ಮುಂದಿನ ಜನ್ಮದಲ್ಲಾದರೂ ಭ್ರಷ್ಟಾಚಾರ ನಿರ್ಮೂಲನೆ ಮಾಡಿಯೇ ತೀರುತ್ತೇನೆ
ಕನ್ನಡಪ್ರಭ ವಾರ್ತೆ, ಧಾರವಾಡ, ಫೆ. 20
ಒಂದಲ್ಲ, ಎರಡಲ್ಲ, ಐವತ್ತು ವರ್ಷಗಳಾಗದರೂ ಪರವಾಗಿಲ್ಲ. ಈ ಜನ್ಮದಲ್ಲಾಗದಿದ್ದರೆ ಮುಂದಿನ ಜನ್ಮದಲ್ಲಾದರೂ ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣ ಮಾಡಿಯೇ ತಿರುತ್ತೇನೆಂದು ಪತಂಜಲಿ ಯೋಗ ಪೀಠದ ಬಾಬಾ ರಾಮದೇವ್ ಭಾವುಕರಾಗಿ ನುಡಿದರು.
ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣವಾಗಬೇಕಾದರೆ ಶಾಸಕರಿಂದ ಹಿಡಿದು ಸಂಸದರವರೆಗೆ, ಮುಖ್ಯಮಂತ್ರಿಯಿಂದ ಪ್ರಧಾನಮಂತ್ರಿವರೆಗೆ ಎಲ್ಲರೂ ಯೋಗಿಗಳೇ ಜನಪ್ರತಿನಿಧಿಗಳಾಗಬೇಕು. ಅಲ್ಲದೇ, ಎಲ್ಲಡೆ ಯೋಗ ಸಂತಾನದ ಅವಶ್ಯಕತೆಯಿದೆ ಎಂದರು. ಕರ್ನಾಟಕ ವಿವಿ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಬುಧವಾರ ನಡೆದ ಭಾರತೀಯ ತತ್ವಶಾಸ್ತ್ರ ಕಾಂಗ್ರೆಸ್ನ 86ನೇ ಅಧಿವೇಶನದ ಸಮಾರೋಪದಲ್ಲಿ ಮಾತನಾಡಿದ ಅವರು, ಯೋಗ ಆಧ್ಯಾತ್ಮಿಕ, ಸಾಮಾಜಿಕ, ರಾಷ್ಟ್ರೀಯ ಮತ್ತು ವಿಶ್ವವಿರಾಟ ಸ್ವರೂಪ ಹೊಂದಿದ್ದು, ಚಿತ್ತವನ್ನು ಪ್ರಶಾಂತಗೊಳಿಸಿ ಶರೀರದ ಮೂಲ ಅಗತ್ಯಗಳಿಗೆ ಜ್ಞಾನಪೂರ್ವಕ, ಶ್ರದ್ಧಾ ಪೂರ್ವಕ ಹಾಗೂ ಆಹಾರ ಪೂರ್ವಕ ಯೋಗ ಸಮಾಧಿ, ಸಮಾಧಾನ ನೀಡುತ್ತದೆ. ಈ ಎಲ್ಲವನ್ನು ಹೊಂದಿದ ವ್ಯಕ್ತಿ ಜನಪ್ರತಿನಿಧಿಯಾದರೆ ಸಮಾಜ ಸೌಖ್ಯವಾಗಿ ನಡೆಯುತ್ತದೆ ಎಂದರು.
ಆದರ್ಶದ ಕೊರತೆಯಿಂದ ಅನೇಕರು ಭ್ರಷ್ಟರಾಗುತ್ತಿದ್ದಾರೆ. ಕೆಲವರು ಮಾಂಸಹಾರ, ಬೀಡಿ, ಸಿಗರೇಟ್ದಿಂದ ಭ್ರಷ್ಟರಾದರೆ, ಇನ್ನು ಕೆಲವರು ಆಹಾರದಿಂದ ಭ್ರಷ್ಟರಾಗುತ್ತಿದ್ದಾರೆ. ಇನ್ನು ಕೆಲವರು ಪರ ಪುರುಷರ ಹಾಗೂ ಪರ ಸ್ತ್ರೀಯರ ಸಂಪರ್ಕದಿಂದ ಭ್ರಷ್ಟರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ವೈಯಕ್ತಿಕ ಜೀವನದ ದುಷ್ಪರಿಣಾಮ ಸಮಾಜದ ಮೇಲಾಗುತ್ತಿರುವುದರಿಂದ ಮುಖ್ಯಮಂತ್ರಿ, ಪ್ರಧಾನ ಮಂತ್ರಿಯ ಭ್ರಷ್ಟಾಚಾರದಿಂದಾಗಿ ಭಾರತ ವಿಶ್ವದೆಲ್ಲೆಡೆ ತಲೆ ತಗ್ಗಿಸುವಂತಾಗಿದೆ ಎಂದರು.
ದೇಶದ ಸುಧಾರಣೆಗೆ ಐದು ಪಂಚಸೂತ್ರಗಳ ಅಗತ್ಯವಿದ್ದು, ಅದರಲ್ಲಿ ಕೃಷಿ, ಕೈಗಾರಿಕೆ, ಸಂಶೋಧನೆ, ಮ್ಯಾನೇಜ್ಮೆಂಟ್ ಹಾಗೂ ದೈವಿಕತ್ವ ಒಂದುಗೂಡಿಸಿ ವೈದಿಕ ವಿಜ್ಞಾನದ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದರು.
ಕುಲಪತಿ ಪ್ರೊ. ಎಚ್.ಬಿ. ವಾಲಿಕಾರ, ಪ್ರೊ. ಎಂ.ಎ. ಜಾಲಿಹಾಳ, ಪ್ರೊ. ಕೆ.ವಿ. ಜುಕ್ತಿಮಠ, ಪ್ರೊ. ಪಿ.ಆರ್. ಶ್ರೀವಾಸ್ತವ, ಪ್ರೊ. ಎಂ.ಜಿ. ಮಹಾದೇವಪ್ಪ, ಪ್ರೊ.ಯು.ಎಸ್. ಬ್ರಿಷ್ಟ್, ವಿಆರ್ಎಲ್ ಸಮೂಹ ಸಂಸ್ಥೆಯ ಅಧ್ಯಕ್ಷ ವಿಜಯ ಸಂಕೇಶ್ವರ ಇದ್ದರು.