ಬಂದ್‌ಗೆ ಧಾರವಾಡದಲ್ಲಿ ಬೆಂಬಲ ಇಲ್ಲ
ಧಾರವಾಡ: ಸುಮಾರು 14 ಕಾರ್ಮಿಕ ಸಂಘಟನೆಗಳು ದೇಶಾದ್ಯಂತ ಎರಡು ದಿನ ಘೋಷಿಸಿದ್ದ ಭಾರತ ಬಂದ್‌ಗೆ ಮೊದಲ ದಿನ ಬುಧವಾರ ಧಾರವಾಡದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೆಲವೇ ಕೆಲವು ಸಂಘಟನೆಗಳು ತಮ್ಮ ಬೇಡಿಕೆಗಳಿಗೆ ಒಂದೆಡೆ ಸೇರಿ ಪ್ರತಿಭಟಿಸಿದ್ದನ್ನು ಬಿಟ್ಟರೆ, ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಬಂದ್ ಪರಿಣಾಮ ಎಷ್ಟೂ ಆಗಲಿಲ್ಲ. ನಗರದಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೂ ಬಸ್ ಸಂಚಾರ ಎಂದಿನಂತೆ ಸುಗಮವಾಗಿತ್ತು. ಸಂಚಾರ ವ್ಯವಸ್ಥೆಯಲ್ಲಿ ಪ್ರಯಾಣಿಕರಿಗೆ ಯಾವುದೇ ತೊಂದರೆಗಳಾಗಲಿಲ್ಲ. ಆಟೋಗಳು ಚಾಲೂ ಇದ್ದವು. ಬಂದ್ ಹಿನ್ನೆಲೆಯಲ್ಲಿ ಕೆಲ ಹೊತ್ತು ಮಾತ್ರ ಬಸ್ ಇರಲಿಲ್ಲ. ಇನ್ನು, ಮಾರುಕಟ್ಟೆಯಲ್ಲಿ ಕೆಲವೇ ಕೆಲ ಅಂಗಡಿ ಮುಚ್ಚಿದ್ದನ್ನು ಬಿಟ್ಟರೆ ವ್ಯಾಪಾರ ಎಂದಿನಂತಿತ್ತು. ನಗರದ ಶಾಲೆ ಹಾಗೂ ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ಎರಡು ದಿನ ರಜೆಯಂತೂ ಮುಂಚೆಯೇ ಘೋಷಿಸಿದ್ದರು. ರಾಜ್ಯ ಸರ್ಕಾರಿ ನೌಕರರು ನಿತ್ಯದಂತೆ ಕೆಲಸ ಮಾಡಿದರು.