತ್ರಣ, ಕಾರ್ಮಿಕರ ಹಕ್ಕು ರಕ್ಷಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ಫೆ. 20 ಹಾಗೂ 21ರಂದು ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿಯೂ ಬಂದ್ ಪ್ರತಿಭಟನೆ ನಡೆಸಲಿವೆ. ಬಿಎಂಎಸ್, ಐಎನ್‌ಟಿಯುಸಿ, ಎಸಿಟಿಯುಸಿ, ಎಚ್‌ಎಂಎಸ್, ಎಲ್‌ಪಿಎಫ್, ಪಿಯುಸಿಸಿ, ಬ್ಯಾಂಕು, ವಿಮಾ, ಅಂಚೆ ನೌಕರರ ಸಂಘಟನೆಗಳು, ಆಟೋ ಚಾಲಕರ ಮತ್ತು ಮಾಲೀಕರ ಸಂಘಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ. ಮುಷ್ಕರದ ಅಂಗವಾಗಿ ಆಟೋ ರಿಕ್ಷಾ ಬಂದ್ ನಡೆಸಲು ಜಿಲ್ಲಾ ಆಟೋ ರಿಕ್ಷಾ ಚಾಲಕರ ಸಂಘ ಹಾಗೂ ಮಾಲೀಕರ ಸಂಘ ನಿರ್ಧರಿಸಿದೆ. ಸಾರ್ವಜನಿಕರಿಗೆ ಅನಾನುಕೂಲವಾಗುತ್ತದೆ ಎಂಬ ಕಾರಣಕ್ಕಾಗಿ ಬಸ್ ಸಂಚಾರ ಸ್ಥಗಿತಗೊಳಿಸಲಾಗುತ್ತಿಲ್ಲ. ಬಸ್ ಎಂದಿನಂತೆ ಸಂಚರಿಸಲಿದೆ ಎಂದು ವಾಕರಾರಸಾ ಸಂಸ್ಥೆಯ ಅಧ್ಯಕ್ಷ ಎಂ.ಎಸ್. ಕರಿಗೌಡ್ರ ಅವರು ತಿಳಿಸಿದ್ದಾರೆ.
ಇಂದು, ನಾಳೆ ಶಾಲೆ - ಕಾಲೇಜಿಗೆ ರಜೆ
ಧಾರವಾಡ: ಫೆ. 20 ಹಾಗೂ 21ರಂದು ವಿವಿಧ ಸಂಘಟನೆಗಳು ಬಂದ್ ಘೋಷಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಹುಬ್ಬಳ್ಳಿ-ಧಾರವಾಡ ಅವಳಿ ನಗರ ವ್ಯಾಪ್ತಿಯ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಉಳಿದಂತೆ ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಸ್ಥಳೀಯ ಪರಿಸ್ಥಿತಿಯನ್ನು ಆಧರಿಸಿ ಶಾಲಾ-ಕಾಲೇಜು ಮುಖ್ಯೋಪಾಧ್ಯಾಯರು ರಜೆ ಘೋಷಿಸುವ ಬಗ್ಗೆ ನಿರ್ಧರಿಸಲು ಸೂಚಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಾ. ಬಿ.ಕೆ.ಎಸ್. ವರ್ಧನ್ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ರವೀಂದ್ರ ರಿತ್ತಿ ತಿಳಿಸಿದ್ದಾರೆ.