ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಬಂದ್‌ಗೆ ಅವಳಿ ನಗರದಲ್ಲಿ ನೀರಸ ಪ್ರತಿಕ್ರಿಯೆ

Mainashree
Updated On : 21 Feb 2013, 10:34 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 20
ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಕಾರ್ಮಿಕ ಸಂಘಟನೆಗಳು ಬುಧವಾರ ರಾಷ್ಟ್ರವ್ಯಾಪಿ ನೀಡಿದ ಬಂದ್ ಕರೆಗೆ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಂದ್ ಕರೆ ಲೆಕ್ಕಿಸದೇ ಸಂಚರಿಸುತ್ತಿದ್ದ ಅಟೋ ರಿಕ್ಷಾ ಸೇರಿದಂತೆ ಮತ್ತಿತರ ವಾಹನಗಳನ್ನು ಒತ್ತಾಯಪೂರ್ವಕವಾಗಿ ತಡೆದ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು, ಅಂತಹ ವಾಹನಗಳ ಚಕ್ರಗಳ ಗಾಳಿ ತೆಗೆದು ಹಾಕಿ ಪ್ರತಿಭಟನೆ ವ್ಯಕ್ತಪಡಿಸಿದ ಘಟನೆಗಳು ಅಲ್ಲಲ್ಲಿ ಸಂಭವಿಸಿದ್ದು ವರದಿಯಾಗಿದೆ.
ಅಂಚೆ ಕಚೇರಿ, ಪೆಟ್ರೋಲ್ ಬಂಕ್ ಬೆಳಗ್ಗೆ ಸಂಪೂರ್ಣ ಬಂದ್ ಆಚರಿಸಿದ್ದರೆ, ಮಧ್ಯಾಹ್ನದ ಹೊತ್ತಿಗೆ ಒಂದೊಂದಾಗಿ ತೆರೆದುಕೊಂಡಿದ್ದರಿಂದ ಸಾರ್ವಜನಿಕರ ಪರದಾಟ ತಪ್ಪಿತು. ಎಲ್‌ಐಸಿ, ಬ್ಯಾಂಕ್, ಶಾಲಾ-ಕಾಲೇಜ್‌ಗಳಿಗೆ ರಜೆ ಘೋಷಿಸಲಾಗಿದ್ದರಿಂದ ವಿದ್ಯಾರ್ಥಿ ಹಾಗೂ ನೌಕರರು ಪ್ರಯಾಣಕ್ಕಾಗಿ ಪರದಾಡುವುದು ತಪ್ಪಿತು. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಬೆಳಗ್ಗೆ ನಗರ ಪ್ರದೇಶದಲ್ಲಿ ಸಂಚಾರ ಆರಂಭಿಸದಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಎಂದಿನಂತೆಯೇ ಸಂಚಾರ ಆರಂಭಿಸಿತ್ತು. ಇದರಿಂದಾಗಿ ಹಳ್ಳಿಗಳಿಂದ ತರಕಾರಿ ಸೇರಿದಂತೆ ಮತ್ತಿತರ ಕೆಲಸ ಕಾರ್ಯಗಳಿಗೆ ನಗರಕ್ಕೆ ಬರುವ ಜನರಿಗೆ ಯಾವುದೇ ರೀತಿಯ ತೊಂದರೆಯಾಗಲಿಲ್ಲ.
ಪ್ರತಿಭಟನೆ ಸ್ವರೂಪ ತೀರಾ ಸೆಪ್ಪೆಯಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಂಡ ವಾಕರಸಾ ಸಂಸ್ಥೆ ಹಾಗೂ ಖಾಸಗಿ ವಾಹನಗಳ ಸಂಚಾರ ಮಧ್ಯಾಹ್ನದ ನಂತರ ಎಂದಿನಂತೆ ಇರುವುದು ಕಂಡು ಬಂತು. ಮಹಾನಗರದಲ್ಲಿ ಬೆಳಗಿನ ಜಾವ ಎಂದಿನಂತೆ ಕೆಲ ಪೆಟ್ರೋಲ್ ಬಂಕ್‌ಗಳು ಕಾರ್ಯಾರಂಭ ಮಾಡಿದ್ದವಾದರೂ, ಕಾರ್ಮಿಕ ಸಂಘಟನೆಗಳ ಮುಖಂಡರು ಅವುಗಳನ್ನು ಬಲವಂತವಾಗಿ ಬಂದ್ ಮಾಡಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಎಂ.ಜಿ. ಮಾರ್ಕೆಟ್, ಸುಪರ್ ಮಾರ್ಕೆಟ್, ಭೂಸ್‌ಪೇಟ ಸೇರಿದಂತೆ ಮತ್ತಿತರ ಕಡೆಗಳಲ್ಲಿ ತರಕಾರಿ ಮಾರಾಟ ಎಂದಿನಂತೆ ನಡೆದಿತ್ತು. ಚಹಾ ಹೊಟೇಲ್, ಬಾರ್ ಮತ್ತು ರೆಸ್ಟೋರೆಂಟ್‌ಗಳು ಸೇರಿದಂತೆ ವಿವಿಧ ರೀತಿಯ ವ್ಯಾಪಾರ ವ್ಯವಹಾರಕ್ಕೂ ಬಂದ್‌ನ ಬಿಸಿ ತಟ್ಟಿರಲಿಲ್ಲ.
ವಿವಿಧ ಸಂಘಟನೆಗಳಿಂದ: ಎಐಟಿಯುಸಿ, ಅಂಚೆ ಇಲಾಖೆ ಜಂಟಿ ಕ್ರೀಯಾ ಸಮಿತಿ, ಧಾರವಾಡ ಜಿಲ್ಲಾ ಅಟೋ ರಿಕ್ಷಾ ಚಾಲಕರ ಸಂಘ, ಹುಬ್ಬಳ್ಳಿ ಅಟೋ ರಿಕ್ಷಾ ಮಾಲೀಕರ ಸಂಘ ಹಾಗೂ ಮತ್ತಿತರ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು. ಪ್ರಧಾನ ಅಂಚೆ ಕಚೇರಿ ಬಳಿ ಇರುವ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಮಿಕ ಮುಖಂಡರು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ವ್ಯಾಪಕ ಬಂದೋಬಸ್ತ್: ಬಂದ್ ಸಂದರ್ಭ ಯಾವುದೇ ರೀತಿಯ ಆಸ್ತಿಪಾಸ್ತಿಗೆ ಹಾನಿ ಸಂಭವಿಸಿದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿತ್ತು. ಪ್ರಮುಖ ಪ್ರದೇಶಗಳಲ್ಲಿ ಹಿರಿಯ ಅಧಿಕಾರಿಗಳು ಪೆಟ್ರೋಲಿಂಗ್ ನಡೆಸುವ ಮೂಲಕ ಸಮಾಜ ಘಾತಕ ಶಕ್ತಿಗಳು ಬಾಲ ಬಿಚ್ಚದಂತೆ ನೋಡಿಕೊಂಡರು.
ಡಿಸಿಪಿಗಳಾದ ಎಸ್.ಎಂ. ಪ್ರತಾಪನ್, ಶ್ರೀನಾಥ ಜೋಶಿ, ಎಸಿಪಿಗಳಾದ ಎ.ಆರ್. ಬಡಿಗೇರ, ದೇಸೂರ, ಎನ್.ಎಸ್. ಪಾಟೀಲ ಸೇರಿದಂತೆ ಇನ್‌ಸ್ಪೆಕ್ಟರ್‌ಗಳು ಆಯಾಕಟ್ಟಿನ ಪ್ರದೇಶಗಳಲ್ಲಿ ಸತತ ಪೆಟ್ರೋಲಿಂಗ್ ನಡೆಸುವ ಮೂಲಕ ಸಮಾಜಘಾತಕ ಶಕ್ತಿಗಳ ಮೇಲೆ ಹದ್ದಿನ ಕಣ್ಣಿರಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement