ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಶುರುವಾಯ್ತು ಪಕ್ಷಾಂತರ: ಕೆಜೆಪಿಗೆ ಗುನ್ನಾ

Mainashree
Updated On : 21 Feb 2013, 10:34 am

 ಪ್ರಕಾಶ ಎಸ್. ಶೇಟ್
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯ ಹೊಸ್ತಿಲಲ್ಲಿ ಅವಕಾಶವಾದಿ ರಾಜಕಾರಣ ಗರಿಗೆದರಿದೆ. ಕೆಜೆಪಿಯಲ್ಲಿ ಸಕ್ರೀಯವಾಗಿದ್ದ ವೆಂಕಟೇಶ ಮೇಸ್ತ್ರೀ, ಪುಷ್ಪಾ ಹೊಸಮನಿ ಬಿಜೆಪಿಯತ್ತ ಯೂ ಟರ್ನ್ ಆಗಿದ್ದಾರೆ.
ನಿಜ, ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ ಎಂಬುದನ್ನು ಇಬ್ಬರೂ ಪಾಲಿಕೆಯ ನಿರ್ಗಮಿತ ಸದಸ್ಯರು ಸಾಬೀತು ಮಾಡಿದ್ದಾರೆ. ಬಿಜೆಪಿಯಿಂದ ಕೆಜೆಪಿಗೆ, ಕೆಜೆಪಿಯಿಂದ ಪುನಃ ಬಿಜೆಪಿಗೆ ಹಾರಲು ಸಿದ್ಧರಾಗಿದ್ದಾರೆ. ತನ್ಮೂಲಕ ಇವರಿಬ್ಬರ ಅವಕಾಶವಾದಿ ರಾಜಕಾರಣದ ನಿಜ ಬಣ್ಣ ಬಯಲಾಗಿದೆ.
ಕೆಜೆಪಿಗೆ ಬೈ ಬಿಜೆಪಿಗೆ ಜೈ: ಬಿಜೆಪಿಯಿಂದ ಸಿಡಿದೆದ್ದ ಯಡಿಯೂರಪ್ಪ ಕೆಜೆಪಿ ಹುಟ್ಟು ಹಾಕಿದ್ದೇ ತಡ ವೆಂಕಟೇಶ ಮೇಸ್ತ್ರಿ ಹಾಗೂ ಪುಷ್ಪಾ ಹೊಸಮನಿ ಬಿಜೆಪಿಗೆ ಗುಡ್ ಬೈ ಹೇಳಿದ್ದರು. ಸಿಎಂ ಶೆಟ್ಟರ್, ಜಿಲ್ಲಾಧ್ಯಕ್ಷ ಮಹೇಶ ಟೆಂಗಿನಕಾಯಿ ವಿರುದ್ಧವಾಗಿ ಆರೋಪದ ಸುರಿಮಳೆ ಗೈದಿದ್ದರು. ಭಾನುವಾರವಷ್ಟೇ ಬಿ. ಎಸ್. ಯಡಿಯೂರಪ್ಪನವರ ಉಪಸ್ಥಿತಿಯಲ್ಲಿ ನಡೆದ ಕೆಜೆಪಿ ಸಭೆಯ ವೇದಿಕೆಯಲ್ಲಿ ಮಿರಿ ಮಿಂಚಿ ಓಡಾಡುತ್ತಿದ್ದ ಇವರು ಇದ್ದಕ್ಕಿದ್ದಂತೆ ನಿಷ್ಠೆ ಹಾಗೂ ಪಕ್ಷವನ್ನೂ ಬದಲಾಯಿಸಲು ಮುಂದಾಗಿದ್ದಾರೆ.
ಗುಟ್ಟು ರಟ್ಟು: ಬುಧವಾರ ಬೆಳ್ಳಂಬೆಳಗ್ಗೆ ಸಂಸದ ಪ್ರಹ್ಲಾದ ಜೋಶಿ ಅವರ ಮನೆಗೆ ಗುಟ್ಟಾಗಿ ಹೋಗಿ ಜೋಶಿಯವರನ್ನು ಭೇಟಿ ಮಾಡಿರುವ ವೆಂಕಟೇಶ ಮೇಸ್ತ್ರಿ ಹಾಗೂ ಪುಷ್ಪಾ ಹೊಸಮನಿಯವರ ಪತಿ ಶಿವನಗೌಡ ಹೊಸಮನಿ ಪುನಃ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ವೆಂಕಟೇಶ ಮೇಸ್ತ್ರಿ ಹಾಗೂ ಹೊಸಮನಿ ಬೆಂಬಲಿಗರು ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಹೇಶ ಟೆಂಗಿನಕಾಯಿ ಅವರ ಮನೆಗೂ ಹೋಗಿ ಮಾತುಕತೆ ಮಾಡಿದ್ದಾರೆ.
ನಾವು ತಿಳಿಯದೇ ತಪ್ಪು ಮಾಡಿದ್ದೇವೆ, ನಾವು ಕೆಜೆಪಿ ಬಿಟ್ಟು ಬಿಜೆಪಿಯಲ್ಲಿಯೇ ಮುಂದುವರಿಯುತ್ತೇವೆ ಎಂದು ಜೋಶಿಯವರಲ್ಲಿ ಕೇಳಿಕೊಂಡಿದ್ದಾರೆ. ಸಾಲದಕ್ಕೆ ಪ್ರಸ್ತುತ ತಾವು ಪ್ರತಿನಿಧಿಸುತ್ತಿರುವ ವಾರ್ಡ್‌ನಿಂದಲೇ ಟಿಕೆಟ್ ನೀಡಬೇಕು ಎಂದು ಕೇಳಿಕೊಂಡಿರುವ ಗುಟ್ಟು ರಟ್ಟಾಗಿದೆ.
ಚೆಂಡು ಸಿಎಂ ಅಂಗಳದಲ್ಲಿ: ವೆಂಕಟೇಶ ಮೇಸ್ತ್ರಿ ಹಾಗೂ ಶಿವನಗೌಡ ಅವರ ಕೋರಿಕೆಗೆ ಸಂಸದ ಜೋಶಿ ಹಾಗೂ ಜಿಲ್ಲಾಧ್ಯಕ್ಷ ಮಹೇಶ ಟೆಂಗಿನಕಾಯಿ ಮನ್ನಣೆ ನೀಡಿದ್ದಾರೆಯಾದರೂ ಅಂತಿಮ ತೀರ್ಮಾನ ಸಿಎಂ ಶೆಟ್ಟರ್ ನಗರಕ್ಕೆ ಆಗಮಿಸಿದ ಬಳಿಕವೇ ಚರ್ಚಿಸಿ ತಿಳಿಸುವುದಾಗಿ ಹೇಳಿದ್ದಾರೆ. ಸಿಎಂ ಶೆಟ್ಟರ್ ಕೂಡ ಇವರಿಬ್ಬರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಹಸಿರು ನಿಶಾನೆ ತೋರಿಸಲಿದ್ದಾರೆ. ಸಿಎಂ ತವರು ಕ್ಷೇತ್ರದಲ್ಲಿ ಕೆಜೆಪಿ ಬಲ ತಗ್ಗಿದಷ್ಟು  ಹೆಚ್ಚು ಲಾಭ ಎಂಬ ಲೆಕ್ಕಾಚಾರವೂ ಇವರಿಬ್ಬರನ್ನು ಪುನಃ ಬಿಜೆಪಿಗೆ ಸೇರಿಸಿಕೊಳ್ಳಲು ಕಾರಣವಾಗಲಿದೆ.
ಟಿಕೆಟ್ ಕಾರಣ: ಅಷ್ಟಕ್ಕೂ ವೆಂಕಟೇಶ ಮೇಸ್ತ್ರಿ, ಪುಷ್ಪಾ ಹೊಸಮನಿರೊಡಗೂಡಿ ಪುನಃ ಬಿಜೆಪಿ ಸೇರಲಿಕ್ಕೂ ಬಲವಾದ ಕಾರಣವಿದೆ. ಅದೇನೆಂದರೆ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರದಿಂದ ಕೆಜೆಪಿ ಟಿಕೆಟ್ ಬಯಸಿಯೇ ವೆಂಕಟೇಶ ಮೇಸ್ತ್ರಿ ಬಿಜೆಪಿಗೆ ವಿದಾಯ ಹೇಳಿದ್ದರು. ಆದರೆ, ಪ್ರಸ್ತುತ ಬೆಳವಣಿಗೆಯಲ್ಲಿ ಶಂಕರಣ್ಣ ಬಿಜವಾಡ ಅವರಿಗೆ ಈ ಕ್ಷೇತ್ರದಿಂದ ಕೆಜೆಪಿ ಸಿಗುವುದು ಖಚಿತವಾಗಿದೆ. ಇದನ್ನು ಅರಿತಿರುವ ಮೇಸ್ತ್ರಿ ಕೆಜೆಪಿಯಲ್ಲಿ ಇನ್ನುಳಿದರೆ ಲಾಭವಿಲ್ಲವೆಂದು ಮತ್ತೆ ಬಿಜೆಪಿಯತ್ತ ಮುಖ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement