ವ್ಯಾಪಾರೀಕರಣವಾಗುತ್ತಿರುವ ಯೋಗ: ಪ್ರೊ. ವೈದ್ಯನಾಥನ್ ವಿಷಾದ
ಅಳ್ನಾವರ (ಧಾರವಾಡ): ಭಾರತೀಯ ಪರಂಪರೆಯಲ್ಲಿ ಯೋಗಕ್ಕೆ ಉನ್ನತ ಸ್ಥಾನವಿದೆ. ಆದರೆ, ಪ್ರಸ್ತುತ ಯೋಗವನ್ನು ಪ್ರದರ್ಶನದ ವಸ್ತುವಾಗಿಸಲಾಗಿದೆ. ಅಲ್ಲದೇ, ಅದನ್ನು ವ್ಯಾಪಾರೀಕರಣ ಮಾಡಲಾಗುತ್ತಿದೆ. ಆಧುನಿಕತೆಯ ಭರದಲ್ಲಿ ಯೋಗವನ್ನೂ ಸ್ಪರ್ಧಾತ್ಮಕವಾಗಿಸುತ್ತಿರುವ ಪ್ರಯತ್ನಗಳು ಸರಿಯಲ್ಲ ಎಂದು ರಾಜ್ಯ ಕ್ರೀಡಾ ನೀತಿ ನಿರೂಪಣಾ ಸದಸ್ಯ ಪ್ರೊ.ಎಲ್.ಆರ್. ವೈದ್ಯನಾಥನ್ ಹೇಳಿದರು. ಅಳ್ನಾವರದ ಉಮಾ ಭವನದಲ್ಲಿ ಶುಕ್ರವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕವಿವಿ ಕ್ರೀಡಾ ಮತ್ತು ದೈಹಿಕ ಶಿಕ್ಷಣ ವಿಭಾಗದ ಏರ್ಪಡಿಸಿದ್ದ ಎರಡು ದಿನದ ಆರೋಗ್ಯ ಕಾಪಾಡುವಲ್ಲಿ ಯೋಗ ವಿಜ್ಞಾನ ಹಾಗೂ ಏರೋಬಿಕ್ ವ್ಯಾಯಾಮ ಪಾತ್ರ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಪ್ರತಿದಿನ 3.50 ಕೋಟಿ ಜನ ವಿವಿಧ ರೋಗಗಳಿಂದ ಆಸ್ಪತ್ರೆಗೆ ಭೇಟಿ ನೀಡುತ್ತಿರುವುದು ಕಳವಳಕಾರಿ ಸಂಗತಿ. ನಮ್ಮ ಜೀವನಮಟ್ಟ ಮತ್ತು ಆರೋಗ್ಯವನ್ನು ಸುಧಾರಿಸಿಕೊಳ್ಳುವ ನಿಟ್ಟಿನಲ್ಲಿ ಯೋಗ ಮತ್ತು ಏರೋಬಿಕ್ ವ್ಯಾಯಾಮ ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದರು. ಕವಿವಿ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ನಿರ್ದೇಶಕ ಡಾ. ಪ್ರತಾಪಸಿಂಗ್ ತಿವಾರಿ ಮಾತನಾಡಿದರು. ಪ್ರಾಚಾರ್ಯ ಬಿ.ಎ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಡಾ. ಎಲ್.ಆರ್. ವೈದ್ಯನಾಥನ್, ಡಾ. ಎಚ್.ಎಸ್. ಹಸ್ರಾಣಿ, ಡಾ. ಆನಂದ ನಾಡಗೀರ ಅವರನ್ನು ಸನ್ಮಾನಿಸಲಾಯಿತು. ದೈಹಿಕ ಶಿಕ್ಷಣ ನಿರ್ದೇಶಕ ಶ್ರೀಪಾಲ ಕುರಕುರಿ ಸ್ವಾಗತಿಸಿದರು. ಡಾ. ಎಂ.ಡಿ. ವಕ್ಕುಂದ ನಿರೂಪಿಸಿದರು.